ADVERTISEMENT

ಪ್ರಭಾಸ್‌ ಹುಟ್ಟುಹಬ್ಬ: ರಾಜಮೌಳಿ ಒಡನಾಟದಲ್ಲಿ 'ಡಾರ್ಲಿಂಗ್‌' ಕಲಿತದ್ದೇನು?

ವಿಶಾಖ ಎನ್.
Published 23 ಅಕ್ಟೋಬರ್ 2019, 6:50 IST
Last Updated 23 ಅಕ್ಟೋಬರ್ 2019, 6:50 IST
ಪ್ರಭಾಸ್
ಪ್ರಭಾಸ್   

ಅಭಿಮಾನಿಗಳ ಡಾರ್ಲಿಂಗ್‌ ಎಂದೇ ಕರೆಸಿಕೊಳ್ಳುವ ನಟ ಪ್ರಭಾಸ್‌ಗಿಂದು ಜನ್ಮದಿನ. 40ನೇ ವರ್ಷಕ್ಕೆ ಕಾಲಿಡುತ್ತಿರುವ ಈ ನಟನಿಗೆ ಟ್ವಿಟ್ಟರ್‌ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು,‘ಹ್ಯಾಪಿಬರ್ತಡೆ ಡಾರ್ಲಿಂಗ್‌’ ಎಂದೇ ಟ್ರೆಂಡ್‌ ಆಗಿದೆ. ತಾಳ್ಮೆಯಿಂದಕಷ್ಟ ಸಹಿಸಿಕೊಂಡು, ನೋವು ನುಂಗಿಕೊಂಡುಮುನ್ನುಗ್ಗಿದ‘ಬಾಹುಬಲಿ’ಯ ಬಗ್ಗೆ ನಿಮಗೆ ತಿಳಿಯದ ಒಂದಿಷ್ಟು ಮಾಹಿತಿಗಳು ಇಲ್ಲಿವೆ.

ನಿರ್ದೇಶಕ ರಾಜಮೌಳಿ ಮೊಬೈಲ್ ಕರೆಗೆ ಓಗೊಟ್ಟರು. ಕರೆ ಮಾಡಿದ್ದು ನಟ ಪ್ರಭಾಸ್. ‘ಮನೆಗೆ ನಿತ್ಯವೂ ನಿರ್ಮಾಪಕರ ದಂಡು ಬರತೊಡಗಿದೆ. ಎಲ್ಲರೂ ಹಿಂದು ಮುಂದು ಯೋಚಿಸದೆ ಮುಂಗಡ ಹಣ ಕೊಡಲು ಥೈಲಿ ಹಿಡಿದು ನಿಲ್ಲುತ್ತಾರೆ. ಏನು ಮಾಡಲಿ?’ ಕೇಳಿದರು. ‘ಒಂದು ಅಫಿಡವಿಟ್ ಮಾಡಿಸಿಕೋ.

ಆಮೇಲೆ ಆ ಹಣ ವಾಪಸ್ ಕೊಡುವಂತೆ ದುಂಬಾಲು ಬೀಳಕೂಡದೆಂದು ಅದರಲ್ಲಿ ಬರೆಸು’-ಇದು ರಾಜಮೌಳಿ ಕಿವಿಮಾತು. ಪ್ರಭಾಸ್ ನಕ್ಕರು. ‘ಪರರ ದುಡ್ಡು ಪಾಷಾಣ’ ಎಂದು ಮೊಬೈಲ್ ಕರೆ ಕಟ್ ಮಾಡಿದರು. ರಾಜಮೌಳಿ ಕೂಡ ಮಂದಸ್ಮಿತರಾದರು.

ADVERTISEMENT

‘ಬಾಹುಬಲಿ-ದಿ ಬಿಗಿನಿಂಗ್’ ತೆಲುಗು ಸಿನಿಮಾ ತೆರೆಕಂಡ ಮೇಲೆ ಪ್ರಭಾಸ್ ಮಾರುಕಟ್ಟೆ ಸೋಜಿಗ ಹುಟ್ಟಿಸುವಷ್ಟು ದೊಡ್ಡದಾಯಿತು. ಸತತ ಮೂರು ಚಿತ್ರಗಳಲ್ಲಿ ಗೆಲುವು ಕಂಡಿದ್ದ ಅವರಿಗೆ ಹಿಂದೆಂದೂ ಜನಪ್ರಿಯತೆ ನಿಭಾಯಿಸುವುದು ಇಷ್ಟು ಕಷ್ಟವೆನಿಸಿರಲಿಲ್ಲ. ರಾಜಮೌಳಿ ದೊಡ್ಡ ಕೀರ್ತಿ ಕಳಸವನ್ನು ತಲೆಮೇಲೆ ಇಟ್ಟಿದ್ದರು. ಅದು ಮೊದಮೊದಲು ವಿಪರೀತ ಭಾರ ಎನ್ನಿಸಿತ್ತು.

