ADVERTISEMENT

ಹಣ ಹಂಚಿದ ಸಿದ್ದರಾಮಯ್ಯ: ಆಯೋಗಕ್ಕೆ ಜೆಡಿಎಸ್‌ ದೂರು

​ಪ್ರಜಾವಾಣಿ ವಾರ್ತೆ
Published 11 ಮೇ 2018, 19:30 IST
Last Updated 11 ಮೇ 2018, 19:30 IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ರಾತ್ರಿ ಬಹಳ ಹೊತ್ತಿನವರೆಗೆ ಪ್ರಚಾರ ನಡೆಸಿ ಹಣ ಮತ್ತು ಇತರ ವಸ್ತುಗಳನ್ನು ಹಂಚಿದ್ದಾರೆ ಎಂದು ಜೆಡಿಎಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಇದಕ್ಕಾಗಿ ಅವರು ಆಡಳಿತ ಯಂತ್ರವನ್ನು ಬಳಸಿಕೊಂಡಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಏಜೆಂಟ್‌ ಜಿಲ್ಲಾ ಚುನಾವಣಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ. ಅದರ ಒಂದು ಪ್ರತಿಯನ್ನು ಲಗತ್ತಿಸಿದ್ದು, ತಕ್ಷಣವೇ ಕ್ರಮ ಜರುಗಿಸಬೇಕು ಎಂದು ಜೆಡಿಎಸ್‌ ವಕ್ತಾರ ರಮೇಶ್‌ ಬಾಬು ಮುಖ್ಯ ಚುನಾವಣಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಯವರು ಸೆಕ್ಷನ್‌ 144 ನ್ನು ಉಲ್ಲಂಘಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯೂ ಆಗಿರುವ ಅವರು ವಾಮ ಮಾರ್ಗದಿಂದ ಗೆಲ್ಲಲು ಅಧಿಕಾರ ಮತ್ತು ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ನ್ಯಾಯ ಸಮ್ಮತ ಚುನಾವಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದೂ ಇದೇ 4 ರಂದು ಪಕ್ಷದ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರೂ ಮನವಿ ಮಾಡಿದ್ದಾರೆ.  ಕ್ಷೇತ್ರದಲ್ಲಿರುವ ಸಹಾಯಕ ಚುನಾವಣಾಧಿಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ. ಮುಖ್ಯಮಂತ್ರಿಗೆ ಸಹಾಯ ಮಾಡಲು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ADVERTISEMENT

ಕ್ಷೇತ್ರದಲ್ಲಿರುವ ಚುನಾವಣಾಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.