ADVERTISEMENT

ಕೋಟೆ ನಗರಿಯಲಿ ಪೇಪರ್ ದೋಣಿಯಲಿ...

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

`ಜಗತ್ತಿನ ಎಲ್ಲ ಸಮಸ್ಯೆಗಳಿಗೂ ನಮ್ಮ ಪೇಪರ್ ದೋಣಿ ಸಿನಿಮಾ ಉತ್ತರ. ಬಡತನ, ಅಸಹಾಯಕತೆ, ಅನ್ಯಾಯ, ಶೋಷಣೆ, ಹೀಗೆ ಎಲ್ಲ ರೀತಿಯ ಸಮಸ್ಯೆಗಳೂ ಬಗೆ ಹರಿಯುತ್ತವೆ. ಮನರಂಜನೆಯ ಜೊತೆಗೇ ಮೆಸೇಜ್ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ~

ಹೀಗಂತ ದೋಣಿಯ ಕ್ಯಾಪ್ಟನ್ ಆರ್.ಕೆ.ನಾಯಕ್ ಕರ್ನಾಟಕದ ತುತ್ತ ತುದಿಯಲ್ಲಿ ಇರುವ ಬೀದರ್‌ನಲ್ಲಿ ಹೇಳುತ್ತಿದ್ದರೆ ಸಿನಿಮಾ ಡಾಕ್ಯುಮೆಂಟರಿ ಇರಬಹುದಾ ಎಂಬ ಪ್ರಶ್ನೆ ಮೂಡಿದ್ದರಲ್ಲಿ ಅಚ್ಚರಿಯಿಲ್ಲ. ರಂಗಮಂದಿರದಲ್ಲಿ ಹಾಜರಿದ್ದ ಜನರಲ್ಲಿ ಒಡಮೂಡಿರಬಹುದಾದ ಪ್ರಶ್ನೆಯನ್ನು ಊಹಿಸಿಕೊಂಡು ನಾಯಕ ನಟ ನವೀನ್ ಕೃಷ್ಣ `ಡಾಕ್ಯುಮೆಂಟರಿ ಅಲ್ಲ~ ಎಂದು ಸ್ಪಷ್ಟೀಕರಣ ನೀಡಿದರು.

`ಇದನ್ನ ಎಲ್ಲರೂ ಹೇಳುವ ಹಾಗೆ ಡಿಫರೆಂಟ್ ಸಿನಿಮಾ ಅಂತ ಹೇಳುವುದಿಲ್ಲ. ನೀವು ಕೊಡುವ ಹಣಕ್ಕೆ ಮೋಸ ಇಲ್ಲದ ಹಾಗೆ ಸಿನಿಮಾ ಇದೆ~ ಎಂದು ಭರವಸೆ ನೀಡಲು ನವೀನ್ ಮರೆಯಲಿಲ್ಲ.

ಚಿತ್ರತಂಡ ಆಡಿಯೋ ಬಿಡುಗಡೆಗಾಗಿ ರಾಜಧಾನಿಯಿಂದ ಮಾನಸಿಕವಾಗಿ, ಭೌತಿಕವಾಗಿ `ದೂರ~ದಲ್ಲಿ ಇರುವ ಬೀದರ್ ಕಡೆಗೆ ಮುಖ ಮಾಡಿ ಪ್ರಯಾಣ ಬೆಳೆಸಿತು. ದಾರಿಯಲ್ಲಿ ಭೀಕರ ಅಪಘಾತವಾಗಿ ಮೂವರು ಜೀವನ್ಮರಣದ ಹೋರಾಟ ನಡೆಸುತ್ತಿದ್ದರು.

ನಿರ್ದೇಶಕ ನಾಯಕ್ ಮತ್ತವರ ತಂಡ ಗಾಯಗೊಂಡಿದ್ದವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಜೀವ ಕಾಪಾಡಿದರು. ಅವರ `ಜೀವ ಉಳಿಸುವುದಕ್ಕಾಗಿಯೇ ಬೀದರ್ ಕಡೆಗೆ ಹೊರಟಿರಬಹುದಾ? ಅಂತ ಅನ್ನಿಸಿತು~ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟರು.

