‘ಒಂದು ಸಿನಿಮಾ ತೆರೆ ಕಾಣುತ್ತಿದೆ ಎಂದಾದರೆ, ಅದಕ್ಕೆ ದುಡಿದ ಎಲ್ಲರಿಗೂ ಖುಷಿ ಇದ್ದದ್ದೇ. ಆದರೆ ಎಲ್ಲಕ್ಕಿಂತ ಹೆಚ್ಚು ಸಂತಸ ಆಗುವುದು ನಿರ್ದೇಶಕನಿಗೆ. ಯಾಕೆಂದರೆ ಅದು ಸಂಪೂರ್ಣವಾಗಿ ಆತನ ಕನಸು ತಾನೇ’ ಎಂದು ನಿರ್ದೇಶಕ ಅನಂತ್ ಶೈನ್ ಪ್ರಶ್ನಿಸುತ್ತಾರೆ.
ಗಾಂಧಿನಗರದಲ್ಲಿ ಎಂಟು ವರ್ಷಗಳ ಕಾಲ ‘ಸೈಕಲ್’ ಹೊಡೆದು, ಕೊನೆಗೂ ಅವಕಾಶ ದಕ್ಕಿಸಿಕೊಂಡ ಪುಳಕ ಅನಂತ ಅವರದು. ಅವರ ಮೊದಲ ನಿರ್ದೇಶನದ ‘ಮುದ್ದು ಮನಸೇ’ ಇಂದು (ಆ. 28) ತೆರೆ ಕಾಣುತ್ತಿದೆ. ‘ಇನ್ನೇನು ಬಿಡುಗಡೆಗೆ ಸಿದ್ಧ’ ಎಂದು ನಾಲ್ಕಾರು ಸಲ ಘೋಷಿಸಿಕೊಂಡರೂ, ಹಲವು ವಿಘ್ನಗಳಿಂದಾಗಿ ತೆರೆ ಕಾಣಲು ಕಾತರಿಸುತ್ತಿದ್ದ ಸಿನಿಮಾ ಅದು. ಹಲವು ನಿರ್ದೇಶಕರ ಬಳಿ ಸಹಾಯಕನಾಗಿ ದುಡಿದ ಅನಂತ, ಮೊದಲ ಬಾರಿಗೆ ಆ್ಯಕ್ಷನ್–ಕಟ್ ಹೇಳಿರುವ ಚಿತ್ರ ‘ಮುದ್ದು ಮನಸೇ’. ಹಾಡುಗಳು ಹಾಗೂ ಟ್ರೇಲರ್ ಮೂಲಕ ಅದಾಗಲೇ ಸದ್ದು ಮಾಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚೆಚ್ಚು ಜನರನ್ನು ತಲುಪಿದ ಖುಷಿಯೂ ಚಿತ್ರತಂಡಕ್ಕಿದೆ.
ಮೊದಲ ಸಲ ನಿರ್ದೇಶನ ಮಾಡುವಾಗ ಆಯ್ಕೆ ಮಾಡಿಕೊಳ್ಳುವ ಕಥೆಯನ್ನೇ ಅನಂತ್ ಅವಲಂಬಿಸಿದ್ದಾರೆ. ಅದು ಪ್ರೀತಿ–ಪ್ರೇಮದ ಕಥೆ. ಜಗತ್ತು ನಿಂತಿರುವುದೇ ಪ್ರೀತಿ ಪ್ರೇಮದ ಮೇಲೆ. ಪ್ರತಿಯೊಬ್ಬ ಹುಡುಗ–ಹುಡುಗಿ ಜೀವನದಲ್ಲಿ ಒಮ್ಮೆಯಾದರೂ ಪ್ರೇಮದ ಜಾಲಕ್ಕೆ ಸಿಲುಕಿರುತ್ತಾರೆ. ಹೀಗಾಗಿ ಈ ಕಥೆಯ ಎಷ್ಟೇ ಸಿನಿಮಾ ಬಂದರೂ ರಿಪೀಟ್ ಅನಿಸುವುದಿಲ್ಲ ಎಂಬುದು ಅವರ ವಾದ. ‘ನಾವು ದಿನ ನಿತ್ಯ ಅನ್ನ–ಸಾಂಬರ್ ಊಟ ಮಾಡುವುದಿಲ್ಲವೇ? ಅದು ಯಾವತ್ತಾದರೂ ಬೇಸರ ಆಗುತ್ತದೆಯೇ? ಹೀಗಾಗಿ ಪ್ರೇಮಕಥೆಗಳು ನೀರಸ ಅನಿಸುವುದಿಲ್ಲ. ಅವು ಯಾವತ್ತೂ ಫ್ರೆಶ್ ಆಗಿಯೇ ಇರುತ್ತವೆ’ ಎನ್ನುತ್ತಾರೆ.
