ADVERTISEMENT

ಭ್ರಷ್ಟ ವ್ಯವಸ್ಥೆಗೆ ವ್ಯಂಗ್ಯಗನ್ನಡಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 19:30 IST
Last Updated 1 ಜೂನ್ 2017, 19:30 IST
ಸಂಯಕ್ತಾ ಹೊರನಾಡು
ಸಂಯಕ್ತಾ ಹೊರನಾಡು   

‘ಈ ಚಿತ್ರದಲ್ಲಿ ನಾನು ನಿಷ್ಠಾವಂತ ನಿರುದ್ಯೋಗಿ’ – ನಟ ರವಿಶಂಕರ್‌ ಗೌಡ ಹೀಗನ್ನುತ್ತಿದ್ದಂತೆಯೇ ಪಕ್ಕದಲ್ಲಿದ್ದ ರಂಗಾಯಣ ರಘು ಎಂದಿನ ಶೈಲಿಯಲ್ಲಿ ‘ನಾನು ಎಂಎಲ್‌ಎ. ಪಕ್ಕಾ ಸರ್ಕಾರಿ ಕೆಲಸವನ್ನೇ ಮಾಡೋದು’ ಎಂದು ನಕ್ಕರು.

ಇವರ ಮಾತುಗಳನ್ನು ಕೇಳುತ್ತಲೇ ಮೈಕೆತ್ತಿಕೊಂಡ ಸಂಯುಕ್ತಾ ಹೊರನಾಡು, ‘ನಾನು ರಿಪೋರ್ಟರು’ ಎಂದರು. ಮರುಕ್ಷಣವೇ ‘ಟೀವಿ ರಿಪೋರ್ಟರಾ ಅಥವಾ ಪತ್ರಿಕೆ ವರದಿಗಾರ್ತಿಯಾ? ಎಂಬ ಪ್ರಶ್ನೆ ತೂರಿಬಂತು. ‘ಆ...’ ಎಂದು ಸಂಯುಕ್ತಾ ತಡವರಿಸುತ್ತಿರುವಾಗಲೇ ರವಿಶಂಕರ್‌ ‘ಮೊದಲು ಪತ್ರಿಕಾವರದಿ ಮಾಡುತ್ತಿರುತ್ತಾರೆ. ಕ್ಲೈಮ್ಯಾಕ್ಸ್‌ನಲ್ಲಿ ಟೀವಿ ವರದಿಗಾರ್ತಿಯಾಗ್ತಾರೆ’ ಎಂದು ಉತ್ತರಿಸಿ ನಕ್ಕುಬಿಟ್ಟರು.

‘ಸರ್ಕಾರಿ ಕೆಲಸ ದೇವರ ಕೆಲಸ’ ಸಿನಿಮಾದ ಕಲಾವಿದರು ಮೊದಲ ಬಾರಿಗೆ ಪತ್ರಕರ್ತರ ಮುಂದೆ ಕೂತಿದ್ದರು. ಈ ಮೊದಲು ಟೀಸರ್‌ ಬಿಡುಗಡೆ, ಹಾಡುಗಳ ಬಿಡುಗಡೆ ಸಂದರ್ಭಗಳಲ್ಲಿ ಚಿತ್ರದ ಬಗ್ಗೆ ಮತ್ತೊಮ್ಮೆ ಮಾಹಿತಿ ಕೊಡುತ್ತೇವೆ ಎಂದೇ ಹೇಳುತ್ತಾ ಬಂದಿತ್ತು ಚಿತ್ರತಂಡ.

ADVERTISEMENT

ಅಶ್ವಿನಿ ರಾಮ್‌ಪ್ರಸಾದ್‌ ನಿರ್ಮಾಣದ ಈ ಚಿತ್ರವನ್ನು ಆರ್‌. ರವೀಂದ್ರ ನಿರ್ದೇಶಿಸಿದ್ದಾರೆ. ಇಂದು (ಜೂನ್‌ 02) ಈ ಚಿತ್ರ ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಸಮಕಾಲೀನ ರಾಜಕೀಯ ಪರಿಸ್ಥಿತಿಗೆ ವ್ಯಂಗ್ಯಗನ್ನಡಿ ಹಿಡಿಯುವ ಈ ಚಿತ್ರಕ್ಕೆ ‘ಮಠ’ ಗುರುಪ್ರಸಾದ್‌ ಸಂಭಾಷಣೆಯ ಮೊನಚೂ ಇರುವುದು ವಿಶೇಷ.