`ಭದ್ರ ಕೋಟೆ ಇರುವ ಬೀದರ್‌ನಲ್ಲಿ ಆಡಿಯೋ ರಿಲೀಸ್ ಆಗುತ್ತಿರುವುದರಿಂದ ಒಂದು ರೀತಿಯ ನೆಮ್ಮದಿಯ ಭಾವ ಇದೆ. ರಕ್ಷಣೆ ಸಿಗ್ತದೆ ಎಂಬ ನಂಬಿಕೆ. ಒಳ್ಳೆಯ ಇತಿಹಾಸ ಇರುವ ಊರಿನಲ್ಲಿ ದೋಣಿ ತೇಲುತ್ತಿದೆ. ಕನ್ನಡಿಗರೆಲ್ಲ ದಡ ಸೇರಿಸ್ತಾರೆ ಎಂಬ ನಂಬಿಕೆಯಿದೆ~ ಎಂದು ನಾಯಕ ನಟ ನವೀನ್‌ಕೃಷ್ಣ ಹೇಳಿದರು.

`ಮೊದಲಿಗೆ ಸಿನಿಮಾ ಕಥೆ ಕೇಳಿದಾಗ ಒಂದು ರೀತಿಯ ಕನ್‌ಫ್ಯೂಷನ್ ಇತ್ತು. ಸಿನಿಮಾ ಮುಗಿದ ಮೇಲೆ ಎಲ್ಲವೂ ಖಚಿತವಾಗಿದೆ. ನಿರ್ಮಾಪಕ-ನಿರ್ದೇಶಕರ ಕನಸು ಈಡೇರಿದೆ. ಶ್ರದ್ಧೆಯಿಂದ ಸಿನಿಮಾ ಮಾಡಿದ್ದೇವೆ. ಸಂಬಂಧಗಳ ಬಗ್ಗೆ ವಿಶೇಷ ಗಮನಹರಿಸಲಾಗಿದೆ. ಈ ಚಿತ್ರದಲ್ಲಿನ ಡ್ಯಾನ್ಸ್ ಎಕ್ಸ್‌ಟ್ರಾರ್ಡಿನರಿಯಾಗಿದೆ. ಕನ್ನಡ ಸಿನಿಮಾಗಳಲ್ಲಿಯೇ ಅತ್ಯುತ್ತಮ ಅನ್ನುವಂತಹ ಡ್ಯಾನ್ಸ್ ಈ ಚಿತ್ರದಲ್ಲಿದೆ. ಹಾಡುಗಳು ಮಧುರವಾಗಿವೆ~ ಎಂದು ನವೀನ್ ವಿವರಿಸುವಾಗ ಕಣ್ಣಿನಲ್ಲಿ ಹೊಳಪು ಕಾಣಿಸುತ್ತಿತ್ತು.

ನಿರ್ಮಾಪಕ ಜಿ. ಜನಾರ್ದನ್ ಮಾತನಾಡಿ `ನಾನು ಡಾ.ರಾಜ್ ಭಕ್ತ~ ಎಂದು ಹೇಳುತ್ತಿದ್ದಂತೆಯೇ ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಭಾರೀ ಕರತಾಡನದ ಪ್ರತಿಕ್ರಿಯೆ ನೀಡಿದರು.
 
ಉತ್ತೇಜಿತರಾದ ನಿರ್ಮಾಪಕರು `ಖುಷಿ ಆಗ್ತಿದೆ. ಚಿತ್ರದ ಕಾನ್ಸೆಪ್ಟ್ ಚೆನ್ನಾಗಿದೆ. ಕರ್ನಾಟಕದ ಕಿರೀಟದಂತಿರುವ ಬೀದರ್‌ನಲ್ಲಿ ಆಡಿಯೋ ರಿಲೀಸ್ ಆಗುತ್ತಿರುವುದು ಯಾವ ಜನ್ಮದ ಋಣಾನುಬಂಧವೋ ಏನೋ ಅನ್ನಿಸುತ್ತಿದೆ~ ಎಂದು ಹೇಳಿದರು.

