ADVERTISEMENT

ಕದಿಯೋದೇ ನನ್ ಬಿಜಿನೆಸ್ಸು...

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST
ಕದಿಯೋದೇ ನನ್ ಬಿಜಿನೆಸ್ಸು...
ಕದಿಯೋದೇ ನನ್ ಬಿಜಿನೆಸ್ಸು...   

ಸುಡುನೆತ್ತಿ ಬಿಸಿಲು. ಗಲಗಲವೆನ್ನುವ ಕಾಟನ್‌ಪೇಟೆ. ಒಲೆ ಮೇಲಿನ ಚಹಾದ ಮಂದ ಕುದಿತ. ಆಲದಮರದ ಬಿಳಿಲುಗಳ ಮಧ್ಯೆ ಹಾಯ್ದು ಹೋಗುವ ಅದರ ಉಗಿ. ಟೀ.. ಕೊಡ್ರಪ್ಪ ಬೇಗ ಎನ್ನುತ್ತಲೇ ಬೆರಕೆ ಸೊಪ್ಪಿನ ಬಂಡಿಯನ್ನು ತುಸು ಜೋರಾಗಿಯೇ ಓಡಿಸುವ ಜೋಶ್‌ನಲ್ಲಿದ್ದರು ನಿರ್ದೇಶಕ ಓಂಪ್ರಕಾಶ್ ರಾವ್. ಎಲ್ಲದಕ್ಕೂ ವೆಂಕಟರಮಣ ದೇವರು ಸಾಕ್ಷಿಯಾಗಿ ನಿಂತಿದ್ದ.

‘ಕದ್ದೀದೀವಿ ಅಂತ ಹೇಳೋದಕ್ಕೂ ಧೈರ್ಯ ಬೇಕು ಕಣ್ರೀ.. ನನ್ನ ಹೊಸಾ ‘ಕಾಟನ್‌ಪೇಟೆ’ಯೂ ಬೆರಕೆ ಸೊಪ್ಪಿನ ಸಾರೇ. ಕದಿಯೋದು ಮುಖ್ಯ ಅಲ್ರಿ. ಸಕ್ಸೆಸ್ ಮುಖ್ಯ. ಕದ್ದಿದ್ದನ್ನ ಹೇಗೆ ಪ್ರೆಸೆಂಟ್ ಮಾಡ್ತೀವಿ ಅನ್ನೋದು ಅಷ್ಟೇ ಚಾಲೆಂಜಿಂಗ್. ಈ ವಿಷಯವನ್ನು ಮಣಿರತ್ನಂ ಹೇಳಿದ್ರೆ ತಪ್ಪಲ್ಲ. ನಾನು ಹೇಳಿದ್ರೆ ತಪ್ಪಾ? ನಾನು ಯಾರಿಗೋಸ್ಕರನೂ ಬದಲಾಗಲ್ಲ. ನನ್ನ ಕ್ಯಾರೆಕ್ಟರೇ ಇದು. ನನಗೆ ಈ ಹಿಂದೆ ಆ್ಯಕ್ಸಿಡೆಂಟ್ ಆದಾಗ, ಇವನ ಕಥೆ ಮುಗೀತು ಬಿಡು ಅಂತ ನಮ್ಮಲ್ಲಿ ಕೆಲವರು ಖುಷಿ  ಪಟ್ಟಿದ್ರು... ಛೆ ಬೇಜಾರಾಗತ್ತೆ’ ಎಂದು ಬೇಸರಿಸಿಕೊಳ್ಳುತ್ತಲೇ ಹೊಸ ‘ಪೇಟೆ’ಯ ಚುಟುಕು ವಿವರ ಬಿಚ್ಚಿಟ್ಟರು.

‘ಕನ್ನಡ ಹುಡುಗ ಹಾಗೂ ಮಾರವಾಡಿ ಹುಡುಗಿಯ ಮಧ್ಯೆ ನಡೆಯುವ ಪ್ರೇಮಕಥೆ ಈ ಚಿತ್ರದ್ದು. ಹೀರೋ ಆದಿತ್ಯ. ಆದರೆ ಹೀರೋಯಿನ್ ಇನ್ನೂ ಸೆಲೆಕ್ಟ್ ಆಗಿಲ್ಲ. ಮಾರವಾಡಿ ಲುಕ್ ಇರೋ ಹುಡುಗಿಯನ್ನ ಹುಡುಕ್ತಿದ್ದೀವಿ. ಏನಿಲ್ಲವೆಂದರೂ ಸುಮಾರು ಹದಿನೈದು ಚಿತ್ರಗಳ ತುಣುಕುಗಳ ನೆರಳನ್ನು ನೀವು ಈ ಚಿತ್ರದಲ್ಲಿ ಕಾಣ್ತೀರಿ. ನನಗೆ ‘ಬೆರಕೆ’ ಹಣೆಪಟ್ಟಿ ಇದ್ದರೂ ಈ ಹಿಂದೆಯೂ ಸ್ವಂತ ಚಿತ್ರಗಳನ್ನು ಮಾಡಿದ್ದೀನಿ. ಮುಂದೇನೂ ಮಾಡ್ತೀನಿ. ಆದರೆ ಪ್ರೊಡ್ಯೂಸರ್ ನನ್ನನ್ನು ನಂಬಿಕೊಂಡು ಕೋಟ್ಯಂತರ ದುಡ್ಡು ಹಾಕಿರ್ತಾರೆ. ಆ ವಿಶ್ವಾಸವನ್ನೂ ನಾನು ಉಳಿಸಿಕೊಳ್ಳಬೇಕಾಗುತ್ತದೆ’ ಎಂದು ನಿರ್ಮಾಪಕರಿಲ್ಲದೇ ನಿರ್ದೇಶಕರಿಲ್ಲ ಎನ್ನುವುದನ್ನು ಪತ್ರಿಕಾಗೋಷ್ಠಿಯುದ್ದಕ್ಕೂ ಒತ್ತುಕೊಟ್ಟು ಹೇಳುತ್ತಾ ಹೋದರು.