‘ಯಾರ ಹತ್ತಿರವೂ ಮುಂಗಡ ಹಣ ಇಸಿದುಕೊಳ್ಳಬೇಡ’ ಎಂದು ತಮ್ಮ ವ್ಯವಸ್ಥಾಪಕರಿಗೆ ಪ್ರಭಾಸ್ ಹೇಳಿ, ವರ್ಕ್‌ಔಟ್‌ಕಡೆಗೆ ಮುಖಮಾಡಿದರು.

‘ಬಾಹುಬಲಿ’ ಆಗಿದ್ದೇ ಆಗಿದ್ದು ಅಧ್ಯಯನ, ಧ್ಯಾನ, ದೇಹಾಕಾರ ಕಟೆಯುವ ಸವಾಲು ಒಟ್ಟೊಟ್ಟಿಗೆ ಹೆಗಲೇರಿದವು. ಮನೆಯಲ್ಲೇ ಅವರ ಜಿಮ್. ಬೆಳಿಗ್ಗೆ ಒಂದೂವರೆ ಗಂಟೆ ವರ್ಕ್‌ಔಟ್‌. ಹದಿನೈದು ನಿಮಿಷ ‘ಕಾರ್ಡಿಯೊ’ (ಹೃದಯದ ಆರೋಗ್ಯಕ್ಕೆ ಮಾಡುವ ವ್ಯಾಯಾಮ). ನಂತರ ಯೋಗ.

ಅದಾದ ಮೇಲೆ ಧ್ಯಾನ. ನಿತ್ಯವೂ ದೇಹದ ಸ್ನಾಯುಗಳ ಹುರಿಗಟ್ಟಿಸಲು ಸಾಮು. ಬೆಳಿಗ್ಗೆ ಒಂದೂವರೆ ಗಂಟೆಯಷ್ಟೇ ವ್ಯಾಯಾಮ ಮಾಡಿದರೆ ‘ಬಾಹುಬಲಿ’ಯ ದೇಹಾಕಾರದ ಸ್ಥಿರತೆ ಕಾಪಾಡಿಕೊಳ್ಳುವುದು ಕಷ್ಟವಿತ್ತು. ಅದಕ್ಕೇ ಸಂಜೆಯ ಒಂದೂವರೆ ಗಂಟೆ ಕೂಡ ವ್ಯಾಯಾಮಕ್ಕೇ ಮೀಸಲು. ಆಹಾರದಲ್ಲೂ ಪಥ್ಯ. ಸಿಕ್ಕಿದ್ದನ್ನೆಲ್ಲ ತಿನ್ನುವ ಹಾಗಿಲ್ಲದ ಪರಿಸ್ಥಿತಿ ಮೊದಲು ಪ್ರಭಾಸ್‌ಗೆ ಕಿರಿಕಿರಿ ಉಂಟುಮಾಡಿತು.ಅದರಿಂದ ಕ್ರಮೇಣ ಹೊರಬಂದರು.

ಪ್ರಭಾಸ್ ತಮ್ಮ ಸ್ಟಾರ್‌ಗಿರಿಯ ಬೆನ್ನುಹತ್ತಿದ ಎಲ್ಲರನ್ನೂ ಐದು ವರ್ಷ ಸುಮ್ಮನಿರಿಸಿದರು. ಹುಡುಕಿಕೊಂಡು ಬಂದ ₹10 ಕೋಟಿ ಸಂಭಾವನೆಯ ಜಾಹೀರಾತನ್ನೂ ತಿರಸ್ಕರಿಸಿದರು. ಆಮಿಷಗಳು, ಆಕರ್ಷಣೆಗಳು, ಅವಕಾಶಗಳು ಎಲ್ಲವನ್ನೂ ಸಮಚಿತ್ತದಿಂದ ಸುದೀರ್ಘ ಕಾಲ ನಿರಾಕರಿಸುವುದು ತಮಾಷೆಯ ಮಾತಲ್ಲ. ರಾಜಮೌಳಿ ತಾವು ನಂಬಿದ್ದ ನಾಯಕನ ಬದ್ಧತೆ ಕಂಡು ನಿಬ್ಬೆರಗಾದರು.

