ADVERTISEMENT

ನೊಯಿಡಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ‘ತಾಯಿ ಕಸ್ತೂರ್‌ ಗಾಂಧಿ’ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 12:52 IST
Last Updated 19 ಜನವರಿ 2023, 12:52 IST
   

ಬೆಂಗಳೂರು: ಕಸ್ತೂರ್‌ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‌ ಗಾಂಧಿ’ ಕನ್ನಡ ಚಿತ್ರವು ಹತ್ತನೇ ನೊಯಿಡಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.

ಬರಗೂರು ಅವರೇ ಬರೆದ ಕಾದಂಬರಿಯನ್ನು ಆಧರಿಸಿದ ಈ ಚಿತ್ರಕ್ಕೆ ಅವರೇ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ರಚಿಸಿದ್ದಾರೆ.

ಜನಮಿತ್ರ ಮೂವೀಸ್‌ನ ಬಿ.ಜಿ.ಗೀತಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತಾಯಿ ಕಸ್ತೂರ್‌ ಗಾಂಧಿ ಚಿತ್ರವು ಇಲ್ಲಿಯವರೆಗೆ ಐದಕ್ಕೂ ಹೆಚ್ಚು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ವಿದೇಶಗಳಲ್ಲಿ ಪ್ರದರ್ಶಿತವಾಗಿದೆ. ದಾದಾ ಸಾಹೇಬ್‌ ಫಾಲ್ಕೆ ಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರದ ಸಂಕಲನಕಾರ ಸುರೇಶ್‌ ಅರಸು ಅವರಿಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಲಭಿಸಿದೆ. ಕಸ್ತೂರ್‌ ಗಾಂಧಿಯವರನ್ನು ಪ್ರಧಾನ ಪಾತ್ರದಲ್ಲಿ ಚಿತ್ರಿಸಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ.

ADVERTISEMENT

‘ಕಸ್ತೂರ್‌ ಗಾಂಧಿಯವರ ಮೂಲಕ ಗಾಂಧೀಜಿಯವರನ್ನು ಕಂಡುಕೊಳ್ಳುವ ಒಳನೋಟವನ್ನು ಈ ಚಿತ್ರವು ಕೊಡುವುದರ ಜೊತೆಗೆ ಇಬ್ಬರ ಮುಖಾಮುಖಿ ಮತ್ತು ಅನುಸಂಧಾನದ ನೆಲೆಗಳನ್ನು ಅನಾವರಣಗೊಳಿಸುತ್ತದೆ. ಅಂಬೇಡ್ಕರ್‌–ಗಾಂಧಿ ಮತ್ತು ಕಸ್ತೂರ್‌ಬಾ–ಅಂಬೇಡ್ಕರ್‌ ಅವರ ಭೇಟಿಯ ಅಪೂರ್ವ ಸಂದರ್ಭಗಳನ್ನು ಇಲ್ಲಿ ನಿರೂಪಿಸಲಾಗಿದೆ. ಬಾಲ್ಯದಿಂದ ಮುಪ್ಪಿನವರೆಗಿನ ಚಿತ್ರಣವನ್ನು ಚಿತ್ರದಲ್ಲಿ ಕೊಡಲಾಗಿದೆ’ ಎಂದಿದ್ದಾರೆ ಬರಗೂರು.

ಕಸ್ತೂರ್‌ ಬಾ ಪಾತ್ರದಲ್ಲಿ ನಟಿ ಹರಿಪ್ರಿಯಾ, ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್‌ ಹಾಗೂ ಅಂಬೇಡ್ಕರ್‌ ಅವರ ಪಾತ್ರದಲ್ಲಿ ಶ್ರೀನಾಥ್‌ ಅಭಿನಯಿಸಿದ್ದಾರೆ. ನಟ ಸುಂದರರಾಜ್‌, ನಟಿ ಪ್ರಮೀಳಾ ಜೋಷಾಯ್‌ ಅವರಲ್ಲದೆ ರೇಖಾ, ಸುಂದರರಾಜ ಅರಸು, ವೆಂಕಟರಾಜು, ರಾಘವ್‌, ವತ್ಸಲಾ ಮೋಹನ್‌ ಮುಂತಾದವರು ತಾರಾಗಣದಲ್ಲಿದ್ದಾರೆ. ಮಾಸ್ಟರ್‌ ಆಕಾಂಕ್ಷ್‌ ಬರಗೂರ್‌ ಬಾಲಕ ಗಾಂಧಿಯಾಗಿ, ಕುಮಾರಿ ಸ್ಪಂದನ ಬಾಲಕಿ ಕಸ್ತೂರ್‌ ಬಾ ಆಗಿ ನಟಿಸಿದ್ದಾರೆ.

ಚಿತ್ರಕ್ಕೆ ನಾಗರಾಜ್‌ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್‌ ಸಂಗೀತ, ಮೈತ್ರಿ ಬರಗೂರು ಅವರ ಕಲಾ ನಿರ್ದೇಶನ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.