ADVERTISEMENT

ಚೆಕ್‌ಪೋಸ್ಟ್‌ನಲ್ಲಿ ನಿದ್ದೆ ಮಾಡಿದ ಶಿಕ್ಷಕ,ಪೊಲೀಸ್‌;ಕರ್ತವ್ಯಲೋಪ: ಮೂವರು ಅಮಾನತು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 14:01 IST
Last Updated 3 ಏಪ್ರಿಲ್ 2019, 14:01 IST
   

ಚಿತ್ರದುರ್ಗ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮೂವರು ಸರ್ಕಾರಿ ನೌಕರರನ್ನು ಕರ್ತವ್ಯಲೋಪದ ಆರೋಪದಡಿ ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಬುಧವಾರ ಆದೇಶ ಹೊರಡಿಸಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಹುಲುಗಣ್ಣ, ತಳಕು ಪೊಲೀಸ್ ಠಾಣೆಯ ಹೆಡ್‌ ಕಾನ್‍ಸ್ಟೇಬಲ್‌ ಹೊನ್ನೂರ ಸಾಬ್‌ ಹಾಗೂ ಕೃಷಿ ಇಲಾಖೆ ಪ್ರಥಮ ದರ್ಜೆ ಸಹಾಯಕ ರಘುನಾಥ ನಾಯ್ಕ ಅಮಾನತುಗೊಂಡವರು.

ಶಿಕ್ಷಕ ಹುಲುಗಣ್ಣ ಹಾಗೂ ಕಾನ್‌ಸ್ಟೆಬಲ್‌ ಹೊನ್ನೂರ ಸಾಬ್‌ ಅವರನ್ನು ಚುನಾವಣಾ ಕರ್ತವ್ಯಕ್ಕೆ ಮಲ್ಲಸಮುದ್ರ ಚೆಕ್‌ಪೋಸ್ಟ್‌ಗೆ ನಿಯೋಜಿಸಲಾಗಿತ್ತು. ಮೊಳಕಾಲ್ಮುರು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಏ.2ರಂದು ರಾತ್ರಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದಾಗ ಇಬ್ಬರು ಸಿಬ್ಬಂದಿ ನಿದ್ದೆಗೆ ಜಾರಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೆಪ ಹೇಳಿ ಹುಲುಗಣ್ಣ ಈ ಹಿಂದೆಯೂ ಗೈರು ಹಾಜರಾಗಿದ್ದು ಬೆಳಕಿಗೆ ಬಂದಿದೆ. ಅನುಮತಿ ಪಡೆಯದೇ ಕೇಂದ್ರ ಸ್ಥಾನ ತೊರೆಯದಂತೆ ಸೂಚನೆ ನೀಡಲಾಗಿದೆ.

ADVERTISEMENT

ರಘುನಾಥ ನಾಯ್ಕ ಅವರನ್ನು ವಿಡಿಯೊ ವೀಕ್ಷಣಾ ತಂಡದಲ್ಲಿ (ವಿವಿಟಿ) ಕಾರ್ಯ ನಿರ್ವಹಿಸಲು ಆದೇಶ ನೀಡಲಾಗಿತ್ತು. ಮಾರ್ಚ್‌ 15 ರಿಂದ 25 ರವರೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಇವರು, ಬಳಿಕ ಅನಧಿಕೃತವಾಗಿ ಗೈರಾಗಿದ್ದರು. ಬೇಜವಾಬ್ದಾರಿ ತೋರಿದ ಆರೋಪದ ಮೇರೆಗೆ ಪ್ರಜಾ ಪ್ರತಿನಿಧಿ ಕಾಯ್ದೆಯ ಅನ್ವಯ ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.