‘ವಿದಾಯ’ದಿಂದ ಶುರು
‘ಮುದ್ದು ಮನಸೇ’ ಸೆಟ್ಟೇರಿದ್ದು ವಿಚಿತ್ರ ಪರಿಸ್ಥಿತಿಯಲ್ಲಿ. ಅವರಲ್ಲೊಂದು ಕಥೆ ಇತ್ತು. ಆದರೆ ನಿರ್ದೇಶನಕ್ಕೆ ಅವಕಾಶ ಪಡೆಯುವ ಮುನ್ನ, ತಮ್ಮ ಸಾಮರ್ಥ್ಯ ತೋರಿಸಲು ‘ವಿದಾಯ’ ಎಂಬ ಕಿರುಚಿತ್ರವೊಂದನ್ನು ಅನಂತ್ ಮಾಡಿದ್ದರು. ಅದಕ್ಕೆ ಆರು ಪ್ರಶಸ್ತಿಗಳು ಬಂದಿದ್ದವು. 29 ನಿಮಿಷಗಳ ಅವಧಿಯ ಆ ಕಿರುಚಿತ್ರದಲ್ಲಿ ಇದ್ದುದು ಒಂದೇ ಪಾತ್ರ! ಅನಂತ್ ಅವರ ಸ್ನೇಹಿತರಾದ ರಮೇಶ್ ಹಾಗೂ ಜೀವನ್ ಶೆಟ್ಟಿ ‘ವಿದಾಯ’ ನೋಡಿದ್ದರು. ಅನಂತ್ ಅವರಲ್ಲಿನ ಕಥೆಯನ್ನು ಸಿನಿಮಾ ರೂಪಕ್ಕೆ ತರಲು ರಮೇಶ – ಜೀವನ್ ಸೇರಿಕೊಂಡು ನಿರ್ಮಾಪಕರನ್ನು ಹುಡುಕಿದರು. ನಿರ್ಮಾಪಕರು ಸಿಗದೇ ಹೋದಾಗ, ತಾವೇ ನಿರ್ಮಾಣ ಮಾಡುವುದಾಗಿ ಪ್ರಕಟಿಸಿದರು. ಅದರ ಪ್ರತಿಫಲವೇ ‘ಮುದ್ದು ಮನಸೇ’.
ಚಿತ್ರವೊಂದನ್ನು ನಿರ್ದೇಶಿರಸುವುದು ಬಹು ದೊಡ್ಡ ಸವಾಲು ಎನ್ನುವ ಅನಂತ್, ಆ ಹಂತ ತಲುಪುವ ಮುನ್ನ ಹಲವು ನಿರ್ದೇಶಕರ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಸಂತೋಷ್ ರೈ ಪಾತಾಜೆ, ನಾಗಶೇಖರ್, ಸಂತು, ಸಹನಾ ಮೂರ್ತಿ ಜತೆ ಮಾಡಿದ ಕೆಲಸಗಳು ಸಾಕಷ್ಟು ಅನುಭವ ನೀಡಿವೆ. ಏನಾದರೂ ತಪ್ಪು ಮಾಡಿದಾಗ ತಿದ್ದಲು ಇವರೆಲ್ಲ ನನಗೆ ಸಹಾಯ ಮಾಡಿದ್ದಾರೆ’ ಎನ್ನುತ್ತಾರೆ.
ನಿರ್ಮಾಪಕರಿಂದ ಹಿಡಿದು ಚಿತ್ರದ ಬಹುತೇಕ ತಂತ್ರಜ್ಞರೂ ಹೊಸಬರೇ ಎನ್ನುವ ಅನಂತ್, ಆರು ನಿರ್ದೇಶಕರು ಹಾಡುಗಳನ್ನು ಬರೆದಿದ್ದಾರೆ ಎಂಬುದೇ ವಿಶೇಷ ಎನ್ನುತ್ತಾರೆ. ಅರು ಗೌಡ, ನಿತ್ಯಾ ರಾಮ್, ಐಶ್ವರ್ಯ ಸೇರಿದಂತೆ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ‘ನಮ್ಮ ಸಿನಿಮಾದಲ್ಲಿ ಮಾತುಗಳು ಜಾಸ್ತಿ ಇಲ್ಲ. ದೃಶ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ. ಒಂದರ್ಥದಲ್ಲಿ ವಿಜುವಲ್ ಎಂಟರ್‌ಟೈನ್‌ಮೆಂಟ್ ಇದು’ ಎನ್ನುತ್ತಾರೆ.
