ADVERTISEMENT

‘ಟಾಕ್ಸಿಕ್’ ಟೀಸರ್ ಹಸಿಬಿಸಿ ದೃಶ್ಯ: ಬಿಸಿಬಿಸಿ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 13:15 IST
Last Updated 13 ಜನವರಿ 2026, 13:15 IST
<div class="paragraphs"><p>ಟಾಕ್ಸಿಕ್‌&nbsp; ಚಿತ್ರದಲ್ಲಿ ಯಶ್‌</p></div>

ಟಾಕ್ಸಿಕ್‌  ಚಿತ್ರದಲ್ಲಿ ಯಶ್‌

   

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಈಚೆಗೆ ಬಿಡುಗಡೆಯಾಗಿದ್ದು, 'ಆಕ್ಷೇಪಾರ್ಹ ದೃಶ್ಯ' ಹೊಂದಿದೆ ಎಂಬ ಕಾರಣಕ್ಕೆ ವ್ಯಾಪಕ ಚರ್ಚೆಗೆ ಒಳಗಾಗಿದೆ. ವೃದ್ಧರಿಂದ ಹಿಡಿದು ಮಕ್ಕಳವರೆಗೆ ಯೂಟ್ಯೂಬ್ ಬಳಕೆದಾರರು ಇರುವುದರಿಂದ ಟೀಸರ್‌ನಲ್ಲಿರುವ ವಯಸ್ಕ ದೃಶ್ಯಗಳು ಅಪ್ರಾಪ್ತರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ಸಾಮಾಜಿಕ ವಲಯದಲ್ಲಿ ವ್ಯಕ್ತವಾಗಿದೆ.

ಇದೇ ವಿಚಾರವಾಗಿ, 'ಟೀಸರ್‌ನ ದೃಶ್ಯಗಳ ಆಧಾರದಲ್ಲಿ ಹೇಳುವುದಾದರೆ, ಟಾಕ್ಸಿಕ್ ಸಿನಿಮಾ ಕುಟುಂಬ ಸಮೇತರಾಗಿ ನೋಡಲು ಸೂಕ್ತವಲ್ಲ' ಎಂದು ವಕೀಲರೊಬ್ಬರು ಟೀಸರ್ ವಿರುದ್ಧ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ(ಸಿಬಿಎಫ್ ಸಿ) ದೂರು ನೀಡಿದ್ದಾರೆ.

ADVERTISEMENT

'ಟೀಸರ್, ಟ್ರೇಲರ್‌ಗಳಿಗೂ ಪ್ರಮಾಣಪತ್ರ ನೀಡಿ'

'ಸಿನಿಮಾಗೆ 'ಎ' ಪ್ರಮಾಣಪತ್ರ ನೀಡುವುದರಿಂದ ಚಿತ್ರಮಂದಿರಗಳಲ್ಲಿ ಮಕ್ಕಳು ಆ ಸಿನಿಮಾ ನೋಡದಂತೆ‌ ಮಾಡಲಾಗುತ್ತದೆ. ಆದರೆ, ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಅದಕ್ಕೆ ಯಾವುದೇ ತಡೆ, ನಿಯಮ ಇಲ್ಲ. ಅದನ್ನು ಮಕ್ಕಳೂ ವೀಕ್ಷಿಸುತ್ತಾರೆ. ಸ್ಪಷ್ಟ ಮಾರ್ಗಸೂಚಿಯಿಲ್ಲದೆ ಟೀಸರ್ ಬಿಡುಗಡೆ ಮಾಡಿರುವುದು ಕಳವಳಕಾರಿ' ಎಂದು ದೂರುದಾರ ವಕೀಲ ಲೋಹಿತ್ ಕುಮಾರ್ ಹೇಳಿದ್ದಾರೆ.

ಮಂಡಳಿಯು ಸಿನಿಮಾಗೆ ಪ್ರಮಾಣಪತ್ರ ನೀಡುವಂತೆ, ಟೀಸರ್‌ಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಜವಾಬ್ದಾರಿಯುತವಾಗಿ ಪ್ರದರ್ಶಿಸುವಂತೆ ಸ್ಪಷ್ಟ ಮಾರ್ಗಸೂಚಿ, ನಿಯಮಗಳನ್ನು ತರಬೇಕು ಎಂದು ಲೋಹಿತ್ ಮನವಿ ಮಾಡಿದ್ದಾರೆ.

