ADVERTISEMENT

‘ನಮ್ಮ ಭವಿಷ್ಯಕ್ಕಾಗಿ ನಿಮ್ಮ ಮತದಾನ’

‘ಸ್ವೀಪ್’ ಕಾರ್ಯಕ್ರಮದಡಿ ಮಕ್ಕಳಿಂದ ಪೋಷಕರಿಗೆ ಅಂಚೆಯಲ್ಲಿ ಪತ್ರ ಕಳುಹಿಸುವ ಅಭಿಯಾನ

ಸದಾಶಿವ ಎಂ.ಎಸ್‌.
Published 25 ಮಾರ್ಚ್ 2019, 20:00 IST
Last Updated 25 ಮಾರ್ಚ್ 2019, 20:00 IST
ಕಾರವಾರದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್ ರೋಶನ್ ಪತ್ರ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾರವಾರದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್ ರೋಶನ್ ಪತ್ರ ಅಭಿಯಾನಕ್ಕೆ ಚಾಲನೆ ನೀಡಿದರು.   

ಕಾರವಾರ:ಜಿಲ್ಲಾ ‘ಸ್ವೀಪ್’ ಸಮಿತಿಯು ಹಾಸ್ಟೆಲ್ ವಿದ್ಯಾರ್ಥಿಗಳ ಮೂಲಕ ಪೋಷಕರಲ್ಲಿ ಮತದಾನದ ಜಾಗೃತಿ ಮೂಡಿಸಲು ಮುಂದಾಗಿದೆ. ಮಕ್ಕಳಿಂದ ಪೋಷಕರಿಗೆ ಅಂಚೆ ಪತ್ರ ಬರೆಯಿಸಿ ಮತದಾನ ಮಾಡುವಂತೆ ಮನವರಿಕೆ ಮಾಡುವುದು ಇದರ ಉದ್ದೇಶವಾಗಿದೆ.

ಮೊದಲ ಹಂತದಲ್ಲಿಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆರು ವಸತಿಯುತ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ಅಭಿಯಾನವನ್ನು ಜಾರಿ ಮಾಡಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, 1,500 ಪತ್ರಗಳನ್ನು ಮಕ್ಕಳು ತಮ್ಮ ಪೋಷಕರಿಗೆ ಕಳುಹಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ‘ಸ್ವೀಪ್’ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಶನ್, ‘ಎರಡನೇ ಹಂತದ ಕಾರ್ಯಕ್ರಮವನ್ನುಮುಂದಿನ ವಾರದಿಂದ ಹಮ್ಮಿಕೊಳ್ಳಲಾಗುತ್ತದೆ. ಶಾಲೆಗಳಿಗಿಂತಲೂಹಾಸ್ಟೆಲ್‌ಗಳಲ್ಲಿ ಈಅಭಿಯಾನ ಹೆಚ್ಚು ಪರಿಣಾಮ ಬೀರಬಹುದು ಎಂಬ ವಿಶ್ವಾಸವಿದೆ’ ಎಂದು ವಿವರಿಸಿದರು.

ADVERTISEMENT

ಮಕ್ಕಳ ಪತ್ರದಲ್ಲೇನಿದೆ?:ಈ ಅಭಿಯಾನವು ಮತದಾನ ಜಾಗೃತಿಯ ಭಾಗವಾಗಿದೆ. ಇದಕ್ಕೆ ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ತಲಾ ₹ 2ರ ಅಂಚೆ ಪತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡಿದೆ. ಪತ್ರಕ್ಕೆ ‘ಪ್ರಜಾಪ್ರಭುತ್ವ ನಮ್ಮಿಂದ, ಮತ ಚಲಾಯಿಸೋಣ ಹೆಮ್ಮೆಯಿಂದ’ ಎಂಬ ಶೀರ್ಷಿಕೆ ನೀಡಲಾಗಿದೆ.

‘ಪ್ರೀತಿಯ ಅಪ್ಪ, ಅಮ್ಮ... ಈ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ನೀವು ಯಾವುದೇ ಆಸೆ– ಆಮಿಷಗಳಿಗೆ ಒಳಗಾಗದೇ ನಿಮ್ಮ ಮತವನ್ನು ಚಲಾಯಿಸಿ.ನಮ್ಮ ಉಜ್ವಲ ಭವಿಷ್ಯಕ್ಕಾಗಿ ನೀವು ಕಡ್ಡಾಯವಾಗಿ ಮತದಾನ ಮಾಡಿ.’