‘ಮುದ್ದು ಮನಸೇ’ ಬಳಿಕ ಕೈಗೆತ್ತಿಕೊಳ್ಳಲು ಇನ್ನೊಂದು ಚಿತ್ರಕಥೆಯನ್ನು ಅನಂತ್ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಅದರ ನಾಯಕ ‘ಸ್ಟಾರ್’ ಆಗಿರಬೇಕು. ಅಂಥವರು ಸಿಕ್ಕರೆ ಮಾತ್ರ ಸಿನಿಮಾ ಮಾಡುವುದು ಅವರ ನಿರ್ಧಾರ. ‘ಕಥೆಗೆ ಬೇಕಿರುವುದು ಒಬ್ಬ ಸ್ಟಾರ್. ಹಾಗಿದ್ದರೆ ಮಾತ್ರ ಆ ಸಿನಿಮಾಕ್ಕೆ ವ್ಯಾಲ್ಯೂ ಬರುತ್ತದೆ. ಈ ಸಿನಿಮಾದ ಬಳಿಕ ಯಾರನ್ನಾದರೂ ಸಂಪರ್ಕಿಸಿ, ನನ್ನ ಚಿತ್ರಕಥೆ ವಿವರಿಸುತ್ತೇನೆ. ಒಂದು ವೇಳೆ ನನ್ನ ಪ್ರಯತ್ನ ಸಫಲವಾಗದೇ ಹೋದರೆ ಆ ಚಿತ್ರಕಥೆಯನ್ನು ಆಚೆಗೆ ಎತ್ತಿಟ್ಟು, ಬೇರೊಂದು ಕಥೆ ಬರೆಯುತ್ತೇನೆ’ ಎನ್ನುತ್ತಾರೆ.
ಕನ್ನಡದ ಪದ ‘ಕಾದಲ್’
‘ಮುದ್ದು ಮನಸೇ’ ಶೀರ್ಷಿಕೆ ಕೆಳಗೆ ‘ಶುರುವಾಯ್ತು ನಂಗೂ ಕಾದಲ್’ ಎಂಬ ಟ್ಯಾಗ್‌ಲೈನ್ ಇದೆ. ಆ ಪದ ತಮಿಳಿನದ್ದಲ್ಲವೇ ಎಂದು ಸಾಕಷ್ಟು ಜನ ಪ್ರಶ್ನಿಸಿದ್ದಾರೆ. ಆದರೆ ಆ ಶಬ್ದ ಕನ್ನಡದ್ದು ಎನ್ನುವ ಅನಂತ್, ಕೊನೆಗೆ ಇರುವ ‘ಲ್’ ಅಕ್ಷರದ ಮೇಲೆಯೇ ಒಂದು ಹಾಡನ್ನು ನಾಗೇದ್ರ ಪ್ರಸಾದ್ ಅವರಿಂದ ಬರೆಸಿದ್ದಾರೆ. ಒಟ್ಟು 98 ಸಲ ‘ಲ್’ ಅಕ್ಷರ ಇರುವ ಪದಗಳು ಈ ಹಾಡಿನಲ್ಲಿವೆಯಂತೆ! ‘ಕಾದಲ್’ ಅಚ್ಚ ಕನ್ನಡದ ಪದ. ಅದು ದ್ರಾವಿಡ ಭಾಷೆ. ನಾವು ಬಳಸದೇ ಮೂಟೆ ಕಟ್ಟಿ ಎಸೆದಿದ್ದರಿಂದ ಹಾಗಾಗಿದೆ! ಈ ಬಗ್ಗೆ ನಾನೂ ಅಧ್ಯಯನ ಮಾಡಿದ್ದೇನೆ. ರನ್ನ, ಪಂಪ, ಜನ್ನ, ಪೊನ್ನ ಹಾಗೂ ಇತ್ತೀಚೆಗೆ ಬೇಂದ್ರ ಕೂಡ ಇದನ್ನು ಬಳಸಿದ್ದಾರೆ’ ಎನ್ನುತ್ತಾರೆ ಅನಂತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.