ADVERTISEMENT

ಬಿಡುಗಡೆಯ ಕಾಲ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

`ಇದುವರೆಗೂ ಈ ಬಗೆಯ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ಡಬ್ಬಿಂಗ್ ಮಾಡುವಾಗ ಕ್ಲೈಮ್ಯಾಕ್ಸ್ ನೋಡಿ ಅತ್ತುಬಿಟ್ಟೆ~ ಎಂದರು ನಟ ಯೋಗೀಶ್. ಅವರು ನಾಯಕನಾಗಿ ನಟಿಸಿರುವ `ಕಾಲಾಯ ತಸ್ಮೈ ನಮಃ~ ಈ ವಾರ ತೆರೆಕಾಣುತ್ತಿದೆ.

ಯೋಗೀಶ್ ಮಾತ್ರವಲ್ಲ, ಚಿತ್ರತಂಡದ ಪ್ರತಿಯೊಬ್ಬರೂ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರ್ದೇಶಕ ಚಂದ್ರಶೇಖರ್ ಶ್ರೀವಾಸ್ತವ್ ಸೃಷ್ಟಿಸಿರುವ ಪಾತ್ರ ಮತ್ತು ಸನ್ನಿವೇಶಗಳೇ ಹಾಗಿವೆ. ಮತ್ತೆ ಮತ್ತೆ ಕಾಡುವಂತಿವೆ ಎನ್ನುವುದು ಚಿತ್ರದಲ್ಲಿ ನಟಿಸಿರುವ ಬಹುತೇಕ ಕಲಾವಿದರ ಅನಿಸಿಕೆ.

ಇದುವರೆಗಿನ ತಮ್ಮ ಎಲ್ಲಾ ಚಿತ್ರಗಳಿಗಿಂತಲೂ `ಕಾಲಾಯ...~ ವಿಭಿನ್ನ ಹಾಗೂ ವಿಶಿಷ್ಟ ಎನ್ನುವುದು ಯೋಗಿ ಮಾತು. ಈ ಬಗೆಯ ಪಾತ್ರ ಮುಂದೆ ಮಾಡಲು ಸಿಗುವುದೇ ಅನುಮಾನ ಎಂದ ಯೋಗಿ, ಡಬ್ಬಿಂಗ್ ಮಾಡುವಾಗ ಮೊದಲ ಬಾರಿಗೆ ಅತ್ತರಂತೆ.
 
ಪ್ರತಿ ಪಾತ್ರವನ್ನೂ ರೂಪಿಸಿರುವ ರೀತಿಯೇ ಅದ್ಭುತ ಎಂದವರು ನಿರ್ದೇಶಕರ ಬೆನ್ನು ತಟ್ಟಿದರು. `ಸಿನಿಮಾ ಖಂಡಿತಾ ಗೆಲ್ಲುತ್ತೆ~ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದರು.

ಸೋತ ನಿರ್ದೇಶಕನಿಗೆ ಮತ್ತೆ ಅವಕಾಶ ನೀಡಲು ನಿರ್ಮಾಪಕ ಮುಂದಾಗುವುದಿಲ್ಲ. ಆದರೆ ನಿರ್ಮಾಪಕ ಮಾರುತಿ ತಮ್ಮ ಇತಿಹಾಸವನ್ನು ನೋಡದೆ, ಸಿನಿಮಾದ ಬಗ್ಗೆಯೂ ಪ್ರಶ್ನೆ ಮಾಡದೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು ಎಂದು ನಿರ್ದೇಶಕ ಚಂದ್ರಶೇಖರ್ ಹೇಳಿದರು.
 
ಚಿತ್ರದ ಸೋಲು-ಗೆಲುವು ಎರಡರ ಹೊಣೆಯನ್ನೂ ಹೊತ್ತುಕೊಳ್ಳಲು ಅವರು ಸಿದ್ಧರಾಗಿದ್ದಾರೆ. ಸಕಾರಾತ್ಮಕ ಬಗೆಯಲ್ಲಿ ಚಿತ್ರರಂಗದ ಗಮನ ಸೆಳೆಯಲಿದೆ ಈ ಚಿತ್ರ ಎಂಬ ವಿಶ್ವಾಸ ಅವರದು.

ಎಲ್ಲಾ ಕನಸು ಕಾಣುವಂಥ ನಿರ್ದೇಶಕರಂತೆಯೇ ಇವರು ಎಂದು ಭಾವಿಸಿದ್ದೆ. ಆದರೆ ಚಿತ್ರ ಮಾಡುವಾಗ ಅವರಲ್ಲಿನ ಪ್ರತಿಭೆ, ಶ್ರಮದ ಪರಿಚಯವಾಯಿತು.

ಸಿನಿಮಾದಲ್ಲಿರುವ ಕಥಾವಸ್ತು ಚಿನ್ನದಂತೆ. ಭೂಮಿಯ ಆಳದಲ್ಲಿರುವ ಅದನ್ನು ಅಗೆದು ಹೆಕ್ಕಿ ತಂದಿದ್ದಾರೆ ಎಂದು ಶಂಕರ್ ಅಶ್ವತ್ಥ್ ನಿರ್ದೇಶಕರನ್ನು ಪ್ರಶಂಸಿಸಿದರು.
ಇದು ನಿರ್ದೇಶಕರ ಕನಸಿನ ಕೂಸು. ಅವರು ಅಂದುಕೊಂಡಂತೆ ಚೆನ್ನಾಗಿ ಚಿತ್ರ ಮಾಡಿದ್ದಾರೆ ಎಂದರು ನಿರ್ಮಾಪಕ ಮಾರುತಿ.

`ಕೊಲವೆರಿ ಡಿ~ ಪ್ರೇರಣೆಯಿಂದ ರೂಪಿಸಿರುವ ಯೋಗಿ ಹಾಡಿದ `ಎಂಪ್ಟಿ ರೋಡು...~ ಹಾಡು ಹಿಟ್ ಆಗಿರುವುದರ ಬಗ್ಗೆ ಸಂಗೀತ ನಿರ್ದೇಶಕ ಎ.ಎಂ. ನೀಲ್ ಖುಷಿಪಟ್ಟರು.
ನಟ ರಂಗಾಯಣ ರಘು, ನಾಯಕಿ ಮಧುಬಾಲಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.