ADVERTISEMENT

ಸಿನಿಮಾ‌ ಪ್ರಚಾರಕ್ಕೆ ಟೀ–ಶರ್ಟ್‌!

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 6:34 IST
Last Updated 15 ಜುಲೈ 2020, 6:34 IST
ಲೈಫ್ ಆಫ್‌ ಧರ್ಮ ಟೀ-ಶರ್ಟ್‌
ಲೈಫ್ ಆಫ್‌ ಧರ್ಮ ಟೀ-ಶರ್ಟ್‌   

ಚಿತ್ರ ನಿರ್ಮಾಣದ ಜೊತೆಗೆ ಅದನ್ನುಜನರಿಗೆ ತಲುಪಿಸಲು ಅನುಸರಿಸುವ ಪ್ರಚಾರ ತಂತ್ರಗಳು ಒಂದು ಸಿನಿಮಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿಯೇ ಚಿತ್ರತಂಡಗಳು ತಮ್ಮ ಸಿನಿಮಾ ಪ್ರಚಾರಕ್ಕೆ ಹೊಸ ಬಗೆಯ ನಾನಾ ತಂತ್ರಗಳನ್ನು ಅನುಸರಿಸುತ್ತವೆ.ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರತಂಡ ಇದೀಗ ಅಂಥದೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ.

‘ಚಾರ್ಲಿ’ ಚಿತ್ರತಂಡ ಸಿನಿಮಾ ಥೀಮ್‌ ಇರುವ ಟೀ–ಶರ್ಟ್‌ಗಳನ್ನು ಪ್ರಚಾರದ ಸರಕಾಗಿ ಬಳಸಿಕೊಳ್ಳುವ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.‘ಅವನೇ ಶ್ರೀಮನ್ನಾರಾಯಣ’ ಬಳಿಕ ರಕ್ಷಿತ್‌ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ‘777 ಚಾರ್ಲಿ’.

ವಿಭಿನ್ನ ಶೀರ್ಷಿಕೆಯಿಂದಲೇಕುತೂಹಲ ಮೂಡಿಸಿರುವ ಚಾರ್ಲಿ ಸಿನಿಮಾ ಇದೀಗ ಹೊಸ ಬಗೆಯ ಪ್ರಚಾರ ತಂತ್ರದಿಂದಲೂ ಸಿನಿಪ್ರಿಯರ ಆಸಕ್ತಿಕೆರಳಿಸಿದೆ.ಜೂನ್‌ 6ರಂದು ರಕ್ಷಿತ್‌ ಹುಟ್ಟುಹಬ್ಬಕ್ಕೆ ಚಿತ್ರತಂಡ ‘ಲೈಫ್ ಆಫ್ ಧರ್ಮ-777’ ಎಂಬ ಟೀಸರ್‌ ಬಿಡುಗಡೆ ಮಾಡಿತ್ತು.

ADVERTISEMENT

ಅದರಲ್ಲಿ ಚಿತ್ರದ ನಾಯಕ ನಟ ಧರ್ಮನ (ರಕ್ಷಿತ್‌) ಜೀವನಶೈಲಿ ತಿಳಿಸುವ ‘ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್‌, ಬಿಯರ್‌...’ ಈ ವಾಕ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದ್ದು, ಟ್ರೆಂಡ್‌ ಸೃಷ್ಟಿಸಿದೆ. ಈ ಅಚ್ಚ ಕನ್ನಡದ ಪಂಚ್‌ಲೈನ್‌ಗಳನ್ನು ಇಟ್ಟುಕೊಂಡು ನಾನಾ ರೀತಿಯ ಮೀಮ್ಸ್‌, ಟ್ರೋಲ್‌ಗಳು ಹರಿದಾಡುತ್ತಿವೆ. ಈಗ ಇದೇ ಪದ‌ ಮತ್ತು ಚಾರ್ಲಿ ಫೋಟೊಗಳಿರುವ ಟೀ–ಶರ್ಟ್‌ಗಳು ಆನ್‌ಲೈನ್‌ನಲ್ಲಿ ದೊರೆಯುತ್ತಿವೆ.