‘ಹುಲಿ’ ನೆಲಕಚ್ಚಿತು. ಇದರಿಂದ ಪ್ರೊಡ್ಯೂಸರ್‌ಗೆ ಎರಡು ಕೋಟಿ ರೂಪಾಯಿ ನಷ್ಟವಾಯಿತು. ಇದಕ್ಕೆ ಕಾರಣ ನಾನೇ. ಒಳ್ಳೆಯ ಚಿತ್ರಕಥೆ. ಕಿಶೋರ್ ಅಭಿನಯ ಎಲ್ಲವೂ ಚೆನ್ನಾಗಿತ್ತು. ಆದರೆ ಅದೇನಾಯಿತೋ ಗೊತ್ತಿಲ್ಲ. ಎಲ್ಲೋ ಮಿಸ್ಸಿಂಗ್ ಲಿಂಕ್... ಒಟ್ಟಿನಲ್ಲಿ ಸಿನಿಮಾ ಸಕ್ಸೆಸ್ ಆಗಬೇಕು ನೋಡಿ’ ಮುಗ್ಗರಿಸಿದಾಗಲೆಲ್ಲ ಮನದಟ್ಟು ಮಾಡಿಕೊಂಡಿದ್ದನ್ನು ವಿವಿಧ ಕೋನಗಳಲ್ಲಿ ಹೇಳಿದರು ರಾವ್.

‘ಈಗಲೂ ನನಗೆ ಪ್ರೊಡ್ಯೂಸರ್‌ಗಳೆಲ್ಲ ಫೋನ್ ಮಾಡಿ ಕೇಳ್ತಿರ್ತಾರೆ; ಈ ಸಿನಿಮಾದಿಂದ ನೀವು ಕದ್ದಿಲ್ಲ ತಾನೆ? ನಾವು ತಗೊಳ್ಬಹುದಾ? ಅಂತೆಲ್ಲ...’ ಎಂದು ನಗುತ್ತ ಕೆಳಗೆ ಬಿದ್ದ ಕೂಲಿಂಗ್ ಗ್ಲಾಸ್ ಕೈಗೆತ್ತಿಕೊಂಡರು.  ನಾಯಕ ನಟ ಆದಿತ್ಯ, ‘ಓಂಪ್ರಕಾಶ್ ಪಕ್ಕಾ ಕಮರ್ಶಿಯಲ್ ಎಲಿಮೆಂಟ್ಸ್ ಅರಿತುಕೊಂಡವರು. ಸ್ಟೋರಿ ಲೈನ್ ಹೇಳಿದ್ದಾರೆ. ಲವ್ ವಿತ್ ಕಾಮಿಡಿಯಲ್ಲಿ ಆ್ಯಕ್ಷನ್, ಕಟ್ ಸಾಗತ್ತೆ. ಅಭಿಮಾನ್ ರಾಯ್ ಸಂಗೀತವಿದೆ’ ಅಂತ ಮಾತು ಮುಗಿಸಿದರು.

ಹಾಸ್ಯ ನಟ ಬುಲೆಟ್ ಪ್ರಕಾಶ್- ‘ಓಂಪ್ರಕಾಶ್ ನನಗೆ ಗುರು ಸಮಾನ. ಎಲ್ಲೇ ಇದ್ದರೂ ಎಂಥ ಸಮಯದಲ್ಲೂ ರಾವ್ ಕಾಲ್‌ಶೀಟ್‌ಗೆ ಇಲ್ಲ ಅನ್ನಲ್ಲ’ ಎಂದು ಕೈಮುಗಿದು ಮೈಕುಲುಕಿಸಿದರು. ನಿರ್ಮಾಪಕರಲ್ಲಿ ಒಬ್ಬರಾದ ಸುಧೀಂದ್ರ ಅಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.