ADVERTISEMENT

ಹತ್ತರ ಹರುಷ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST
ಹತ್ತರ ಹರುಷ
ಹತ್ತರ ಹರುಷ   

ದರ್ಶನ್ ಬರುತ್ತಾರೆಂದು ನಿರೀಕ್ಷಿಸಲಾಗಿತ್ತು. ಅವರು ಬರಲಿಲ್ಲ. ಬಂದವರು, ದರ್ಶನ್ ಪತ್ನಿ ವಿಜಯಲಕ್ಷ್ಮಿ. ನಿರ್ಮಾಪಕ ಭಾ.ಮ. ಹರೀಶ್ ತಮ್ಮ `ಉಲ್ಲಾಸ್ ಕ್ರಿಯೇಷನ್ಸ್~ಗೆ ಹತ್ತು ವರ್ಷ ತುಂಬಿದ ನೆನಪಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮ.
 
`ದಶಕದ ದರ್ಶನ - ಸತ್ಯ ಉಲ್ಲಾಸ~ ಎನ್ನುವುದು ಕಾರ್ಯಕ್ರಮದ ಶೀರ್ಷಿಕೆ. 2002ರಿಂದ ಈವರೆಗೆ `ಉಲ್ಲಾಸ್ ಕ್ರಿಯೇಷನ್ಸ್~ ಸಾಗಿಬಂದ ಹಾದಿಯಲ್ಲಿ ಜೊತೆಯಾದವರನ್ನು ಅಭಿನಂದಿಸಲು ಹರೀಶ್ ಕಾರ್ಯಕ್ರಮ ಏರ್ಪಡಿಸಿದ್ದರು.
 
ಅವರ ನಿರ್ಮಾಣದ ಚೊಚ್ಚಿಲ ಚಿತ್ರ `ಮೆಜೆಸ್ಟಿಕ್~ನ ನಾಯಕನಟ ದರ್ಶನ್ ಅವರಿಗೆ ಅಭಿನಂದನೆ ಎಂದೇ ಕಾರ್ಯಕ್ರಮವನ್ನು ಬಿಂಬಿಸಲಾಗಿತ್ತು. ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಗೌರವ ಸ್ವೀಕರಿಸಿದರು.
 
`ಸಾಧಾರಣ ತರುಣನಾಗಿದ್ದ ದರ್ಶನ್ ಅವರ ಬದುಕಿನಲ್ಲಿ `ಮೆಜೆಸ್ಟಿಕ್~ ಚಿತ್ರ ಹೊಸ ತಿರುವು ನೀಡಿತು. ಅದಕ್ಕಾಗಿ ಉಲ್ಲಾಸ್ ಕ್ರಿಯೇಷನ್ಸ್‌ಗೆ ನಮ್ಮ ಕುಟುಂಬ ಋಣಿಯಾಗಿದೆ~ ಎಂದು ವಿಜಯಲಕ್ಷ್ಮಿ ಹೇಳಿದರು.

`ಮೆಜೆಸ್ಟಿಕ್~ನ ನಿರ್ದೇಶಕ ಪಿ.ಎನ್. ಸತ್ಯ ಅವರನ್ನು ಕೂಡ `ಉಲ್ಲಾಸ್~ ಬಳಗ ಗೌರವಿಸಿತು. ಹರೀಶ್ ನಿರ್ಮಾಣದ ಮತ್ತೊಂದು ಚಿತ್ರ `ಶಿಷ್ಯ~ದ ನಿರ್ದೇಶಕ ವಿಕ್ಟರಿ ವಾಸು ಕೂಡ ಅಭಿನಂದಿತರಲ್ಲಿ ಸೇರಿದ್ದರು.

ಹತ್ತು ವರ್ಷಗಳ ಹಿಂದಿನ ಗೆಲುವನ್ನು ನೆನಪಿಸಿಕೊಂಡ ನಿರ್ದೇಶಕ ಸತ್ಯ, `ಹತ್ತು ವರ್ಷಗಳ ಹಿಂದೆ ನಾನು ಹೇಳಿದ ಕಥೆಯನ್ನು ನೆಚ್ಚಿಕೊಂಡು ಹರೀಶ್ ಅವಕಾಶ ನೀಡಿದರು. ನನ್ನ ತಂದೆಯಂತೆ ಕೈಹಿಡಿದು ಬೆಂಬಲಿಸಿದರು. ಅವರನ್ನು ಎಂದಿಗೂ ಮರೆಯಲಾರೆ. ಈಗ ಅವರಿಂದ ಮತ್ತೊಂದು ಅವಕಾಶ ನಿರೀಕ್ಷಿಸುತ್ತಿರುವೆ~ ಎಂದು ಮಾತಿನಲ್ಲೇ ಧನ್ಯವಾದ ಸಮರ್ಪಣೆಯೊಂದಿಗೆ ಮನವಿ ಪತ್ರವನ್ನೂ ಸಲ್ಲಿಸಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಸಾ.ರಾ. ಗೋವಿಂದ್, ಥಾಮಸ್ ಡಿಸೋಜ, ಹಂಚಿಕೆದಾರ ಪ್ರಸಾದ್, ನಟ ದೀಪಕ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರ್ಮಾಪಕರು ಗೆಲ್ಲಬೇಕಾದ ಅನಿವಾರ್ಯತೆಯ ಬಗ್ಗೆ ಗೋವಿಂದು ಭಾವುಕತೆಯಿಂದ ಮಾತನಾಡಿದರು.

`ನಿರ್ಮಾಪಕರು ಗೆದ್ದರೆ ಚಿತ್ರೋದ್ಯಮ ಉಳಿಯುತ್ತದೆ~ ಎಂದ ಅವರು, ಭಾ.ಮ.ಹರೀಶ್ `ಗಟ್ಟಿ ನಿರ್ಮಾಪಕ~ರಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು. `ಮೆಜೆಸ್ಟಿಕ್~, `ಶಿಷ್ಯ~ ಚಿತ್ರಗಳ ನಂತರ ಇದೀಗ `ಮಾಗಡಿ~ ಎನ್ನುವ ಚಿತ್ರವನ್ನು ಹರೀಶ್ ನಿರ್ಮಿಸಿದ್ದಾರೆ.

`ಶಿಷ್ಯ~ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ದೀಪಕ್ `ಮಾಗಡಿ~ಯಲ್ಲೂ ನಾಯಕ. `ಉಲ್ಲಾಸ~ ಮುಂದುವರೆಯಲಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಂಧುಮಿತ್ರರು ಹಾರೈಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.