ಚಾರ್ಲಿ ಚಿತ್ರತಂಡವು ಟ್ಯಾಗ್‌ಮೈಟೀ ಕಂಪನಿ ಜೊತೆ ಸೇರಿ ಈ ಟೀ–ಶರ್ಟ್‌ಗಳನ್ನು ವಿನ್ಯಾಸಮಾಡಿದೆ. ‘ನಮ್ಮ ಲೆಕ್ಕಾಚಾರಕ್ಕಿಂತಲೂ ಹೆಚ್ಚು ಸಿನಿಮಾದ ಟೀಸರ್‌ ಹಿಟ್‌ ಆಯಿತು.ಟ್ಯಾಗ್‌ಮೈಟೀ ನಮ್ಮನ್ನು ಸಂಪರ್ಕಿಸಿದಾಗ ಅವರ ಐಡಿಯಾ ನಮಗೂ ಇಷ್ಟವಾಯಿತು. ಟೀ–ಶರ್ಟ್‌ಗಳು ಭರದಿಂದ ಮಾರಾಟವಾಗುತ್ತಿವೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕಿರಣ್‌ ರಾಜ್‌.

‘ಇಂತಹ ಪ್ರಚಾರ ವೈಖರಿಯಿಂದ ಚಿತ್ರದ ಬಗ್ಗೆ ಜನರ ನಿರೀಕ್ಷೆಗಳು ಹೆಚ್ಚಾಗುತ್ತವೆ. ಸದ್ಯದಲ್ಲೇ ಚಿತ್ರದ ಹಾಡು, ಟ್ರೇಲರ್‌ಗಳನ್ನು ಬಿಡುಗಡೆ ಮಾಡುತ್ತೇವೆ. ಅದರ ದೃಶ್ಯಗಳನ್ನೊಳಗೊಂಡ ಟೀ–ಶರ್ಟ್‌ ಕೂಡ ಸಿಗುತ್ತವೆ’ ಎಂದರು.

‘ಸಿನಿಮಾದಲ್ಲಿ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅದರ ಹೆಸರು ಚಾರ್ಲಿ. ಅದಕ್ಕೆ ವಿಮೆ ಮಾಡಿಸುವಾಗ ಸಿಕ್ಕ ಲಕ್ಕಿ ನಂಬರ್‌ 777. ಧರ್ಮ ಹಾಗೂ ಚಾರ್ಲಿ ಸುತ್ತವೇ ಕತೆ ಸಾಗುತ್ತದೆ’ ಎಂದು ಶೀರ್ಷಿಕೆ ಹಿಂದಿನ ಕತೆ ಬಿಚ್ಚಿಟ್ಟರು ಕಿರಣ್‌ ರಾಜ್.

‘ಚಿತ್ರದ ಚಿತ್ರೀಕರಣ ಶೇಕಡ 75ರಷ್ಟು ಮುಗಿದಿದ್ದು, ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದೆ. ಈ ಅವಧಿಯಲ್ಲಿ ಡಬ್ಬಿಂಗ್‌, ಎಡಿಟಿಂಗ್‌ ಕೆಲಸಗಳು ಸಾಗಿವೆ. ಈ ಚಿತ್ರ ಏಕಕಾಲಕ್ಕೆ ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲಾ ಭಾಷೆಗಳ ಸಂಭಾಷಣೆ ಕೆಲಸ ನಡೆಯುತ್ತಿದೆ. ಲಾಕ್‌ಡೌನ್‌ ತೆರವಾದ ನಂತರ ಉಳಿದ ಭಾಗದ ಚಿತ್ರೀಕರಣ ನಡೆಯಲಿದೆ. ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ನಿರ್ಧರಿಸಿಲ್ಲ’ ಎಂದರು.

ನಟಿ ಸಂಗೀತಾ ಶೃಂಗೇರಿ, ನಟ, ನಿರ್ದೇಶಕ ರಾಜ್‌ ಬಿ. ಶೆಟ್ಟಿ, ಡ್ಯಾನಿಶ್‌ ಸೇಠ್‌ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.