ADVERTISEMENT

ಸ್ಥಳೀಯ ಸಮಸ್ಯೆಗಳಿಗಿಂತ ಭಾವನೆಗಳ ಜತೆ ಚೆಲ್ಲಾಟ: ಮಧು ಬಂಗಾರಪ್ಪ

ಸಂವಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 14:13 IST
Last Updated 29 ಮಾರ್ಚ್ 2019, 14:13 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿವಮೊಗ್ಗ: ಬಿಜೆಪಿಗೆ ಸ್ಥಳೀಯ ಸಮಸ್ಯೆಗಳು ಬೇಕಿಲ್ಲ. ಮೋದಿ ಹಾಗೂ ಯೋಧರ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಜನರ ಭಾವನೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮೂಗಿಗೆ ತುಪ್ಪ ಸವರುತ್ತಿದ್ದಾರೆ ಎಂದು ಕಾಂಗ್ರೆಸ್ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಎಸ್‌.ಮಧು ಬಂಗಾರಪ್ಪ ದೂರಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ರಾಮನ ಹೆಸರಿನಲ್ಲಿ ಮತ ಕೇಳುತ್ತಿದ್ದರು. ಈಗ ಬಾಂಬ್‌ ಬೆನ್ನು ಬಿದ್ದಿದ್ದಾರೆ. ಜಿಲ್ಲೆಯ ಸಂಸದರು, ಶಾಸಕರಿಗೂ ಸ್ಥಳೀಯ ಅಭಿವೃದ್ಧಿ ವಿಚಾರ ಬೇಕಿಲ್ಲ. ಜಿಲ್ಲೆಯ ಜನರು ಮಂಗನಕಾಯಿಲೆಗೆ ಸಿಲುಕಿ ತತ್ತರಿಸುತ್ತಿದ್ದಾಗ ಇವರೆಲ್ಲ ಹರ್‍ಯಾಣದರೆಸಾರ್ಟ್‌ನಲ್ಲಿ ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತಿದ್ದರು ಎಂದು ಹರಿಹಾಯ್ದರು.

ADVERTISEMENT

ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲು ಸುಪ್ರೀಂಕೋರ್ಟ್‌ ಆದೇಶ ನೀಡಿದಾಗ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಇದು ಕೇವಲ ಕರ್ನಾಟಕದ ಸಮಸ್ಯೆಯಲ್ಲ. ಇಡೀ ದೇಶದ ಸಮಸ್ಯೆ ಎಂದು ಅವರಿಗೆ ಅರ್ಥವೇ ಆಗಲಿಲ್ಲ. ಅರಣ್ಯ ಕಾಯ್ದೆಗೆ ಸಂಸತ್‌ನಲ್ಲಿ ತಿದ್ದುಪಡಿ ತರಲು ಆಗ್ರಹಿಬೇಕು ಎನ್ನುವ ಸಾಮಾನ್ಯ ಜ್ಞಾನವೂ ನಮ್ಮ ಸಂಸದರಿಗೆ ಇಲ್ಲ ಎಂದು ಕುಟುಕಿದರು.

ಬಗರ್‌ಹುಕುಂ ಸಮಸ್ಯೆ ನಿವಾರಣೆಗೆ ರಾಜ್ಯದಲ್ಲಿ ಮೊದಲ ಹೆಜ್ಜೆ ಇಟ್ಟವರೆಬಂಗಾರಪ್ಪ. ಇದೇ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದಾಗ ಭೂಕಬಳಿಕೆ ಕಾಯ್ದೆ ಜಾರಿಗೆ ತಂದರು. ನೀರಾವರಿ ವಿಚಾರದಲ್ಲೂ ಸುಳ್ಳು ಹೇಳುತ್ತಾ ಜನರನ್ನು ವಂಚಿಸುತ್ತಿದ್ದಾರೆ. ಮೂಡಿ ಸೇರಿದಂತೆ ಹಲವು ನೀರಾವರಿ ಕಾಮಗಾರಿಗಳಿಗೆ ಬಂಗಾರಪ್ಪ ಯೋಜನೆ ರೂಪಿಸಿದ್ದರು. ನಂತರ ಸಚಿವರಾದ ಕುಮಾರ್‌ ಬಂಗಾರಪ್ಪ, ಹಾಲಪ್ಪ ಹರತಾಳು ಅತ್ತ ಗಮನಹರಿಸಲಿಲ್ಲ. ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾದರೂ ಯೋಜನೆಗಳಿಗೆ ಹಣ ನೀಡದೆ ಈಗ ಡಿ.ಕೆ. ಶಿವಕುಮಾರ್ ಮನೆಗೆ ಅರ್ಜಿ ಹಿಡಿದು ಓಡಾಡಿದ್ದೆವು. ಇದು ನಮ್ಮ ಸಾಧನೆ ಎಂದು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ₨ 400 ಕೋಟಿ ಹಣ ನೀಡಿದ್ದು ಜೆಡಿಎಸ್‌, ಕಾಂಗ್ರೆಸ್ ಮುಖಂಡರ ಪರಿಶ್ರಮ ಎಂಬುದು ಗೊತ್ತಿಲ್ಲವೇಎಂದು ಛೇಡಿಸಿದರು.

ಉಪ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅವಧಿ ಇದ್ದ ಕಾರಣ ಎಲ್ಲ ಜನರನ್ನೂ ತಲುಪಲು ಸಾಧ್ಯವಾಗಲಿಲ್ಲ. ಈಗ ಸಾಕಷ್ಟು ಸಮಯ ಸಿಕ್ಕಿದೆ. ಎಲ್ಲ ಮತದಾರರ ಮನೆಬಾಗಿಲು ತಲುಪುತ್ತಿದ್ದೇನೆ. ಕರಾವಳಿ ಭಾಗದ ಜನರೂ ಬಿಜೆಪಿ ವರ್ತನೆಗೆ ಬೇಸತ್ತಿದ್ದಾರೆ. ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಜನರಿಗೆ ಬೇಕಿರುವುದು ವಿಮಾನ ನಿಲ್ದಾಣವಲ್ಲ. ನೀರಾವರಿ ಯೋಜನೆಗಳು. ಭದ್ರಾವತಿ ವಿಐಎಸ್‌ಎಲ್‌, ಎಂಪಿಎಂ ಕಾರ್ಖಾನೆಗಳಿಗೆ ಜೀವ ತುಂಬುವುದು. ಅರಣ್ಯ ಸಾಗುವಳಿ ಸಮಸ್ಯೆಗಳನ್ನು ಬಗೆಹರಿಸುವುದು. ಕೋಮು ಸಂಘರ್ಷ ಇಲ್ಲದ ವಾತಾವರಣ ನಿರ್ಮಿಸುವುದು. ತಾವು ಸಂಸದರಾದರೆ ಈ ಎಲ್ಲ ವಿಚಾರಗಳಿಗೂ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ಶಿ.ವಿ.ಸಿದ್ದಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.