–ಇಂತಿ ನಿಮ್ಮ ಪ್ರೀತಿಯ (ಮಗುವಿನ ಹೆಸರು) ಎಂದು ಬರೆದು ಪೋಷಕರ ವಿಳಾಸ ಬರೆದು ಅಂಚೆ ಡಬ್ಬಕ್ಕೆ ಹಾಕಬೇಕು.

ಮೊದಲ ಹಂತದಲ್ಲಿಭಟ್ಕಳದ ಕಿತ್ತೂರು ರಾಣಿ ಚನ್ನಮ್ಮ ವಸತಿಯುತ ಶಾಲೆ, ಕುಮಟಾದ ಕೂಜಳ್ಳಿ, ಹಳಿಯಾಳದ ಮದ್ನಳ್ಳಿಯ ಮತ್ತು ಜೊಯಿಡಾದ ಡಾ.ಅಂಬೇಡ್ಕರ್ ವಸತಿಯುತ ಶಾಲೆ, ಸಾಂಬ್ರಾಣಿಯ ಇಂದಿರಾ ಗಾಂಧಿ ವಸತಿಯುತ ಶಾಲೆ, ಜೊಯಿಡಾದ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಗಳ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಟಾಸ್ಕ್‌ಫೋರ್ಸ್ ಸಮಿತಿ:‘ಜಿಲ್ಲೆಯ ಅಂಗವಿಕಲ ಮತದಾರರಿಗೆ ಮತಗಟ್ಟೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ.ಸ್ವೀ‍ಪ್ ಅಧ್ಯಕ್ಷರು, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಮಂಡಲ ಮಟ್ಟದ ಪುನರ್ವಸತಿ ಸಿಬ್ಬಂದಿ ಇದರಲ್ಲಿದ್ದಾರೆ. ಎಲ್ಲರ ಜೊತೆಗೆ ಇನ್ನೆರಡು ಮೂರು ದಿನಗಳಲ್ಲಿ ಸಭೆ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ವಾಹನ ವ್ಯವಸ್ಥೆ ಬೇಕು ಅಥವಾ ಬೇಡ ಎಂದು ಅಂಗವಿಕಲ ಮತದಾರರು(ಪಿಡಬ್ಲ್ಯುಡಿ ಮತದಾರರು) ಅರ್ಜಿ ನಮೂನೆಯಲ್ಲಿ ಮಾಹಿತಿ ನೀಡಬೇಕು. ‘ಚುನಾವಣಾ’ ಆ್ಯಪ್ ಮೂಲಕವೂ ಮನವಿ ಸಲ್ಲಿಸಬಹುದು.ಅದನ್ನು ಆಧರಿಸಿ ಗ್ರಾಮ ಮಟ್ಟದಲ್ಲಿ ಯೋಜನೆ ರೂಪಿಸಲಾಗುತ್ತದೆ’ ಎಂದರು.

ಜಿಲ್ಲೆಯಲ್ಲಿ 12,913 ಅಂಗವಿಕಲ ಮತದಾರರಿದ್ದಾರೆ. ಈಗಿನ ಅಂದಾಜು ಪ್ರಕಾರ ಜಿಲ್ಲೆಗೆ350 ವಾಹನಗಳು ಬೇಕು. ಮತದಾರರ ಮನೆಯಿಂದ ಮತಗಟ್ಟೆ ಇರುವ ದೂರ, ಅದರ ವ್ಯಾಪ್ತಿಯಲ್ಲಿರುವ ಅಂಗವಿಕಲ ಮತದಾರರ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ. ಅದನ್ನು ಆಧರಿಸಿ ಎಷ್ಟುಮತ್ತು ಯಾವ ಮಾದರಿಯ ವಾಹನಗಳು ಬೇಕು ಎಂದು ನಿರ್ಧರಿಸಲಾಗುತ್ತದೆ. ಅದರಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮಾಹಿತಿ ರವಾನಿಸಲಾಗುತ್ತದೆ ಎಂದು ರೋಶನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.