ಕನ್ನಡದಲ್ಲಿ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡುತ್ತಿರುವ ಶ್ರೀಸುಮನ್ ತೆಲುಗಿನಲ್ಲಿ ಮಾತು ಆರಂಭಿಸುತ್ತಿದ್ದಂತೆಯೇ ಜನರ ಕಡೆಯಿಂದ `ಕನ್ನಡ.. ಕನ್ನಡ...~ ಎಂಬ ಆಗ್ರಹ. ಜನರ ಕೂಗಿನ ನಡುವೆಯೇ ಸುಮನ್, `ಬ್ರಹ್ಮಾಂಡಗಾರು ಡ್ಯಾನ್ಸ್ ಚೇಸ್ಯಾರು~ ಎಂದು ಮಾತಿಗೆ ವಿರಾಮ ಹೇಳಿದರು. ಚೆಂದುಳ್ಳಿ ಚೆಲುವೆಯಂತಿರುವ ನಾಯಕಿ ಶಾಂತಲಾ ಮೂಕ ಪ್ರೇಕ್ಷಕಿಯಾಗಿದ್ದರು.

ಮಾಜಿ ಸಚಿವರಾದ ಶಾಸಕ ಬಂಡೆಪ್ಪಾ ಕಾಶೆಂಪೂರ್ ಆಡಿಯೋ ಬಿಡುಗಡೆ ಮಾಡಿದ್ದೂ ಅಲ್ಲದೆ 11 ಸಾವಿರ ರೂಪಾಯಿ ಮೌಲ್ಯದ ಸಿ.ಡಿ. ಖರೀದಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಶೈಲೇಂದ್ರ ಬೆಲ್ದಾಳೆ ಐದು ಸಾವಿರ ರೂಪಾಯಿ ಮೌಲ್ಯದ ಸಿ.ಡಿ. ಖರೀದಿಸಿ ಸಾರ್ವಜನಿಕರಿಗೆ ಹಂಚುವಂತೆ ಸೂಚಿಸಿದರು.
 
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಸೇರಿದಂತೆ ರಾಜಕಾರಣಿಗಳು ವೇದಿಕೆಯ ಮೊದಲ ಸಾಲಿನಲ್ಲಿ ಇದ್ದದ್ದರಿಂದ ನಿರ್ದೇಶಕರೂ ಸೇರಿದಂತೆ ಚಿತ್ರತಂಡದ ಕಲಾವಿದರು, ತಂತ್ರಜ್ಞರು ಹಿಂದಿನ ಸಾಲಿಗೆ ತೃಪ್ತರಾಗಬೇಕಾಯಿತು.

ಚಿತ್ರದ ಹಾಡುಗಳಾದ `ಹೇಳಲು ಆಗದು... ಮಾತೊಂದು ಬಾರದು...~ ಮತ್ತು `ನಡೆ ನಡೆ...~ ಹಾಗೂ `ಸಮ್‌ಥಿಂಗ್ ಸಮ್‌ಥಿಂಗ್...~ ಹಾಡುಗಳಿಗೆ ನಾಯಕ ನವೀನ್ ಕೃಷ್ಣ ಮತ್ತು ಶಾಂತಲಾ ಹೆಜ್ಜೆ ಹಾಕಿದರು. ಹಾಡು- ಕುಣಿತದ ಸಂಭ್ರಮದ ನಡುವೆ ಜಗತ್ತಿಗೆ `ಅಲ್ಟಿಮೇಟ್ ಮೆಸೇಜ್~ ಕೊಡುವ ಉದ್ದೇಶದ ಪೇಪರ್ ದೋಣಿ ಪ್ರೇಕ್ಷಕರತ್ತ ಪಯಣ ಆರಂಭಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.