ಸಿನಿಮಾಗಳಿಗೆ ನೀಡುವ ಪ್ರಮಾಣಪತ್ರವನ್ನು ಟೀಸರ್, ಟ್ರೇಲರ್‌ಗಳಿಗೆ ಏಕಿಲ್ಲ? ಇನ್ನು ಮುಂದೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗುವ ಟೀಸರ್, ಟ್ರೇಲರ್‌ಗಳಿಗೂ ಪ್ರಮಾಣಪತ್ರ ನೀಡಬೇಕು ಎನ್ನುವ ಒತ್ತಾಯ ಕೂಡ ಕೇಳಿಬರುತ್ತಿದೆ.

‘ವಯಸ್ಕ ದೃಶ್ಯ': ಯುವಮನಸ್ಸಿಗೆ ನೇರ ಪರಿಣಾಮ

ಟಾಕ್ಸಿಕ್ ಟೀಸರ್ ನಲ್ಲಿರುವ ವಯಸ್ಕ ದೃಶ್ಯಗಳ ಚರ್ಚೆ ಹೆಚ್ಚುತ್ತಿರುವಂತೆಯೇ, ಸಿನಿಮಾಗಳಲ್ಲಿ ಇಂತಹ ದೃಶ್ಯಗಳು ಯುವಜನರು, ಮಕ್ಕಳ ಮನಸ್ಸಿನ ಮೇಲೆ ಬೀರಬಲ್ಲ ಪರಿಣಾಮಗಳ ಬಗ್ಗೆಯೂ ಆತಂಕ ವ್ಯಕ್ತವಾಗುತ್ತಿದೆ.

ಈ ಬಗ್ಗೆ 'ಪ್ರಜಾವಾಣಿ ಡಿಜಿಟಲ್‌'ನೊಂದಿಗೆ ಮಾತನಾಡಿರುವ ಮನೋಶಾಸ್ತ್ರಜ್ಞೆ ಕಾವ್ಯ, 'ಸಿನಿಮಾದಲ್ಲಿ ತೋರಿಸುವ ದೃಶ್ಯಗಳು, ಅಲ್ಲಿನ ವಿಷಯಗಳು ಪ್ರೇಕ್ಷಕನ ನೆನಪಿನಲ್ಲಿ ಅಚ್ಚಾಗಿ ಉಳಿಯುತ್ತದೆ. ಹಾಗಾಗಿ ದೃಶ್ಯ ಮಾಧ್ಯಮ ಜನರ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಅದು ಇನ್ನೊಂದು ರೂಪದಲ್ಲಿ ಸಾಮಾಜಿಕ ಜೀವನದಲ್ಲಿ ವ್ಯಕ್ತವಾಗಿ ಕೆಟ್ಟ ಪರಿಣಾಮ ಬೀರಲು ಕಾರಣವಾಗಬಹುದು' ಎಂದಿದ್ದಾರೆ.

'ಆಸೆ, ಕಾಮ, ಕ್ರೋಧ ಎಲ್ಲವೂ ನಮ್ಮ ಸುಪ್ತ ಚೇತನದಲ್ಲಿರುತ್ತವೆ. ಏಕಾಂತದಲ್ಲಿರುವಾಗ ಅವೆಲ್ಲ ಸಕ್ರಿಯವಾಗುತ್ತವೆ. ಹೆಚ್ಚು ಹೆಚ್ಚು ವಯಸ್ಕ ದೃಶ್ಯಗಳನ್ನು, ಅಶ್ಲೀಲ ದೃಶ್ಯಗಳನ್ನು ನೋಡುವುದರ ಪರಿಣಾಮದಿಂದಾಗಿ ಸಾರ್ವಜನಿಕ ಜೀವನದಲ್ಲಿಯೂ ಲೈಂಗಿಕ ಪ್ರಜ್ಞೆಯ ವಿಚಾರದಲ್ಲಿ ಯಾವುದೇ ಭಯವಿಲ್ಲದೇ ದುಷ್ಕೃತ್ಯ ಎಸಗಲು ಪ್ರೇರಣೆಯಾಗುವ ಅಪಾಯ ಹೆಚ್ಚು' ಎಂದು ಹೇಳಿದ್ದಾರೆ.

