ADVERTISEMENT

ಬಹುಮತ ಸಾಬೀತಿಗೆ ಕಾಲಮಿತಿ: ‘ಜಾರಿಯಾಗಲಿದೆ ಕಾನೂನು’

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಬಹುಮತ ಸಾಬೀತಿಗೆ ಕಾಲಮಿತಿ: ‘ಜಾರಿಯಾಗಲಿದೆ ಕಾನೂನು’
ಬಹುಮತ ಸಾಬೀತಿಗೆ ಕಾಲಮಿತಿ: ‘ಜಾರಿಯಾಗಲಿದೆ ಕಾನೂನು’   

ಮೈಸೂರು: ‘ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶನಿವಾರ ಸಂಜೆಗೆ ಸಮಯ ನಿಗದಿಪಡಿಸಿರುವುದು ಉತ್ತಮವಾದ ಆದೇಶ. ಇದೇ ಮುಂದೆ ಕಾನೂನು ಆಗಲಿದೆ’ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಇಲ್ಲಿ ಶುಕ್ರವಾರ ಹೇಳಿದರು.

‘ಸುಪ್ರೀಂ ಕೋರ್ಟ್‌ ಆದೇಶವು ವಿಧಿ 141ರ ಪ್ರಕಾರ ಈ ದೇಶದ ಕಾನೂನು ಆಗಲಿದೆ. ಇದರಿಂದ ಎಲ್ಲ ರಾಜ್ಯಗಳಿಗೂ ಅನುಕೂಲವಾಗಲಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಎಸ್‌.ಆರ್.ಬೊಮ್ಮಾಯಿ ಅವರ ಪ್ರಕರಣದಲ್ಲಿ, ಹೆಚ್ಚು ಸ್ಥಾನ ಪಡೆದ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕೆಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಹೀಗಾಗಿ ಬಿಜೆಪಿಯನ್ನು ರಾಜ್ಯಪಾಲರು ಆಹ್ವಾನಿಸಿದ್ದು ಸರಿಯಾಗಿದೆ. ಆದರೆ, ವಿಶ್ವಾಸಮತ ಸಾಬೀತಿಗೆ ಹೆಚ್ಚಿನ ಸಮಯ ಕೊಟ್ಟಿದ್ದು ಸರಿಯಲ್ಲ. ಸದ್ಯ ಕಡಿಮೆ ಅವಧಿ ಕೊಟ್ಟಿರುವುದರಿಂದ ಶಾಸಕರ ಖರೀದಿ ತಡೆಯಬಹುದಾಗಿದೆ ಎಂದರು.

ADVERTISEMENT

ರಾಜ್ಯದ ಇಂದಿನ ರಾಜಕೀಯ ಪರಿಸ್ಥಿತಿಗೆ ಮತದಾರರು ಕಾರಣ. ಸರಿಯಾಗಿ ಮತ ಚಲಾಯಿಸಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತಿರಲಿಲ್ಲ. ಸರಿಯಾದ ಪ್ರತಿನಿಧಿ ಸಿಗದಿದ್ದರೆ ನೋಟಾ ಚಲಾಯಿಸಿ. ಇದರಿಂದ ಚುನಾವಣೆಗೆ ನಿಲ್ಲುವವರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.

‘ಅಕ್ರಮ ಗಣಿಗಾರಿಕೆ ಕುರಿತು, ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗ ನಾನು ಕೊಟ್ಟ ವರದಿಯನ್ನು ಜಾರಿಗೆ ತರಲಿಲ್ಲ. ನಂತರ ಬೆಂಗಳೂರಿನಿಂದ ಬಳ್ಳಾರಿವರೆಗೆ ಕಾಂಗ್ರೆಸ್‌ ಮುಖಂಡರು ಪಾದಯಾತ್ರೆ ಮಾಡಿದರು. ಆದರೆ, ಅಧಿಕಾರಕ್ಕೆ ಬಂದ ಮೇಲೂ ಕ್ರಮ ಕೈಗೊಳ್ಳಲಿಲ್ಲ. ದುರಂತ ಎಂದರೆ, ಲೋಕಾಯುಕ್ತಕ್ಕೆ ಇದ್ದ ಅಧಿಕಾರವನ್ನು ಎಸಿಬಿಗೆ ಕೊಟ್ಟಿದ್ದಾರೆ. ತಮಾಷೆ ಎಂದರೆ, ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಲೋಕಾಯುಕ್ತವನ್ನು ಬಲಿಷ್ಠಗೊಳಿಸುತ್ತೇವೆ ಎನ್ನುವ ಭರವಸೆಯನ್ನು ಪ್ರಮುಖ ಪಕ್ಷಗಳು ಕೊಟ್ಟಿದ್ದವು. ಪ್ರಜಾಪ್ರಭುತ್ವದಲ್ಲಿ ಉತ್ತಮ ಆಡಳಿತ ಇರಬೇಕಾದರೆ ರಾಜ್ಯದಲ್ಲಿ ಬಲಿಷ್ಠ ಲೋಕಾಯುಕ್ತ ಇರಬೇಕು’ ಎಂದರು.

ಚುನಾವಣೆಗಳಲ್ಲಿ ಒಬ್ಬರು, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು. ಎರಡೂ ಕಡೆ ಗೆದ್ದರೆ ಮತ್ತೆ ಚುನಾವಣೆ ಅನಿವಾರ್ಯವಾಗುತ್ತದೆ. ಆಗ ವೆಚ್ಚದ ಹೊರೆ ನಮ್ಮ ಮೇಲೇ ಬೀಳುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.