ADVERTISEMENT

`ಸಿನಿಮಾದಲ್ಲೂ ಹೆಣ್ಣಿನ ಸ್ಥಿತಿ ಅಷ್ಟಕ್ಕಷ್ಟೆ'

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2013, 19:59 IST
Last Updated 29 ಜುಲೈ 2013, 19:59 IST
ನೀನಾ ಗುಪ್ತಾ
ನೀನಾ ಗುಪ್ತಾ   

ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ವಯಸ್ಕ ಮಹಿಳೆಯರು ಉಪಯೋಗಕ್ಕೆ ಬಾರದವರು ಎಂಬ ಮನೋಭಾವ ಇದೆ. ಅದೇ ಕುರುಹುಗಳು ಸಿನಿಮಾಗಳಲ್ಲೂ ವ್ಯಕ್ತವಾಗುತ್ತಿವೆ ಎಂದು ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನೀನಾ ಗುಪ್ತಾ ನೋವು ತೋಡಿಕೊಂಡಿದ್ದಾರೆ.

1980ರಲ್ಲಿ ಸಿನಿಮಾರಂಗ ಪ್ರವೇಶಿಸಿದ ನೀನಾ ಅನೇಕ ಜನಪ್ರಿಯ ಸಿನಿಮಾಗಳಲ್ಲಿ ಅಭಿನಯಿಸಿ, ಸೈ ಎನಿಸಿಕೊಂಡಿದ್ದಾರೆ. `ಹತ್ತಾರು ವರ್ಷ ಬೇಡಿಕೆಯ ನಟಿಯಾಗಿ ಮೆರೆದಂಥ ಅನೇಕ ನಟಿಯರಿಗೆ ವಯಸ್ಸಾಗುತ್ತಿದ್ದಂತೆ ಸಿನಿಮಾಗಳಲ್ಲಿ ಅವಕಾಶಗಳೇ ಸಿಗುತ್ತಿಲ್ಲ. ಇದು ನನ್ನೊಬ್ಬಳ ವ್ಯಥೆ ಅಲ್ಲ. ನಾನೂ ಇತ್ತೀಚೆಗೆ ತೆರೆ ಮೇಲೆ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅವಕಾಶ ಇಲ್ಲದಿರುವುದೇ ಇದಕ್ಕೆ ಕಾರಣ' ಎಂದು ನಿರ್ದಾಕ್ಷಿಣ್ಯವಾಗಿ ಹೇಳಿಕೊಂಡಿದ್ದಾರೆ.

`ಭಾರತೀಯ ಸಮಾಜದ ಮನೋಭಾವವೇ ಸಿನಿಮಾಗಳಲ್ಲೂ ವ್ಯಕ್ತವಾಗುತ್ತಿದೆ' ಎಂದಿರುವ ಅವರಿಗೆ ತಮಗೇ ಹೆಚ್ಚಿನ ಅವಕಾಶ ಸಿಗಬೇಕು, ನಟನೆಯಲ್ಲೇ ಮಿಂಚಬೇಕು ಎಂಬ ಅತಿಯಾದ ನಿರೀಕ್ಷೆಯೇನೂ ಇಲ್ಲವಂತೆ. ಆದರೂ ಜನರ ಹಾಗೂ ಸಿನಿಮಾದವರ ಮನೋಭಾವ ಅವರಿಗೆ ನೋವು ತಂದಿದೆಯಂತೆ.

ನೀನಾ 1983ರಲ್ಲಿ ನಟಿಸಿದ `ಜಾನೆ ಭಿ ದೊ ಯಾರೊ' ಸಿನಿಮಾಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಸಂದಿತ್ತು. `ಗಾಂಧಿ', `ದಿ ಡಿಸೀವರ್ಸ್‌', `ಕಾಟನ್ ಮೇರಿ' ಮುಂತಾದ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕವೇ ಹೆಸರಾದ ನಟಿ ಅವರು.

