ADVERTISEMENT

ಕ್ಲೈಮ್ಯಾಕ್ಸ್‌ ಕಥನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 12:05 IST
Last Updated 14 ಜೂನ್ 2018, 12:05 IST

ಚಂದನವನದಲ್ಲಿ ನೈಜ ಘಟನೆ ಆಧಾರಿತ ಚಿತ್ರಗಳು ಹೆಚ್ಚು ಸದ್ದು ಮಾಡುತ್ತಿವೆ. ಇದರ ಸಾಲಿಗೆ ಹೊಸ ಸೇರ್ಪಡೆ ‘ಹೊಸ ಕ್ಲೈಮಾಕ್ಸ್’ ಸಿನಿಮಾ. ಕೊಡಗು ಮೂಲದ ಡಾ.ಶ್ಯಾಲಿ ಅನಿವಾಸಿ ಭಾರತೀಯರಾಗಿದ್ದು, ಜರ್ಮನಿಯಲ್ಲಿ ನೆಲೆಸಿದ್ದಾರೆ.

ಬ್ಯುಸಿನೆಸ್‌ ಐಕಾನ್‌ ಆಗಿರುವ ಅವರು 55 ದೇಶಗಳನ್ನು ಸುತ್ತಿದ್ದಾರೆ. ನಟ, ನಿರ್ದೇಶಕ ಎಂ.ಡಿ. ಕೌಶಿಕ್ ವಿಮಾನದಲ್ಲಿ ಆಕಸ್ಮಿಕವಾಗಿ ಶ್ಯಾಲಿ ಅವರನ್ನು ಭೇಟಿಯಾದರಂತೆ. ಉಭಯ ಕುಶಲೋಪರಿ ವಿಚಾರಿಸುವ ವೇಳೆ ಈ ಕಥೆಯ ಎಳೆಯೊಂದನ್ನು ಹೇಳಿದರಂತೆ.

‘ಕಥೆ ತುಂಬಾ ಚೆನ್ನಾಗಿದೆ. ಸಿನಿಮಾ ಏಕೆ ಮಾಡಬಾರದು’ ಎಂದು ಆಲೋಚಿಸಿದ ಶ್ಯಾಲಿ ಕಥೆ ಬರೆದು ನಿರ್ದೇಶನ, ನಿರ್ಮಾಣ ಜೊತೆಗೆ ಒಂದು ಪಾತ್ರಕ್ಕೂ ಬಣ್ಣಹಚ್ಚಿದ್ದಾರೆ.

ADVERTISEMENT

ಚಿತ್ರದಲ್ಲಿ ಯುವಕನಿಗೆ ಸಿನಿಮಾ ನಾಯಕನಾಗುವ ಕನಸು. ನಾಯಕಿ ಮಾಡೆಲ್. ಇಬ್ಬರು ಪ್ರೀತಿಸುತ್ತಿದ್ದು ಲಿವ್ ಇನ್ ರಿಲೇಷನ್‍ನಲ್ಲಿ ಇರುತ್ತಾರೆ. ಇದು ಒಂದು ಹಂತದಲ್ಲಿ ತಾರಕಕ್ಕೆ ಹೋದಾಗ ಇವನನ್ನು ಅಸಡ್ಡೆಯಿಂದ ಕಾಣುತ್ತಾಳೆ. ಅದೇ ಮನೆಗೆ  ಮತ್ತೊಬ್ಬಳ ಪ್ರವೇಶವಾಗುತ್ತದೆ. ಆಕೆಯು ಈತನ ಪ್ರತಿಭೆ, ಬುದ್ಧಿವಂತಿಕೆ ಕಂಡು ಅವನ ಸಾಧನೆಗೆ ಸಲಹೆ, ಮಾರ್ಗದರ್ಶನ ನೀಡುತ್ತಾಳೆ. ಮುಂದೆ ತನ್ನ ತಪ್ಪಿನ ಅರಿವಾಗಿ ಹಳೆಯ ಪ್ರೇಯಸಿ ವಾಪಸ್‌ ಬರುತ್ತಾಳೆ. ಆತ ಹಳೇ ಕ್ಲೈಮ್ಯಾಕ್ಸ್ ಮರೆತಿದ್ದು, ಜೀವನದಲ್ಲಿ ಹೊಸ ಕ್ಲೈಮ್ಯಾಕ್ಸ್‌ನಿಂದ ನೆಮ್ಮದಿಯಾಗಿರುತ್ತಾನೆ ಎನ್ನುವುದೇ ಚಿತ್ರದ ತಿರುಳು.

ಪೋಷಕ ಪಾತ್ರಗಳಲ್ಲಿ ನಟಿಸಿದ್ದ ನರೇಶ್‍ ಗಾಂಧಿ ಹಾಗೂ ಅನಿತಾ ಭಟ್ ಇಬ್ಬರಿಗೂ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ಪಾತ್ರಕ್ಕೆ ಅವಕಾಶ ಸಿಕ್ಕಿದೆ. ನಾಯಕನಿಗೆ ಧೈರ್ಯ ತುಂಬುವ ಪಾತ್ರಕ್ಕೆ ಶ್ಯಾಲಿ ಜೀವ ತುಂಬಿದ್ದಾರೆ. ಎರಡು ಹೆಣ್ಣುಗಳ ವ್ಯಕ್ತಿತ್ವ ಪ್ರತಿಬಿಂಬಿಸುವ ಪ್ರಯತ್ನ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಚಿತ್ರದ ಮೂರು ಹಾಡುಗಳಿಗೆ ಮಾರುತಿ ಸಂಗೀತ ಸಂಯೋಜಿಸಿದ್ದಾರೆ. ತಾಂತ್ರಿಕ ನಿರ್ದೇಶನ ಎಂ.ಡಿ. ಕೌಶಿಕ್ ಅವರದ್ದು. ಗೌರಿ ವೆಂಕಟೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ರಮೇಶ್‍ ಕಾಮತ್, ಶರತ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.