ರವಿಶಂಕರ್‌ ಗೌಡ ಮತ್ತು ಸಂಯುಕ್ತಾ ಹೊರನಾಡು ಈ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ಸುಚೇಂದ್ರಪ್ರಸಾದ್‌, ರಾಜು ತಾಳಿಕೋಟೆ, ನರ್ಸ್‌ ಜಯಲಕ್ಷ್ಮೀ, ಸೇರಿದಂತೆ ಕಲಾವಿದರ ದಂಡೇ ಇದೆ.

‘ಮಧ್ಯಮ ಮತ್ತು ಕೆಳವರ್ಗದ ಜನರು ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳಲು ಹೊರಡುವಾಗ ಎದುರಿಸುವ ಸಂಕಷ್ಟಗಳನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಜನರನ್ನು ಹೇಗೆ ಶೋಷಿಸುತ್ತಾರೆ ಎನ್ನುವುದನ್ನು ತೋರಿಸಲಾಗಿದೆ. ಜತೆಗೆ ಭ್ರಷ್ಟತೆಯ ವಿರುದ್ಧ ಜನರು ಸಿಡಿದೆದ್ದರೆ ಪರಿಣಾಮ ಏನಾಗಬಹುದು ಎಂಬುದನ್ನೂ ಹೇಳಿದ್ದೇವೆ’ ಎಂದು ಮಾಹಿತಿ ನೀಡಿದರು ರವಿಶಂಕರ್‌.

ಚಿತ್ರ ಈಗ ಸೆನ್ಸಾರ್‌ ಮಂಡಳಿಯ ಅಂಗಳದಲ್ಲಿದ್ದು, ಜುಲೈ ಮೊದಲ ವಾರದಲ್ಲಿ ತೆರೆಗೆ ತರಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಚಿತ್ರತಂಡ. ‘ಭ್ರಷ್ಟತೆ ವಂಚನೆಯನ್ನೇ ಉಸಿರಾಡುತ್ತಿರುವವರ ನಡುವೆ ಅವರ ತಂತ್ರವನ್ನು ಅವರಿಗೇ ತಿರುಮಂತ್ರ ಮಾಡುವ ವ್ಯಕ್ತಿ ಬಂದಾಗ ಏನಾಗುತ್ತದೆ ಎಂದು ಈ ಸಿನಿಮಾದಲ್ಲಿ ಹೇಳಲಾಗಿದೆ’ ಎಂದು ರಂಗಾಯಣ ರಘು ಮತ್ತೊಂದು ಕೋನದಲ್ಲಿ ಚಿತ್ರದ ಎಳೆಯನ್ನು ಹೇಳಿದರು.

ನೈಜ ಘಟನೆಗಳನ್ನೇ ಆಧರಿಸಿ ರೂಪಿಸಲಾಗುವ ಈ ಚಿತ್ರದಲ್ಲಿ, ‘ವ್ಯವಸ್ಥೆಯನ್ನು ಸರಿಮಾಡುವ ಮನಸ್ಥಿತಿ ಜನರಲ್ಲಿಯೇ ಹುಟ್ಟಿಕೊಳ್ಳಬೇಕು’ ಎನ್ನುವ ಸಂದೇಶವೂ ಇದೆಯಂತೆ. ‘ಜನರು ಈಗಾಗಲೇ ಈ ಸಿನಿಮಾದ ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಅದಕ್ಕೂ ಜನರು ಒಳ್ಳೆಯ ರೀತಿಯಲ್ಲಿ ಸ್ಪಂದಿಸುವ ವಿಶ್ವಾಸವಿದೆ’ ಎಂದರು ರವೀಂದ್ರ.

ಈ ಚಿತ್ರದ ಒಂದು ಹಾಡನ್ನು ಸ್ಪರ್ಶಾ ಆರ್‌. ಕೆ. ಮತ್ತು ಅನನ್ಯಾ ಭಟ್‌ ಅವರು ಕವರ್‌ ಸಾಂಗ್‌  ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಯೂ ಟೈಟಲ್‌ ಸಾಂಗ್‌ ಅನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.