ADVERTISEMENT

'83' ಸಿನಿಮಾಗೆ ಉತ್ತಮ ಸ್ಪಂದನೆ; ಶೀಘ್ರದಲ್ಲೇ 100 ಕೋಟಿ ಕ್ಲಬ್‌ಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 10:29 IST
Last Updated 7 ಜನವರಿ 2022, 10:29 IST
83 ಸಿನಿಮಾದ ಪೋಸ್ಟರ್
83 ಸಿನಿಮಾದ ಪೋಸ್ಟರ್   

ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ '83' ಸಿನಿಮಾ ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹೊರತಾಗಿಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರವು ಭಾರತ ಸೇರಿದಂತೆ ವಿದೇಶದಲ್ಲೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ.

83 ಸಿನಿಮಾ ಬಿಡುಗಡೆಯಾದ ಎರಡನೇ ವಾರದಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವೀಟ್ ಮಾಡಿ, 'ಚಿತ್ರ ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಬಹುದು' ಎಂದಿದ್ದಾರೆ.

ಎರಡನೇ ವಾರದಲ್ಲಿ ಎಲ್ಲಾ ಆವೃತ್ತಿಗಳಿಂದ ಭಾರತದಲ್ಲಿ 'ಶುಕ್ರವಾರ (ಡಿ.31) ₹ 4.36 ಕೋಟಿ, ಶನಿವಾರ ₹ 7.73 ಕೋಟಿ, ಭಾನುವಾರ ₹ 7.31 ಕೋಟಿ, ಸೋಮವಾರ (ಜ.3) ₹ 2.01 ಕೋಟಿ, ಮಂಗಳವಾರ ₹ 1.52 ಕೋಟಿ, ಬುಧವಾರ ₹ 1.12 ಕೋಟಿ ಸೇರಿ ಒಟ್ಟು ₹ 95.92 ಕೋಟಿ ಬಾಚಿಕೊಂಡಿದೆ' ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ವಿಶ್ವದಾದ್ಯಂತ 83 ಸಿನಿಮಾ ಗಳಿಕೆ

83 ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಮಾರುಕಟ್ಟೆ ವಿಶ್ಲೇಷಕ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದು, 'ಚಿತ್ರವು ವಿದೇಶಗಳಲ್ಲಿ ₹ 172.30 ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ' ಎಂದಿದ್ದಾರೆ.

ಕಪಿಲ್‌ ದೇವ್‌ ನೇತೃತ್ವದ ಭಾರತ ಕ್ರಿಕೆಟ್‌ ತಂಡವು 1983ರಲ್ಲಿ ವಿಶ್ವಕಪ್‌ ಗೆದ್ದ ಐತಿಹಾಸಿಕ ದಿನದ ಕತೆಯನ್ನು ‘83’ ಚಿತ್ರವು ಒಳಗೊಂಡಿದೆ. ರಣವೀರ್‌ ಸಿಂಗ್‌ ಅವರು ಕಪಿಲ್‌ ದೇವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಡಿಸೆಂಬರ್‌ 24ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. 83 ಚಿತ್ರಕ್ಕೆ ಕಬೀರ್ ಖಾನ್, ಸಾಜಿದ್ ನಾಡಿಯವಾಲ ಮತ್ತು ದೀಪಿಕಾ ಪಡುಕೋಣೆ ನಿರ್ಮಾಪಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.