ಅವಕಾಶ ಕಡಿಮೆ ಆಗಿರುವುದಷ್ಟೇ ಅಲ್ಲದೆ ಇತ್ತೀಚೆಗೆ ನಟಿಸಿದ ಮನೀಶ್ ತಿವಾರಿ ಅವರ ನಿರ್ದೇಶನದ `ಇಸಕ್' ಸಿನಿಮಾದಲ್ಲಿ ಅವರ ಅಭಿನಯದ ಅನೇಕ ದೃಶ್ಯಗಳನ್ನು ತೆಗೆದುಹಾಕಿರುವುದು ನೀನಾ ನೋವನ್ನು ಇಮ್ಮಡಿಗೊಳಿಸಿದೆ. `ಇಸಕ್ ಸಿನಿಮಾದಲ್ಲಿ ಪಾತ್ರಕ್ಕೆ ಪ್ರಾಧಾನ್ಯ ಇದ್ದಿದ್ದರಿಂದ ಒಪ್ಪಿಕೊಂಡೆ. ಆದರೆ ಸಿನಿಮಾ ತುಂಬಾ ದೊಡ್ಡದಾಗಿದೆ ಎಂಬ ಕಾರಣಕ್ಕೆ ನಾನು ನಟಿಸಿದ ಹಲವಾರು ದೃಶ್ಯಗಳನ್ನು ಕತ್ತರಿಸಲಾಗಿದೆ.

ಎಲ್ಲಾ ನಟಿಯರಿಗೂ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಹಾಗೂ ಉತ್ತಮ ನಟನೆ ತೋರಬೇಕು ಎಂಬ ಆಸೆ ಇರುತ್ತದೆ. ಇದು ವೃತ್ತಿ ಬದುಕಿನ ಆಶಯವೂ ಹೌದು. ಇಸಕ್ ಸಿನಿಮಾ ನನಗೆ ದೊಡ್ಡ ಸವಾಲು ಎಂದೇ ಭಾವಿಸಿದ್ದೆ. ಇದೇ ಕಾರಣಕ್ಕೆ ಪಾತ್ರವನ್ನು ಒಪ್ಪಿಕೊಂಡು ಅಭಿನಯಿಸಿದೆ. ಆದರೆ ದೃಶ್ಯಗಳನ್ನು ತೆಗೆದುಹಾಕಿರುವುದು ನೋವು ಉಂಟುಮಾಡಿದೆ' ಎಂದಿದ್ದಾರೆ ನೀನಾ.

ಅನೇಕ ಧಾರಾವಾಹಿಗಳಲ್ಲೂ ನಟಿಸಿರವ ನೀನಾ `ಖಾಂದಾನ್', `ಮಿರ್ಜಾ ಗಾಲಿಬ್', `ದರ್ದ್', `ಬಾಜಾರ್' ಟೆಲಿಸಿನಿಮಾಗಳಲ್ಲೂ ಬಣ್ಣಹಚ್ಚಿದ್ದಾರೆ. `ಗುಮ್ರಾ', `ಸಾಂಸ್'ನಂಥ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಟ್ಟಿದ್ದಾರೆ. ದಶಕಗಳ ಈ ಬೆಳವಣಿಗೆಯನ್ನು ವೀಕ್ಷಿಸಿರುವ ಅವರು `ಭಾರತೀಯ ಸಿನಿಮಾ ದಿನದಿಂದ ದಿನಕ್ಕೆ ಅನೇಕ ಬದಲಾವಣೆಗಳನ್ನು ಕಾಣುತ್ತಾ ಬಂದಿದೆ. ಅದರಲ್ಲಿ ಸಕಾರಾತ್ಮಕ, ನಕಾರಾತ್ಮಕ ಎರಡೂ ಅಂಶಗಳಿವೆ' ಎಂದಿದ್ದಾರೆ.

ತಾವು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವುದೇ ನಿರ್ದಿಷ್ಟ ನಿಯಮಗಳನ್ನು ಅನುಸರಿಸುವುದಿಲ್ಲ ಎಂದಿರುವ ಅವರು, ಹೊಸತನ ತುಂಬಿದ ಹಾಗೂ ಸವಾಲೆಸೆಯುವಂಥ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರಂತೆ. ಬ್ಯುಸಿಯಾಗಲು ಬದುಕಿನಲ್ಲಿ ಸಿನಿಮಾ ಮೀರಿದ ವಿಷಯಗಳು ಸಾಕಷ್ಟಿವೆ ಎಂಬುದು ಅವರ ಅನುಭವದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.