ADVERTISEMENT

ರೆಕ್ಕೆ ಬಡಿದ ಜಟಾಯು!

​ಪ್ರಜಾವಾಣಿ ವಾರ್ತೆ
Published 17 ಜನವರಿ 2013, 19:59 IST
Last Updated 17 ಜನವರಿ 2013, 19:59 IST
ರೆಕ್ಕೆ ಬಡಿದ ಜಟಾಯು!
ರೆಕ್ಕೆ ಬಡಿದ ಜಟಾಯು!   

`ಸಿನಿಮಾ ರಂಗದ ಬದುಕಿನಲ್ಲಿ ನಮ್ಮ ಪ್ರತಿಭೆಯನ್ನು ನಾವೇ ಎತ್ತಿ ತೋರಿಸಬೇಕೇ ಹೊರತು ಯಾರೂ ನಮ್ಮನ್ನು ಬೆಂಬಲಿಸಿ ಮೇಲೆತ್ತುವುದಿಲ್ಲ'- ತಮ್ಮ ಸಿನಿ ಜೀವನದ ಒಟ್ಟಾರೆ ಅನುಭವದ ಸಾರ ಜಗ್ಗೇಶ್ ಮಾತಿನಲ್ಲಿತ್ತು.

`ಸಂಚಾರಿ' ಖ್ಯಾತಿಯ ರಾಜ್ ನಿರ್ದೇಶಿಸಿ ನಟಿಸಿರುವ `ಜಟಾಯು' ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭಕ್ಕೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಆಗಮಿಸಿದ್ದರು ಜಗ್ಗೇಶ್. ಸಂಗೀತ ನಿರ್ದೇಶಕ ವಿನಯಚಂದ್ರ ಅವರ ಮೇಲಿನ ಪ್ರೀತಿಯೇ ಅವರನ್ನು ಅಲ್ಲಿಯವರೆಗೂ ಕರೆದು ತರುವಂತೆ ಮಾಡಿತ್ತು.

ನಾನು ನಟ ಎಂದು ಫಲಕ ತಗುಲಿಸಿಕೊಂಡಂತೆ ರಾಜ್ ಸಹ ಧರಿಸಿದ್ದಾರೆ ಎಂದು ಅನಾರೋಗ್ಯದ ನೋವಿನಲ್ಲೂ ನಗೆಯ ಅಲೆ ಎಬ್ಬಿಸಿದರು ಜಗ್ಗೇಶ್. ನಿರ್ದೇಶಕ ರಾಜ್ ಮತ್ತು ವಿನಯ್ ಚಂದ್ರ ಅವರ ಶ್ರಮವನ್ನು ಅವರು ಶ್ಲಾಘಿಸಿದರು. ಪ್ರತಿ ಕ್ಷಣವೂ ವಿವಿಧ ದಿಕ್ಕಿನಿಂದ ಶತ್ರುಗಳನ್ನು ನಾವು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ನುಡಿಯೂ ಅವರ ಮಾತಿನಲ್ಲಿ ಸೇರಿತ್ತು.

ಸಿನಿಮಾ ಕುರಿತ ಮಾತಿಗಿಂತ ಚಿತ್ರತಂಡಕ್ಕೆ ಶುಭಹಾರೈಕೆಯ ನುಡಿಗಳೇ ಹೆಚ್ಚಾಗಿದ್ದವು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ  ಬಿ. ವಿಜಯ್‌ಕುಮಾರ್, ನಿರ್ಮಾಪಕರಾದ ಮುನಿರತ್ನ, ಉಮೇಶ್ ಬಣಕಾರ್, ಆರ್.ಎಸ್. ಗೌಡ, ಥ್ರಿಲ್ಲರ್ ಮಂಜು ಮುಂತಾದವರು ಚಿತ್ರ ಗೆಲ್ಲಲಿ ಎಂದು ಹಾರೈಸಿದರು.ಹಾಡುಗಳನ್ನು ಮೆಚ್ಚಿದ ವಿಜಯ್‌ಕುಮಾರ್ ಚಿತ್ರವೂ ಅದೇ ಗುಣಮಟ್ಟದಿಂದ ಕೂಡಿರುವ ನಂಬಿಕೆಯಿದೆ. ಹೀಗಾಗಿ ಶತದಿನ ಆಚರಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

`ಸಂಚಾರಿ' ಚಿತ್ರದಲ್ಲಿ ನನಗೆ ಸೂಕ್ತ ಸ್ಪಂದನ, ಸಹಕಾರ ಸಿಗಲಿಲ್ಲ. ಹೀಗಾಗಿ ಅದರ ಬಗ್ಗೆ ಹೆಚ್ಚು ಮಾತನಾಡದೆ ಮೌನಿಯಾದೆ. ಆದರೆ ವಿನಯ್‌ಚಂದ್ರ ಹಾಗೂ ಛಾಯಾಗ್ರಾಹಕ ನಂದಕುಮಾರ್ ನನ್ನಲ್ಲಿ ಆತ್ಮವಿಶ್ವಾಸವನ್ನು ಮರುಕಳಿಸುವಂತೆ ಮಾಡಿದರು ಎಂಬುದನ್ನು ನೆನೆದರು ರಾಜ್.

ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಈ ಚಿತ್ರ ಒದಗಿಸಿದೆ. ಇದರ ಮೂಲಕ ಅವಕಾಶಗಳು ಹುಡುಕಿಕೊಂಡು ಬರಲಿದೆ ಎಂಬ ವಿಶ್ವಾಸ ನಟಿ ಸುರಭಿ ಅವರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.