ADVERTISEMENT

ಸವಿಗಾನದ ಲೂಸಿಯಾ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

`ಚಿತ್ರೀಕರಣ ತುಂಬಾ ಚೆನ್ನಾಗಿತ್ತು. ತಂಡವೆಲ್ಲಾ ಕುಟುಂಬದ ರೀತಿ ಇತ್ತು. ಚಿತ್ರೀಕರಣ ಪಿಕ್‌ನಿಕ್ ಥರ ಇತ್ತು...' ಇಂಥ ತಥಾಕಥಿತ ಮಾತುಗಳು ಆ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಇರಲಿಲ್ಲ. ಚಿತ್ರಕಾರನೊಬ್ಬ ಚಿತ್ರಗಳ ಮೂಲಕವೇ ಮಾತನಾಡಬೇಕು ಎಂಬಂತೆ ನಿರ್ದೇಶಕ ಪವನ್ ಕುಮಾರ್ ನೇರವಾಗಿ ತೆರೆಯತ್ತ ಬೊಟ್ಟು ಮಾಡಿದರು. `ಲೂಸಿಯಾ' ಹೇಗೆ ಹುಟ್ಟಿತು, ಹೇಗೆ ಬೆಳೆಯಿತು ಎಂಬುದೆಲ್ಲಾ ಅಲ್ಲಿ ಮೂಡಿಬರುತ್ತಿತ್ತು.

ಒಂದೂವರೆ ವರ್ಷದಿಂದ ಅಲ್ಲೊಂದು ಇಲ್ಲೊಂದು ಸುದ್ದಿ ಬಿಟ್ಟರೆ ಲೂಸಿಯಾ ತಂಡ ಪತ್ರಕರ್ತರ ಮುಂದೆ ಹಾಜರಾಗಿರಲಿಲ್ಲ. ಅದಕ್ಕೂ ಉತ್ತರ ಆ ವೀಡಿಯೊ ತುಣುಕಿನಲ್ಲಿತ್ತು. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಮೈಸೂರಿನ ಪೂರ್ಣಚಂದ್ರ ತೇಜಸ್ವಿ ಅವರಿಗೆ ನವೀನ್ ಸಜ್ಜು ಎಂಬ ಅಪ್ಪಟ ಗಾಯನ ಪ್ರತಿಭೆ ದೊರೆತಿತ್ತು.

ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದ ಅವರನ್ನು ಬೆಳ್ಳಿತೆರೆಗೆ ಪಳಗಿಸುವಷ್ಟರಲ್ಲಿ ಆರೆಂಟು ತಿಂಗಳು ಕಳೆದಿದ್ದವು. ನವೀನ್ ಕೂಡ ಅಷ್ಟೇ ಧ್ಯಾನಸ್ಥರಾಗಿ ಕೆಲಸ ಮಾಡುತ್ತಿದ್ದರು. ಶಕಾರ ಸಕಾರಗಳ ವ್ಯತ್ಯಾಸ ಹೇಳಿಕೊಟ್ಟದ್ದು ಪವನ್‌ರ ಗುರು ಯೋಗರಾಜ ಭಟ್. ಪತ್ರಿಕೆಗಳನ್ನು ಗಟ್ಟಿಯಾಗಿ ಓದುತ್ತಾ, ಹಾಡುಗಳನ್ನು ಗುನುಗುತ್ತ ನವೀನ್ ಹಾಡಲು ಸಜ್ಜಾದರೆ ಯಾವುದೂ ಸರಿ ಹೊಂದುತ್ತಿಲ್ಲ.

`ಸರಿ ನಾನಿನ್ನು ಬರುವುದಿಲ್ಲ' ಎಂದು ನವೀನ್ ಗಂಟುಮೂಟೆ ಕಟ್ಟಿದ್ದರು. ಆದರೆ ತೇಜಸ್ವಿ ಅವರಿಗೆ ನವೀನ್ ಕಂಠದ ಮೇಲೆ ಅಪಾರ ಮೋಹ. ಮತ್ತೆ ಅವರನ್ನು ಎಳೆ ತಂದರು. ಒಂದು ಹಾಡಿನ ನಂತರ ಮತ್ತೊಂದು... ಹೀಗೆ ನಾಲ್ಕು ಹಾಡುಗಳನ್ನು ಅಮೋಘವಾಗಿ ಹಾಡಿದರು. ಅವುಗಳಲ್ಲಿ ಒಂದು ಈಗ ಜನರ ಬಾಯಲ್ಲಿ ನಲಿಯುತ್ತಿರುವ `ತಿನ್ಬೇಡ ಕಮ್ಮಿ ತಿನ್ಬೇಡ ಕಮ್ಮಿ' ಹಾಡು.

