ADVERTISEMENT

ವಂಚಕನಿಗೆ ಸಿದ್ದರಾಮಯ್ಯ ರಕ್ಷಣೆ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2018, 20:12 IST
Last Updated 6 ಮೇ 2018, 20:12 IST
ಮಾಧ್ಯಮಗಳಿಗೆ ಬಿಜೆಪಿ ಬಿಡುಗಡೆ ಮಾಡಿರುವ ಚಿತ್ರ
ಮಾಧ್ಯಮಗಳಿಗೆ ಬಿಜೆಪಿ ಬಿಡುಗಡೆ ಮಾಡಿರುವ ಚಿತ್ರ   

ಬೆಂಗಳೂರು: ‘ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಜನರಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್‌ ಈಶ್ವರನ್‌ ವಂಚನೆ ಜಾಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಾಯ ಮಾಡಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಸಂಬೀತ್‌ ಪಾತ್ರ ಆರೋಪಿಸಿದರು.

ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚೀನಾದಲ್ಲಿ 2013ರಲ್ಲಿ ನಡೆದ ವಿಶ್ವ ಆರ್ಥಿಕ ಒಕ್ಕೂಟ, ಐಎಂಎಫ್‌ ಶೃಂಗಸಭೆ ವೇಳೆ ಸಿದ್ದರಾಮಯ್ಯ ಅವರನ್ನು ವಿಜಯ್‌ ಈಶ್ವರನ್‌ ಭೇಟಿ ಮಾಡಿದ್ದರು. ಭೇಟಿಯ ವೇಳೆ ಪೆಟ್ಟಿಗೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು’ ಎಂದರು.

‘ಭಾರತದಲ್ಲಿ ಕ್ಯು–ನೆಟ್‌ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿರುವ ಕ್ಯುಐ ಕಂಪನಿ ಲಕ್ಷಾಂತರ ಜನರಿಂದ ₹20 ಸಾವಿರ ಕೋಟಿಗಿಂತಲೂ ಹೆಚ್ಚು ಸಂಗ್ರಹಿಸಿ ವಂಚಿಸಿದೆ. ಸಂಸ್ಥೆಯ ಮುಖ್ಯಸ್ಥ ವಿಜಯ್‌ ಈಶ್ವರನ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಈ ಸಂಸ್ಥೆಯ ಯೋಜನೆಗಳು ದೇಶದ ಭದ್ರತೆಗೆ ಬೆದರಿಕೆಯಾಗಿವೆ ಎಂದು ತನಿಖಾ ಸಂಸ್ಥೆ ಹೇಳಿದೆ. ವಿಜಯ್‌ ಅವರನ್ನು 2009ರಲ್ಲೇ ‘ತಲೆಮರೆಸಿಕೊಂಡ ಆರೋಪಿ’ ಎಂದು ಘೋಷಿಸಲಾಗಿತ್ತು. ವಂಚನೆಗೊಳಗಾದ ಜನರು ಪೊಲೀಸ್‌ ಠಾಣೆಯಮೆಟ್ಟಿಲೇರಿದ್ದರೂ ಎಫ್‌ಐಆರ್‌ ದಾಖಲಿಸಿಕೊಂಡಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಎಫ್‌ಐಆರ್‌ಗಳು ದಾಖಲಾಗಿವೆ’ ಎಂದರು.

ADVERTISEMENT

ಸಿದ್ದರಾಮಯ್ಯ ಅವರಿಗೆ ಸಂಬೀತ್‌ ಪಾತ್ರ ಪ್ರಶ್ನೆ

* ವಂಚಿಸಿ ಪರಾರಿಯಾಗಿರುವ ವಿಜಯ್‌ ಈಶ್ವರನ್‌ ನಿಮಗೆ ಗೊತ್ತಿಲ್ಲವೇ?

* ಚೀನಾದಲ್ಲಿ ಅವರನ್ನು ಭೇಟಿಯಾಗಿಲ್ಲ ಎನ್ನುವುದಾದರೆ, ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದ್ದೇಕೆ? ಅವರು ಕರ್ನಾಟಕದಲ್ಲಿ ಹೂಡಿಕೆ ಮಾಡಿದ ಹಣವೆಷ್ಟು?

* ಬೆಲೆಬಾಳುವ ಆ ಉಡುಗೊರೆ ಏನು? ಅದು ಹ್ಯೂಬ್ಲೊ ವಾಚ್‌ ಇರಬಹುದೇ?

* ಸಾವಿರಾರು ದೂರುಗಳನ್ನು ನೀಡಿದರೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಕ್ಯು–ನೆಟ್‌ ಸಂಸ್ಥೆಯನ್ನು ರಕ್ಷಿಸಿದ್ದೇಕೆ?

‘ವಿಜಯ್‌ ಈಶ್ವರನ್‌ ಯಾರೆಂದು ಗೊತ್ತಿಲ್ಲ’

ಮೈಸೂರು: ‘ವಿಜಯ್‌ ಈಶ್ವರನ್‌ ಯಾರೆಂಬುದು ನನಗೆ ಗೊತ್ತಿಲ್ಲ. ಬಿಜೆಪಿ ಮುಖಂಡರ ಸುಳ್ಳು ಆರೋಪಗಳಿಗೆ ಉತ್ತರ ಕೊಡುವ ಅವಶ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನನ್ನ ವಿರುದ್ಧ ಮಾತನಾಡಲು ಅವರಿಗೆ ಯಾವುದೇ ವಿಷಯ ಇಲ್ಲ. ಹೀಗಾಗಿ, ವಾಚ್‌ ವಿಚಾರ ಹಿಡಿದುಕೊಂಡಿದ್ದಾರೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಹಾಕಿಕೊಂಡಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕೋಟ್ ಕೊಟ್ಟಿದ್ದು ಯಾರು? ಅದಕ್ಕೆ ಅವರು ತೆರಿಗೆ ಕಟ್ಟಿದ್ದರೇ? ಜನರಿಂದ ಟೀಕೆ ವ್ಯಕ್ತವಾದ ಮೇಲೆ ಅದನ್ನು ಹರಾಜು ಹಾಕಿದರು. ಇದಕ್ಕೆ ಬಿಜೆಪಿಯವರು ಮೊದಲು ಉತ್ತರ ಕೊಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.