ಪ್ರಭಾಸ್ ದಿಢೀರನೆ ಸೂಪರ್‌ಸ್ಟಾರ್ ಆದವರಲ್ಲ. ಒಂದು ಕಾಲದಲ್ಲಿ ಅವರು ಹಣಕಾಸಿಗೆ ಪರದಾಡಿದ್ದವರೇ. ಕೆಲವು ನಿರ್ಮಾಪಕರು ಕೊಟ್ಟ ಚೆಕ್‌ ಬೌನ್ಸ್ ಆದಾಗ ತೊಂದರೆ ಅನುಭವಿಸಿದ್ದೂ ಇದೆ. ಆದರೆ, ‘ಬಾಹುಬಲಿ’ ಅವರ ಸಾಮಾಜಿಕ ಹಾಗೂ ಅರ್ಥ ವ್ಯವಸ್ಥೆಗೆ ಬೇರೆ ಚೌಕಟ್ಟನ್ನೇ ಹಾಕಿತು. ‘ಸ್ವಲ್ಪ ತಾಳಿಕೋ’ ಎಂಬ ರಾಜಮೌಳಿ ಮಾತೀಗ ‘ತಾಳಿದವನು ಬಾಳಿಯಾನು’ ಎಂಬ ಹಳೆಯ ನಾಣ್ಣುಡಿಯ ತೂಕವನ್ನು ಹೆಚ್ಚಿಸಿದೆ.

ತೂಕ ಎಂದೊಡನೆ ಪ್ರಭಾಸ್ ವ್ಯಾಯಾಮ ಮಾಡುವಾಗ ಎತ್ತುವ ಭಾರ ನೆನಪಾಗುತ್ತದೆ. ವ್ಯಾಯಾಮ ಮಾಡಿ ಮಾಡಿ ಅವರು ಸಲೀಸಾಗಿ 130 ಕೆ.ಜಿ. ತೂಕವನ್ನು ಎತ್ತುವ ಮಟ್ಟಕ್ಕೆ ತೋಳುಗಳನ್ನು ಗಟ್ಟಿಗೊಳಿಸಿದ್ದರು. ‘ಎಲ್ಲಿ ನನ್ನನ್ನು ಎತ್ತು ನೋಡೋಣ’ ಎಂದು ಒಮ್ಮೆ ಹಳೆಯ ಸ್ನೇಹಿತೆ ಕಣ್ಣು ಹೊಡೆದಾಗ ಪ್ರಭಾಸ್ ಮೊದಲಿನಂತೆಯೇ ನಾಚಿದ್ದರು.

ಪ್ರಭಾಸ್ ಹುರಿಗಟ್ಟಿದ ನರಗಳಲ್ಲಿ ಐದು ವರ್ಷ ಹರಿಸಿದ ಬೆವರಿನ ಕಥೆಗಳಿವೆ. ನುಂಗಿಕೊಂಡ ನೋವಿದೆ. ತಿರಸ್ಕರಿಸಿದ ಅವಕಾಶಗಳ ದೊಡ್ಡ ಪಟ್ಟಿ ಇದೆ. ಅವೆಲ್ಲವುಗಳ ಫಲಿತ ಎಂಬಂತೆ ‘ಬಾಹುಬಲಿ-ದಿ ಕನ್‌ಕ್ಲೂಷನ್’ ಗಳಿಕೆ ಸಾವಿರ ಕೋಟಿ ದಾಟಿದೆ. ಈಗ ರಾಜಮೌಳಿ ಅವರಿಗಿಂತ ಹೆಚ್ಚು ಬೆರಗಾಗಿ ಪ್ರಭಾಸ್ ಕಡೆ ನೋಡುತ್ತಿರುವವರ ಸಂಖ್ಯೆ ದೊಡ್ಡದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.