‘ಡಿಜಿಟಲ್ ಜಗತ್ತು ತೀವ್ರ ವೇಗದಲ್ಲಿ ಸಾಗುತ್ತಿದ್ದು, ಮಕ್ಕಳ ಕೈಯಲ್ಲಿ ಮೊಬೈಲ್, ಟ್ಯಾಬ್ಲೆಟ್ ಗಳು ಇವೆ. ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ರೀತಿಯ ವಿಡಿಯೊಗಳು ಯಾವುದೇ ನಿರ್ಬಂಧವಿಲ್ಲದೆ ಮಕ್ಕಳಿಗೂ ಲಭ್ಯವಾಗುತ್ತದೆ. ಟಾಕ್ಸಿಕ್ ನಂತಹ ಟೀಸರ್‌ಗಳು ಯೂಟ್ಯೂಬ್ ಮೂಲಕ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಮಕ್ಕಳಿಗಾಗಿಯೇ ಪ್ರತ್ಯೇಕ ಯೂಟ್ಯೂಬ್ ಆಯ್ಕೆ ಇದ್ದರೂ ಕೂಡ, ಪೋಷಕರು ಈ ಬಗ್ಗೆ ಹೆಚ್ಚು ಗಮನಹರಿಸುವ ಸಾಧ್ಯತೆ ಕಡಿಮೆ. ಅವರ ಬಳಕೆಗೆ ತಕ್ಕಂತೆ, ಮೊಬೈಲ್, ಟ್ಯಾಬ್ ಗಳ ಸೆಟ್ಟಿಂಗ್ ಸಿದ್ಧಪಡಿಸಿರುತ್ತಾರೆ. ಹಾಗಾಗಿ ಇದು ಮಕ್ಕಳಿಗೂ ವಯಸ್ಕ ದೃಶ್ಯಗಳು ಲಭ್ಯವಾಗಲು ಕಾರಣವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಕೆಜಿಎಫ್‌ ಚಿತ್ರವನ್ನೇ ನೋಡಿ, 'ನಿನಗೆ ಹೊಡೆದವನಿಗೆ ಹೊಡೆದು ಬಾ' ಎಂದು ರಾಕಿ ಭಾಯ್‌ ತಾಯಿ ಹೇಳುತ್ತಾಳೆ. ನಮ್ಮ ತಾಯಂದಿರು ಹಾಗೆ ಹೇಳುತ್ತಾರಯೇ? ಇಲ್ಲ... ಇಂತಹ ದೃಶ್ಯಗಳು ಮಕ್ಕಳ ಮೇಲೆ ಒಂದಲ್ಲ ಒಂದು ರೀತಿ ಪರಿಣಾಮ ಬೀರುತ್ತವೆ’ ಎಂದು ಹೇಳಿದ್ದಾರೆ.

ಮುನ್ನೆಲೆಗೆ ಬಂತು ನಿರ್ದೇಶಕಿ ಗೀತು ಮೋಹನ್‌ದಾಸ್‌ ಹಳೇ ಹೇಳಿಕೆ:

ಒಂದೆಡೆ ಯಶ್ ಅವರನ್ನೇ ಮುನ್ನೆಲೆಯಲ್ಲಿಟ್ಟುಕೊಂಡು ಚರ್ಚೆ ನಡೆಯುತ್ತಿದ್ದರೆ ಇನ್ನೊಂದೆಡೆ ಟಾಕ್ಸಿಕ್ ನಿರ್ದೇಶಕಿ, ಮಲಯಾಳಂನ ಗೀತು ಮೋಹನ್ ದಾಸ್ ವಿರುದ್ಧ ಮಲಯಾಳಂ ಸಿನಿಮಾ ರಂಗದ ಕೆಲವರು ಹಾಗೂ ಸಿನಿಪ್ರಿಯರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಇದು ಪಡೆದುಕೊಂಡ ತಿರುವು, ನಿರ್ದೇಶಕಿಯ ಹಳೆಯ ಹೇಳಿಕೆಯೊಂದು ಮುನ್ನೆಲೆಗೆ ಬರುವಂತೆ ಮಾಡಿದೆ.