ಪವನ್ ಅದಾಗಲೇ `ತಿನ್ಬೇಡ ಕಮ್ಮಿ' ಸಾಹಿತ್ಯವನ್ನು ಅಂತರ್ಜಾಲದಲ್ಲಿ ಹರಿಬಿಟ್ಟು ತಮ್ಮ `ಜನತಾ ಸಿನಿಮಾ'ಗೆ ಯಾರು ಬೇಕಾದರೂ ಹಾಡಬಹುದು ಎಂದು ಸಾರಿದ್ದರು. ಆಗ ಅನೇಕ ಹೊಸ ಪ್ರತಿಭೆಗಳು ಸಿಕ್ಕವು. ಮೈಸೂರಿನ ಅನನ್ಯ ಭಟ್ ಮಾಧುರ್ಯಕ್ಕೆ ಹೆಸರಾದರೆ, ಮಂಡ್ಯದ ಬಪ್ಪಿ ಬ್ಲಾಸಮ್ ರಾಕ್ ಶೈಲಿಯಲ್ಲಿ ಅಬ್ಬರಿಸುತ್ತಿದ್ದರು. ಉದಿತ್ ಹರಿದಾಸ್ ಬಾಯಲ್ಲಿ ತತ್ವಜ್ಞಾನದ ಎಳೆಯೊಂದು ನಲಿದಾಡುತ್ತಿತ್ತು.

ಧ್ವನಿಮುದ್ರಿಕೆ ಬಿಡುಗಡೆಯಾದರೂ ಪವನ್ ಪ್ರಯೋಗಗಳು ನಿಂತಿಲ್ಲ. ಮೂಲ ಗಾಯಕರ ಧಾಟಿಯಲ್ಲಿ ಯಾರು ಬೇಕಾದರೂ ಹಾಡಬಹುದು. ಆ ಮೂಲಕ ಲೂಸಿಯಾ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಪಡೆಯಬಹುದು. ನೆಚ್ಚಿನ ತಾರೆಯರ ಅಕ್ಕಪಕ್ಕ ಕುಳಿತು ಲೂಸಿಯಾವನ್ನು ಸವಿಯಬಹುದು ಎಂದು ಸಾರುತ್ತಿದ್ದಾರೆ. ಅದಕ್ಕೆ `ಕರೋಕೆ ಗರಾಜ್ ಡಾಟ್‌ಕಾಂ'ನ ರಂಜನ್, ಶಂಕರ್‌ರ ನೆರವು ಪಡೆದಿದ್ದಾರೆ. ಆನ್‌ಲೈನ್‌ನಲ್ಲೇ ಹಾಡುವ ಅವಕಾಶ ಈ ಜಾಲತಾಣದಲ್ಲಿ ಉಂಟು.  

ಪ್ರೇಕ್ಷಕರೇ ಹಣ ಹೂಡಿ ರೂಪಿಸಿದ ಕನ್ನಡದ ಮೊದಲ ಚಿತ್ರ ಎಂದು ಲೂಸಿಯಾವನ್ನು ಚಿತ್ರತಂಡ ಬಿಂಬಿಸಿದೆ. ಆದರೆ ಗುಣಮಟ್ಟದ ದೃಷ್ಟಿಯಿಂದ ಯಾವ ರಾಜಿಯೂ ಆಗಿಲ್ಲ ಎಂಬುದನ್ನು ಚಿತ್ರದ ಕೆಲವು ತುಣುಕುಗಳು ಸಾರುತ್ತಿದ್ದವು. ಅದರ ಹಿಂದಿರುವ ಶಕ್ತಿ ಛಾಯಾಗ್ರಾಹಕ ಸಿದ್ಧಾರ್ಥ್ ನೂನಿ. ಫೈವ್ ಡಿಯಂಥ ಸಾಮಾನ್ಯ ಕ್ಯಾಮೆರಾದಲ್ಲಿಯೇ ಅಬ್ಬಾ ಎನ್ನಿಸುವಂಥ ದೃಶ್ಯ ಸಂಯೋಜನೆ ಅವರಿಂದಾಗಿದೆ. ಹಾಗಾಗಿ `ಸತೀಶ್ ನೀನಾಸಂರಂತೆಯೇ ನೂನಿ ಕೂಡ ಚಿತ್ರದ ಮತ್ತೊಬ್ಬ ನಾಯಕ' ಎಂದು ಪವನ್ ಹೊಗಳಿದರು.

ಇದು ಪ್ರೇಕ್ಷಕರ ಸಿನಿಮಾ ಎಂಬುದನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ `ಲೂಸಿಯಾ'ದ ಮೊದಲ ದಿನಗಳಿಂದಲೂ ಜೊತೆಯಲ್ಲಿರುವ ಪ್ರೇಕ್ಷಕರಾದ ಚಂದ್ರು, ವಿನಯ್ ಎಂಬುವವರು ಧ್ವನಿಮುದ್ರಿಕೆಯನ್ನು ಬಿಡುಗಡೆಗೊಳಿಸಿದರು. ಸಮಾರಂಭದ ರಂಗು ಹೆಚ್ಚಿಸಿದ್ದು ನಿರ್ದೇಶಕ ಯೋಗರಾಜ್ ಭಟ್, ನಟಿ ಶ್ರುತಿ ಹರಿಹರನ್, ನಟರಾದ ಪ್ರೇಮ್, ಅಚ್ಯುತ್‌ಕುಮಾರ್, ಆನಂದ್ ಆಡಿಯೊದ ಮೋಹನ್ ಹಾಗೂ `ಸಿನಿ ಪೊಲಿಸ್' ಸತೀಶ್‌ರ ಉಪಸ್ಥಿತಿ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.