ADVERTISEMENT

ಪ್ರಜ್ವಲಿಸಿದ ದೊಡ್ಡಗೌಡರ ಮೊಮ್ಮಗ

ಜಿಲ್ಲೆಯಲ್ಲಿ ಮತ್ತೆ ಪಾರಮ್ಯ ಸಾಧಿಸಿದ ದಳಪತಿಗಳು, ತಾತನ ಕ್ಷೇತ್ರದಲ್ಲಿ ಪಜ್ವಲ್‌ಗೆ ಅನಾಯಸ ಗೆಲುವು

​ಪ್ರಜಾವಾಣಿ ವಾರ್ತೆ
Published 23 ಮೇ 2019, 13:48 IST
Last Updated 23 ಮೇ 2019, 13:48 IST
ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿಜಯದ ಸಂಕೇತ ತೋರಿಸಿದರು.
ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿಜಯದ ಸಂಕೇತ ತೋರಿಸಿದರು.   

ಹಾಸನ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಮೊಮ್ಮಗನ ಸ್ಪರ್ಧೆಯಿಂದ ರಾಜ್ಯ ಮತ್ತು ದೇಶದ ಗಮನ ಸೆಳೆದಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಪ್ರಜ್ವಲ್ ರೇವಣ್ಣ ಗೆಲುವಿನ ನಗೆ ಬೀರಿದ್ದಾರೆ.

ಪ್ರಜ್ವಲ್ ರೇವಣ್ಣ ಒಟ್ಟಾರೆ 6,76,606 ಮತ ಪಡೆದು, 1,41,324 ಮತಗಳ ಅಂತರದಿಂದ ಗೆದ್ದು ಬೀಗಿದ್ದರೆ, ಅವರ ಪ್ರತಿಸ್ಪರ್ಧಿ ಬಿಜೆಪಿಯ ಎ.ಮಂಜು 5,35,282 ಮತ ಪಡೆದು ಎರಡನೇ ಬಾರಿಗೆ ಸೋಲು ಒಪ್ಪಿ ಕೊಂಡಿದ್ದಾರೆ.

ಎಚ್ಎಂಟಿ (ಹಾಸನ, ಮಂಡ್ಯ, ತುಮಕೂರು) ಕ್ಷೇತ್ರಗಳ ಪೈಕಿ ಮಂಡ್ಯ-ತುಮಕೂರಿನಲ್ಲಿ ದೇವೇಗೌಡರು ಮತ್ತು ನಿಖಿಲ್ ಪರಾಭವಗೊಂಡಿರುವುದರಿಂದ ದೊಡ್ಡಗೌಡರ ತವರಿನ ಒಂದು ಗೆಲುವಿನ ಸಂಭ್ರಮವನ್ನು ಇಲ್ಲವಾಗಿಸಿದ್ದು, ಎಲ್ಲೂ ಕೂಡ ವಿಜಯೋತ್ಸವದ ಉತ್ಸಾಹ ಕಾಣದಂತಾಗಿದೆ.

ADVERTISEMENT

ಪ್ರಜ್ವಲ್ ಮಹಾ ಚುನಾವಣೆಗೆ ಸ್ಪರ್ಧೆ ಮಾಡಿದ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರುವುದರೊಂದಿಗೆ ಕ್ಷೇತ್ರದಲ್ಲಿ ಮತ್ತೆ ದಳಪತಿಗಳು ಪಾರಮ್ಯ ಸಾಧಿಸಿದ್ದಾರೆ.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಆರಂಭವಾದಾಗಿನಿಂದಲೂ ನಿರಂತರ ಮುನ್ನಡೆ ಕಾಯ್ದುಕೊಂಡ ಪ್ರಜ್ವಲ್, ಅಂತಿಮವಾಗಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಚುನಾಯಿತರಾದರು.

ಈ ಮೂಲಕ 1991 ರಲ್ಲಿ ತಾತ ದೇವೇಗೌಡರು, 1996 ರಲ್ಲಿ ಚಿಕ್ಕಪ್ಪ ಎಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಸಂಸತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ದಾಖಲೆಯನ್ನು ಪ್ರಜ್ವಲ್ ಸರಿಗಟ್ಟಿದರು.

ಪ್ರಜ್ವಲ್‌ಗೆ ಹೊಳೆನರಸೀಪುರದಲ್ಲಿ 74,655 ಮತಗಳು, ಶ್ರವಣಬೆಳಗೊಳದಲ್ಲಿ 39155 ಮತಗಳು ಲೀಡ್‌ ತಂದುಕೊಟ್ಟರೇ, ಮಂಜುಗೆ ಕಡೂರು ಕ್ಷೇತ್ರದಲ್ಲಿ ಮಾತ್ರ 12019 ಮತಗಳ ಮುನ್ನಡೆ ಸಿಕ್ಕಿತ್ತು.

