2016ರಲ್ಲಿ ನಡೆದ ನೋಟು ಅಮಾನ್ಯೀಕರಣವನ್ನು ಆಧಾರವಾಗಿಟ್ಟುಕೊಂಡು ಸೌರಭ್ ಶುಕ್ಲ ಹೆಣೆದ ‘1888’ ಸಿನಿಮಾ ಹಲವು ಡಿಜಿಟಲ್ ವೇದಿಕೆಗಳಲ್ಲಿ ಪ್ರಸಾರವಾಗುತ್ತಿದೆ.
ಆ್ಯಪಲ್ ಟಿ.ವಿ., ಯುಟ್ಯೂಬ್, ಬುಕ್‌ಮೈಶೋ, ಮೂವಿ ಸೈಂಟ್ಸ್ ವೇದಿಕೆಗಳಲ್ಲಿ ಬಾಡಿಗೆ ಆಧಾರದಲ್ಲಿ ಸಿನಿಮಾ ದೊರೆಯುತ್ತಿದ್ದು, ವಿಡಿಒಜಾರ್‌ನಲ್ಲಿ ಈ ಸಿನಿಮಾವನ್ನು ಉಚಿತವಾಗಿ ನೋಡಬಹುದು. ಈ ಸಿನಿಮಾ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನವನ್ನೂ ಕಂಡಿದೆ ಹಾಗೂ ಪ್ರಶಸ್ತಿಗಳನ್ನು ಗಳಿಸಿದೆ. ಈ ಸಿನಿಮಾ ಮೂರು ಪಾತ್ರಗಳ ಸುತ್ತ ಸುತ್ತುತ್ತದೆ. ನೋಟು ಅಮಾನ್ಯೀಕರಣ ಆದ ಸಂದರ್ಭದಲ್ಲಿ ರಾಜಕಾರಣಿಯಾದ ಓರ್ವ ನಟಿ, ಒಬ್ಬ ಎಲ್‌ಐಸಿ ಏಜೆಂಟ್ ಹಾಗೂ ವ್ಯಕ್ತಿಯೊಬ್ಬ ಹಣ ತುಂಬಿದ ಬ್ಯಾಗ್ ಒಂದರ ಹಿಂದೆ ಬೀಳುತ್ತಾರೆ. ತನಿಖಾ ಏಜೆನ್ಸಿಯೂ ಇವರ ಹಿಂದೆ ಬಿದ್ದಾಗ ಕಥೆ ತಿರುವು ಪಡೆಯುತ್ತಾ ಸಾಗುತ್ತದೆ ಎಂದಿದೆ ಚಿತ್ರತಂಡ.
‘ಈ ಸಿನಿಮಾವನ್ನು ನನ್ನನ್ನೂ ಸೇರಿಸಿಕೊಂಡು ಕೇವಲ ಮೂರ್ನಾಲ್ಕು ಜನರ ತಂಡ ರಚಿಸಿದೆ. ಇದೊಂದು ಸಣ್ಣ ಬಜೆಟ್‌ನ ಸಿನಿಮಾ. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವಷ್ಟು, ಪ್ರಚಾರ ನಡೆಸುವಷ್ಟು ಬಜೆಟ್ ನಮ್ಮಲ್ಲಿಲ್ಲ. ಹೀಗಾಗಿ ನೇರವಾಗಿ ಡಿಜಿಟಲ್ ವೇದಿಕೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದೆವು. 1 ಗಂಟೆ 55 ನಿಮಿಷದ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ‘ಗಾಳಿಪಟ’ ಖ್ಯಾತಿಯ ನೀತು, ಪ್ರತಾಪ್ ಕುಮಾರ್, ಮಂಜು ರಾಜ್ ನಟಿಸಿದ್ದಾರೆ. ನಾನು ಎಂಜಿನಿಯರಿಂಗ್ ಕೆಲಸ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಧುಮುಕಿದವ. ಒಂದಿಷ್ಟು ಜನರ ಸ್ನೇಹಿತರು ಸೇರಿ ಈ ಸಿನಿಮಾ ಮಾಡಿದ್ದೇವೆ’ ಎಂದರು ನಿರ್ದೇಶಕ ಸೌರಭ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.