ADVERTISEMENT

ಮತ್ತೆ ಬಂದ ‘ಗಾಂಧಿ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ತಮ್ಮಂಥ ಪ್ರತಿಭೆಗೆ ಗಾಂಧಿನಗರದಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಹಳಹಳಿಕೆ ಬಿ. ಶಿವಾನಂದ ಅವರಲ್ಲಿ ಕಾಣಿಸುತ್ತಿತ್ತು. ಅದನ್ನು ಮೀರಿ ನಿಲ್ಲಲೆಂದೇ ನಿರ್ದೇಶನದ ಜತೆಗೆ ನಿರ್ಮಾಣಕ್ಕೂ ಮುಂದಾಗಿದ್ದಾಗಿ ಹೇಳಿಕೊಂಡರು. ವಿಭಿನ್ನ ಕಥಾವಸ್ತು ಹೊಂದಿರುವ ‘ಮತ್ತೆ ಸತ್ಯಾಗ್ರಹ’ ಸಿನಿಮಾ ನೋಡಿಯಾದರೂ ಕನ್ನಡ ಚಿತ್ರೋದ್ಯಮ ತಮ್ಮನ್ನು ಗುರುತಿಸಲಿದೆ ಎಂಬ ಆಶಾಭಾವನೆ ಅವರದು.

ಗಾಂಧೀಜಿಯೊಂದಿಗೆ ಅವರ ತತ್ವಗಳು ಕಣ್ಮರೆಯಾಗುತ್ತಿವೆ ಎಂಬ ಆತಂಕ ಎಲ್ಲೆಡೆ ಇದೆ. ಆದರೆ ಗಾಂಧಿ ಆದರ್ಶ ಯಾವತ್ತಿಗೂ ಪ್ರಸ್ತುತ ಎಂಬುದನ್ನು ತೋರಿಸಲು ‘ಮತ್ತೆ ಸತ್ಯಾಗ್ರಹ’ ನಿರ್ಮಿಸಿದ್ದಾರೆ ಶಿವಾನಂದ. ಸಾಕಷ್ಟು ಪ್ರತಿಭೆಯುಳ್ಳ ತಮಗೆ ಗಾಂಧಿನಗರದಲ್ಲಿ ಸಿಕ್ಕಿದ್ದು ಭರವಸೆಯೇ ಹೊರತೂ ಬೇರೇನಿಲ್ಲ ಎಂದು ಸಿನಿಮಾದ ಹಾಡುಗಳ ಸಿ.ಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಹೇಳಿಕೊಂಡರು. ‘ಹಿಂದೆ ಗಾಂಧೀಜಿ ನೇತೃತ್ವದಲ್ಲಿ ಸತ್ಯಾಗ್ರಹ ನಡೆದಿತ್ತು. ಈ ಚಿತ್ರದಲ್ಲಿ ಅಂಥದೇ ಸತ್ಯಾಗ್ರಹದ ಕಥೆಯೊಂದನ್ನು ಹೇಳಿದ್ದೇನೆ. ಹಾಡೊಂದಕ್ಕೆ ಇಡೀ ಕರ್ನಾಟಕದುದ್ದಕ್ಕೂ ಚಿತ್ರೀಕರಣ ನಡೆಸಿದ ವೈಶಿಷ್ಟ್ಯ ಈ ಚಿತ್ರದ್ದು’ ಎಂದರು ಶಿವಾನಂದ.

ಸಿ.ಡಿ. ಬಿಡುಗಡೆಗೆ ಆಹ್ವಾನಿಸಿದ್ದು, ೯೩ ವರ್ಷ ವಯಸ್ಸಿನ ಸ್ವಾತಂತ್ರ್ಯ ಯೋಧ ಮಠದ ಅವರನ್ನು. ಮೌಲ್ಯಗಳ ಅಧಃಪತನ ನೋಡಿರುವ ಅವರಿಗೆ ತಮ್ಮ ಹೋರಾಟ ವ್ಯರ್ಥವಾಗಿದೆ ಎಂಬ ನೋವು ಕಾಡುತ್ತಿತ್ತು. ಆದರೂ ಗಾಂಧಿ ತತ್ವಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾದ ಶಿವಾನಂದ ಅವರ ಪ್ರಯತ್ನ ಸಾಕಷ್ಟು ಖುಷಿ ಕೊಟ್ಟಿದೆಯಂತೆ.

ಇದುವರೆಗೆ ನಟಿಸಿದ ಪಾತ್ರಕ್ಕಿಂತ ವಿಭಿನ್ನವಾಗಿ ನಾಯಕ ಯೋಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ನೇಹಾ ಪಾಟೀಲ ಅವರದು ಹಳ್ಳಿ ಹುಡುಗಿ ಪಾತ್ರ. ‘ಮೊದಲ ಬಾರಿಗೆ ಇಂಥ ಪಾತ್ರ ಸಿಕ್ಕಿದೆ. ಮಂಡ್ಯ ಭಾಷೆಯ ಸಂಭಾಷಣೆಯಂತೂ ಎಂಜಾಯ್ ಮಾಡಿದ್ದೇನೆ’ ಎಂದ ನೇಹಾ, ಅದಕ್ಕೆ ಸಾಕ್ಷಿಯಾಗಿ ಒಂದೆರಡು ಸಂಭಾಷಣೆಯನ್ನೂ ಹೇಳಿದರು! ಗಾಂಧಿ ತತ್ವ ದುರುಪಯೋಗಕ್ಕೆ ಪ್ರೇರೇಪಿಸುವ ರಾಜಕಾರಣಿಯಾಗಿ ಅನಿಲಕುಮಾರ್ ನಟಿಸಿದ್ದಾರೆ. ಶಿವಾನಂದ  ಬರೆದಿರುವ ಆರು ಹಾಡುಗಳಿಗೆ ಹೇಮಂತಕುಮಾರ ಸಂಗೀತ ನೀಡಿದ್ದಾರೆ. ಮ್ಯಾಥ್ಯೂರಾಜನ್ ಕ್ಯಾಮೆರಾ ಹಿಡಿದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.