ಬಿಜೆಪಿ ಶಾಸಕರಿರುವ ಹಾಸನ ಕ್ಷೇತ್ರದಲ್ಲಿ ಹೆಚ್ಚು ಮುನ್ನಡೆ ಸಿಗುವ ನಿರೀಕ್ಷೆ ಹುಸಿಯಾಗಿದೆ. ಈ ಬಾರಿ ಮತದಾರರು ಮೈತ್ರಿ ಅಭ್ಯರ್ಥಿ ಬೆಂಬಲಿಸಿರುವುದು ಅಚ್ಚರಿ ಉಂಟು ಮಾಡಿದೆ. ಸ್ವ ಕ್ಷೇತ್ರ ಅರಕಲಗೂಡಿನಲ್ಲೂ ಮುನ್ನಡೆ ಪಡೆಯಲು ಸಾಧ್ಯವಾಗಿಲ್ಲ.

ಒಟ್ಟಾರೆ 24 ಸುತ್ತಿನ ಮತ ಎಣಿಕೆಯಲ್ಲಿ ಒಮ್ಮೆಯೂ ಮಂಜು ಮುನ್ನಡೆ ಕಾಣಲಿಲ್ಲ. ಈ ಮೂಲಕ 2014 ರಲ್ಲಿ ದೇವೇಗೌಡರ ವಿರುದ್ಧ ಮೊದಲ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ತೊಡೆ ತಟ್ಟಿ ಸೋಲುಂಡಿದ್ದ ಮಂಜು, ಅವರ ಮೊಮ್ಮಗನ ವಿರುದ್ಧವೂ ಪರಾಭವಗೊಳ್ಳುವ ಮೂಲಕ ದಾಖಲೆಗೆ ಭಾಜನರಾದರು.

ಯಶಸ್ವಿ ಮತ ಎಣಿಕೆ:
ಮತ ಎಣಿಕೆಯು ಯಾವುದೇ ಗೊಂದಲವಿಲ್ಲದಂತೆ ಯಶಸ್ವಿಯಾಗಿ ನಡೆಯಿತು. ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಇವಿಎಂ ಹಾಗೂ ವಿವಿ ಪ್ಯಾಟ್‍ಗಳನ್ನು ಒಳಗೊಂಡಿದ್ದ ಸ್ಟ್ರಾಂಗ್ ರೂಂಗಳನ್ನು ಬೆಳಗ್ಗೆ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಚುನಾವಣಾ ವೀಕ್ಷಕರಾದ ಮಂಜಿತ್ ಸಿಂಗ್ ಬ್ರಾರ್ ಹಾಗೂ ಶಶಿಭೂಷಣ್ ಕುಮಾರ್ ಅವರ ಸಮ್ಮುಖದಲ್ಲಿ ತೆರೆಯಲಾಯಿತು.

ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಹಾಜರಿದ್ದರು.

ಚುನಾವಣಾ ಹಿನ್ನೆಲೆ ನಿಯೋಜನೆಗೊಂಡ ಸುಮಾರು 500ಕ್ಕೂ ಅಧಿಕ ಅಧಿಕಾರಿಗಳು, ಸಿಬ್ಬಂದಿ ಶಿಸ್ತುಬದ್ಧ ಕರ್ತವ್ಯದ ಮೂಲಕ ಗೊಂದಲವಿಲ್ಲದಂತೆ ಮತ ಎಣಿಕೆ ಕಾರ್ಯ ನೆರವೇರಿಸಿದರು.ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ಕ್ರಮವಹಿಸಿದ್ದ ಪೊಲೀಸ್ ಸಿಬ್ಬಂದಿ, ಮಿಲಿಟರಿ ಪಡೆ ಮತ್ತು ಕಾವಲು ಪಡೆಗಳು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ತೆರೆಯಲಾಗಿದ್ದ ಮಾಧ್ಯಮ ಕೇಂದ್ರದಲ್ಲಿ ಪ್ರೊಜೆಕ್ಟರ್‌ ಹಾಗೂ ಟಿ.ವಿ ವ್ಯವಸ್ಥೆ ಮೂಲಕ ಹಾಸನ ಲೋಕಸಭಾ ಕ್ಷೇತ್ರ ಹಾಗೂ ದೇಶದ ಇತರೆ ಭಾಗಗಳ ಫಲಿತಾಂಶವನ್ನು ದೊರಕುವಂತೆ ವ್ಯವಸ್ಥೆ ಮಾಡಲಾಯಿತು.

ಕರ್ತವ್ಯ ನಿರತ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತೆರೆಯಲಾಗಿದ್ದ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಕೇಂದ್ರ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು. ಹಲವು ಅಧಿಕಾರಿ, ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸ್ ಸಿಬ್ಬಂದಿ ರಕ್ತದೊತ್ತಡ, ಮಧುಮೇಹ ಮತ್ತಿತರ ತಪಾಸಣೆಗೆ ಒಳಪಟ್ಟು ಚಿಕಿತ್ಸೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.