ADVERTISEMENT

ಡಿಸೆಂಬರ್‌ನಲ್ಲಿ ‘ಥರ್ಡ್ ಕ್ಲಾಸ್’ ಬೆಳ್ಳಿತೆರೆಗೆ!

ಚಿತ್ರದ ನಾಯಕನಟ ನಮ್ಮ ಜಗದೀಶ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 11:16 IST
Last Updated 17 ನವೆಂಬರ್ 2019, 11:16 IST
ನಮ್ಮ ಜಗದೀಶ್, ರೂಪಿಕಾ ಥರ್ಡ್‌ ಕ್ಲಾಸ್ ಸಿನಿಮಾ ಕುರಿತು ಮಾತನಾಡಿದರು.
ನಮ್ಮ ಜಗದೀಶ್, ರೂಪಿಕಾ ಥರ್ಡ್‌ ಕ್ಲಾಸ್ ಸಿನಿಮಾ ಕುರಿತು ಮಾತನಾಡಿದರು.   

ಚಿತ್ರದುರ್ಗ: ‘ತಂದೆ, ಮಗಳ ಉತ್ತಮ ಬಾಂಧವ್ಯ ಹೊಂದಿರುವ ‘ಥರ್ಡ್ ಕ್ಲಾಸ್’ ಸಿನಿಮಾ ಡಿಸೆಂಬರ್‌ 6ರಂದು ರಾಜ್ಯದ 200 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ’ ಎಂದು ಚಿತ್ರದ ನಾಯಕನಟ ನಮ್ಮ ಜಗದೀಶ್ ಹೇಳಿದರು.

‘ಉತ್ತಮ ಕಥೆ, ಸಾಹಿತ್ಯ, ಹಾಡುಗಳು ಇರುವ ಥರ್ಡ್ ಕ್ಲಾಸ್ ಸಿನಿಮಾವು ಸಾಮಾಜಿಕ ಹೊಣೆಗಾರಿಕೆಯ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಚಿತ್ರಕ್ಕೆ ದಸ್ತಗಿರಿ ಸಂಗೀತ ನೀಡಿದ್ದಾರೆ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯದಲ್ಲಿ ಐದು ಹಾಡುಗಳು ಹೊರಹೊಮ್ಮಿದ್ದು, ಉತ್ತಮವಾಗಿ ಮೂಡಿಬಂದಿವೆ’ ಎಂದರು.

ADVERTISEMENT

‘ಹಿರಿಯ ಕಲಾವಿದರಾದ ಅವಿನಾಶ್, ರಮೇಶ್ ಭಟ್ ಹಾಗೂ ಮಜಾಭಾರತದ ಪವನ್ ನಟಿಸಿದ್ದಾರೆ. ಬೆಂಗಳೂರಿನ ಸುತ್ತಮುತ್ತ, ಕೇರಳ, ಗೋವಾದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಚಿತ್ರದ ಧ್ವನಿ ಸುರಳಿಯನ್ನು ಅಂಧ ಮಕ್ಕಳು ಹಾಗೂ ಮಾಜಿ ಸೈನಿಕರಿಂದ ಬಿಡುಗಡೆ ಮಾಡಿಸಲಾಯಿತು’ ಎಂದು ಹೇಳಿದರು.

ಸಾಮಾಜಿಕ ಕಳಕಳಿಗೂ ಬದ್ಧ:‘ಚಿತ್ರದಿಂದ ಬರುವಂಥ ಹಣದಲ್ಲಿ ಇಂತಿಷ್ಟು ಪಾಲನ್ನು ದೇಶಕ್ಕಾಗಿ ಹುತಾತ್ಮರಾದ ಸೈನಿಕರ ಮಕ್ಕಳ ಉಚಿತ ಶಿಕ್ಷಣಕ್ಕಾಗಿ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಹಾಗೂ 25 ಸಾವಿರ ಆಟೊ ಚಾಲಕರಿಗೆ ವಿಮೆ ಮಾಡಿಸುವ ಗುರಿ ಹೊಂದಲಾಗಿದೆ. ಶ್ರಮಿಕ ವರ್ಗಕ್ಕೆ ಸಹಾಯಹಸ್ತ ಚಾಚುವ ಸಾಮಾಜಿಕ ಕಾಳಜಿಯನ್ನು ಚಿತ್ರ ತಂಡ ಹೊಂದಿದೆ’ ಎಂದು ಮಾಹಿತಿ ನೀಡಿದರು.

ನಟಿ ರೂಪಿಕಾ, ‘ಥರ್ಡ್‌ ಕ್ಲಾಸ್ ಸಿನಿಮಾ ನನ್ನ 15ನೇ ಚಿತ್ರವಾಗಿದೆ. ಟೀಸರ್ ಈಗಾಗಲೇ ಜನರಿಗೆ ಇಷ್ಟವಾಗುತ್ತಿದೆ. ಬಹಳಷ್ಟು ಮಂದಿಗೆ ಈಗಾಗಲೇ ಹಾಡುಗಳು ತಲುಪಿವೆ. ಇದರಲ್ಲಿ ಗೃಹಮಂತ್ರಿಯ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

‘ನಾನೂ ಭರತ ನಾಟ್ಯ ಮತ್ತು ರಂಗಭೂಮಿ ಕಲಾವಿದೆಯಾಗಿದ್ದು, ಹಲವಾರು ಪ್ರದರ್ಶನಗಳನ್ನು ನೀಡಿ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಚಿತ್ರದುರ್ಗದಿಂದಲೇ ಸಿನಿಮಾಕ್ಕೆ ಪರಿಚಯವಾಗಿದ್ದೇನೆ. ಹಲವಾರು ಪ್ರಮುಖ ಕಲಾವಿದರ ಜತೆಗೂ ನಟಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.