ADVERTISEMENT

ಮನೆ ಮನೆಗೆ ಚಿಟ್ಟೆ!

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

‘ಕಿರುತೆರೆಯಲ್ಲಿ ಕಲಾತ್ಮಕತೆಗೆ ಹೆಚ್ಚಿನ ಅವಕಾಶವಿದೆ. ಧಾರಾವಾಹಿಗಳ ಮೂಲಕವೂ ಸದಭಿರುಚಿಯ ವಿಚಾರಗಳನ್ನು ಜನರಿಗೆ ಮುಟ್ಟಿಸಬಹುದು’– ಹಿರಿಯ ನಟ ಅನಂತ್‌ನಾಗ್‌ ಅವರ ಮಾತುಗಳಲ್ಲಿ ಕಿರುತೆರೆಯ ಬಿಂಬ–ಪ್ರತಿಬಿಂಬಗಳು ಇಣುಕಿದವು.

‘ಈ ಟೀವಿ’ ವಾಹಿನಿಯಲ್ಲಿ ಸೆಪ್ಟೆಂಬರ್‌ 23ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಗಂಟೆಗೆ ಪ್ರಸಾರವಾಗಲಿರುವ ‘ಚಿಟ್ಟೆ ಹೆಜ್ಜೆ’ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅನಂತನಾಗ್‌ ನಟಿಸುತ್ತಿದ್ದಾರೆ. ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯ ನಂತರ ಅವರು ಕಿರುತೆರೆಯಲ್ಲಿ ನಟಿಸುತ್ತಿರುವುದು ಈಗಲೇ.

ಕೊಳೆಗೇರಿ ಹುಡುಗನನ್ನು ಪ್ರೀತಿಸುವ ರಾಜಕಾರಣಿಯ ಮಗಳ ಪ್ರೀತಿಪ್ರೇಮದ ಕಷ್ಟ ಸುಖಗಳ ಸುತ್ತ ಕಥೆ ಗಿರಕಿ ಹೊಡೆಯಲಿದೆ. ಬದುಕಿನ ವೈರುಧ್ಯ, ಅಪರಾಧ, ಸ್ವಾರ್ಥ, ಪರಿಸರ ಕಾಳಜಿ, ಮುಂತಾದ ವಿಚಾರಗಳೂ ‘ಚಿಟ್ಟೆ ಹೆಜ್ಜೆ’ಯ ಹಾದಿಯಲ್ಲಿದೆ ಹಾದು ಹೋಗಲಿವೆ. 

‘ಧಾರಾವಾಹಿಗಳು ಜನರಲ್ಲಿ ವಿಚಾರವಂತಿಕೆಯನ್ನು ಬಿತ್ತಲು ಪ್ರಬಲ ಮಾಧ್ಯಮ. ಕಲಾತ್ಮಕ ಚಿತ್ರಗಳನ್ನು ನಿರ್ಮಿಸಿ ನಷ್ಟ ಅನುಭವಿಸುವುದಕ್ಕಿಂತ ಕಿರುತೆರೆಯಲ್ಲಿ ಹೇಳುವ ವಿಚಾರವನ್ನು ದೃಢವಾಗಿ ಹೇಳಬಹುದು’ ಎನ್ನುವುದು ಅನಂತ್‌ನಾಗ್‌ರ ಅನಿಸಿಕೆ. ‘ಮಾಲ್ಗುಡಿ ಡೇಸ್‌’ ಸಮಯದಲ್ಲೇ ಕಿರುತೆರೆಯ ಮಹತ್ವ ಅವರಿಗೆ ಅರ್ಥವಾಯಿತಂತೆ.

ಈ ಮೊದಲು ಕಿರುತೆರೆಯ ‘ಗರ್ವ’ ಮತ್ತು ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಗಳಲ್ಲಿ ಅನಂತ್‌ನಾಗ್‌ ನಟಿಸಿದ್ದರು.

‘ಚಿಟ್ಟೆ ಹೆಜ್ಜೆ’ ಕಿರುತೆರೆಯ ಸಿದ್ಧಸೂತ್ರಗಳನ್ನು ಮೀರಲಿದೆ’ ಎಂದು ಅಭಿಪ್ರಾಯಪಟ್ಟ ಮಾಹಿನಿಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್‌, ಧಾರಾವಾಹಿಯ ಪರಿಕಲ್ಪನೆಯನ್ನು ವಿವರಿಸಿದರು. ಗುಂಡ್ಯದ ಹಸಿರು ಸಿರಿಯ ನಡುವೆ ಚಿತ್ರೀಕರಣ ನಡೆಸಲಾಗಿದ್ದು, ಪಾತ್ರಗಳನ್ನು ಪರಿಸರದ ಭಾಗವಾಗಿಯೇ ಬೆಳೆಸಲಾಗಿದೆಯಂತೆ. ವಿನು ಬಳಂಜ ನಿರ್ದೇಶಿಸುತ್ತಿರುವ ಈ ದೈನಿಕ ಕಥನದ ನಿರ್ಮಾಪಕರು ನಾದಿಲ್ಲ ವೆಂಕಟಪಣಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.