ADVERTISEMENT

'ಚತುರ' ಸಿನಿಮಾ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST
ಪೂಜಾ ಲೋಕೇಶ್‌
ಪೂಜಾ ಲೋಕೇಶ್‌   

‘ಚಂದನವನ’ದಲ್ಲಿ ತೆರೆ ಕಾಣುವ ಬಹುತೇಕ ಸಿನಿಮಾಗಳ ನಿರ್ದೇಶಕರು ‘ಇದು ವಿನೂತನ ಕಥಾಹಂದರ ಹೊಂದಿದೆ’ ಎಂದೇ ಹೇಳಿಕೊಳ್ಳುತ್ತಾರೆ. ಅದೇ ರೀತಿ, 'ಚತುರ' ಎನ್ನುವ ಹೊಸ ಸಿನಿಮಾದ ನಿರ್ದೇಶಕ ಸತ್ಯ ಸಾಮ್ರಾಟ್ ಅವರೂ ಈ ಸಿನಿಮಾದ ಕಥೆಯಲ್ಲಿ ಹೊಸತನ ಇದೆ ಎಂದು ಹೇಳಿದ್ದಾರೆ. ಕಥೆಯ ಒಂದು ಎಳೆಯನ್ನು ಅವರು ಸುದ್ದಿಗಾರರಿಗೆ ಬಿಟ್ಟುಕೊಟ್ಟಿದ್ದಾರೆ. ‘ಹುಡುಗಿಯೊಬ್ಬಳು ಹಳ್ಳಿಯಿಂದ ಕಾಣೆಯಾಗಿ ಪೇಟೆ ಸೇರಿಕೊಂಡಾಗ ಆಕೆಯನ್ನು ಜನ ಹೇಗೆ ಕಾಣುತ್ತಾರೆ, ಪೊಲೀಸರು ಆಕೆಯನ್ನು ಹೇಗೆ ಪತ್ತೆ ಮಾಡುತ್ತಾರೆ ಎಂಬುದು ಸಿನಿಮಾದ ಹೂರಣ’ ಎಂದು ಸತ್ಯ ಅವರು ಹೇಳಿದ್ದಾರೆ.

ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು. ಮುಹೂರ್ತ ಸಮಾರಂಭದ ನೆವದಲ್ಲೇ ಸುದ್ದಿಗೋಷ್ಠಿ ನಡೆಸಿದ ಸಿನಿತಂಡ, ಚಿತ್ರದ ಬಗ್ಗೆ ಕೆಲವಷ್ಟು ಮಾಹಿತಿಯನ್ನು ಸುದ್ದಿಗಾರರಿಗೆ ನೀಡಿತು. ಈ ಚಿತ್ರದಲ್ಲಿ ಮುನಿ ಅವರು ನಾಯಕನಾಗಿ, ಪೂಜಾ ಲೋಕೇಶ್ ಅವರು ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

‘ನಮ್ಮ ಸಮಾಜದಲ್ಲಿ ನೂರು ಜನ ಕಾಣೆಯಾದರೆ, ಅವರ ಪೈಕಿ 70 ಜನ ಪುನಃ ಸಿಗುವುದೇ ಇಲ್ಲ. ಅವರೆಲ್ಲ ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಕಂಡುಹಿಡಿಯವ ಪ್ರಯತ್ನ ಈ ಚಿತ್ರದಲ್ಲಿ ಇದೆ’ ಎಂದರು ಸತ್ಯ. ಈ ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆ ಹೊಣೆಯನ್ನೂ ಸತ್ಯ ಅವರೇ ವಹಿಸಿಕೊಂಡಿದ್ದಾರೆ. ಚಿತ್ರೀಕರಣವು ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಸುತ್ತಮುತ್ತ ನಡೆಯಲಿದೆ.

ADVERTISEMENT

ಖಳ ಮತ್ತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಮುನಿ ಅವರು ಈ ಚಿತ್ರದ ಮೂಲಕ ನಾಯಕ ನಟನಾಗಿ ರೂಪಾಂತರ ಹೊಂದುತ್ತಿದ್ದಾರೆ. ನಟಿ ಪೂಜಾ ಲೋಕೇಶ್ ಬಹಳ ದಿನಗಳ ನಂತರ ನಾಯಕಿಯಾಗಿ ನಟಿಸುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಪೂಜಾ ಲೋಕೇಶ್, ‘ಇದು ನನ್ನ ಎರಡನೇ ಇನ್ನಿಂಗ್ಸ್. ತುಂಬಾ ಶಕ್ತಿಯುತವಾದ ಪಾತ್ರ ನನಗೆ ಸಿಕ್ಕಿದೆ. ನನ್ನ ಪಾತ್ರವು ಹಲವು ಶೇಡ್ಸ್‌ಗಳಲ್ಲಿ ಮೂಡಿಬರಲಿದೆ’ ಎಂದರು.

ಮಂಜು ಎಸ್. ಪಟೇಲ್ ಹಾಗೂ ಸುಮತಿ ಶ್ರೀನಿವಾಸ್ ಅವರು ಈ ಸಿನಿಮಾಕ್ಕೆ ಹಣ ಹೂಡುತ್ತಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಅಭಿಷೇಕ್ ರಾಯ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ರಮೇಶ್ ಪಂಡಿತ್, ಶೋಭರಾಜ್, ಹರೀಶ್ ರಾಯ್, ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ, ಕರುಣಾಕರ್, ಲಕ್ಷ್ಮಿ ಸಿದ್ದಯ್ಯ, ವಾಸು, ಮೈಕೋ ನಾಗರಾಜ್, ಅನಂತ್ ವೇಲು, ಅಪೂರ್ವ, ರಾಣಿ ಮುಂತಾದವರು ಚಿತ್ರದ ತಾರಾಬಳಗದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.