ಮಮ್ಮುಟ್ಟಿ ಅಭಿನಯದ, ನಿತಿನ್ ರೆಂಜಿ ಪಣಿಕ್ಕರ್ ನಿರ್ದೇಶನದ 'ಕಸಬಾ' ಎನ್ನುವ ಮಲಯಾಳಂ ಸಿನಿಮಾ 2016ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದ ಕೆಲವು ದೃಶ್ಯಗಳು ಸ್ತ್ರೀವಿರೋಧಿಯಾಗಿದ್ದು, ಹೆಣ್ಣನ್ನು ಕಾಮಕ್ಕೆ ಸೀಮಿತಗೊಳಿಸುವ ನಿಟ್ಟಿನಲ್ಲಿ ತಪ್ಪು ಸಂದೇಶ ಸಾರುತ್ತದೆ ಎಂದು ಆರೋಪಿಸಿ ಮಲಯಾಳಂನ ಖ್ಯಾತ ನಟಿ, ಪಾರ್ವತಿ ತಿರುವೋತ್ತು ಧ್ವನಿ ಎತ್ತಿದ್ದರು. ಆದರೆ ಅವರು ನೇರವಾಗಿ ಸಿನಿಮಾದ ಹೆಸರು ಹೇಳಿರಲಿಲ್ಲ. ಆ ವೇಳೆ ಪಾರ್ವತಿ ಅವರಿಗೆ ಬೆಂಬಲವಾಗಿ ನಿಂತು ಹೆಸರನ್ನು ಹೇಳುವಂತೆ ಒತ್ತಾಯಿಸಿದ್ದರು. ನಂತರ ಪಾರ್ವತಿ ಕಸಬಾ ಹೆಸರು ಹೇಳಿದ್ದರು. ಅದಲ್ಲದೆ ಕಸಬಾ ಸಿನಿಮಾ ಕುರಿತು ಗೀತು ಮೋಹನ್ ದಾಸ್ ಕೂಡ ಹೇಳಿಕೆ ನೀಡಿದ್ದರು. ಕುಟುಂಬಸಮೇತ ಕೂತು ನೋಡುವ ಚಿತ್ರ ಅಲ್ಲ ಎಂದೂ ಹೇಳಿದ್ದರು. ಇದು ಸಿನಿಮಾಗೆ ತೀವ್ರ ಹೊಡೆತ ಕೊಟ್ಟಿತ್ತು.

ಹೀಗೆಲ್ಲ ಹೇಳಿಕೆ ಕೊಟ್ಟಿದ್ದ ನಟಿ ಸ್ವತಃ ತನ್ನದೇ ನಿರ್ದೇಶನದ ಸಿನಿಮಾದಲ್ಲಿ ಹೆಣ್ಣನ್ನು ಕಾಮದ ವಸ್ತುವಿನಂತೆ ತೋರಿಸಿದ್ದು ಹೇಗೆ ಎಂದು ಪ್ರಶ್ನಿಸಿ ಕಸಬಾ ನಿರ್ದೇಶಕ ರೆಂಜಿ ಪಣಿಕ್ಕರ್ ಕುಟುಕಿದ್ದಾರೆ. 'ಕಸಬಾ ಚಿತ್ರದಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ ಎಂಬ ವಿರೋಧ ಕೇಳಿಬಂದಾಗ, 'SAY IT, SAY IT' ಎಂದು ಒತ್ತಾಯಿಸಿ ಅದು ಇನ್ನಷ್ಟು ಮುಂದುವರಿಯುವಂತೆ ಮಾಡಿದ್ದ ವ್ಯಕ್ತಿಯೇ ಇಂದು ತಮ್ಮ ಸಿನಿಮಾದಲ್ಲಿ ಹೆಣ್ಣನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಿದ್ದಾರೆ. ರಾಜ್ಯದ ಗಡಿ ದಾಟಿದ ತಕ್ಷಣ ಸ್ತ್ರೀವಿರೋಧದ ವ್ಯಾಖ್ಯೆ ಅನುಕೂಲಕ್ಕೆ ಅವರ ತಕ್ಕಂತೆ ಬದಲಾಯಿತೇ?' ಎಂದು ತೀಕ್ಷ್ಣ ಪ್ರಶ್ನೆ ಮುಂದಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವ್ಯಾಪಕ ಚರ್ಚೆಯ ನಡುವೆಯೂ ತಮ್ಮ ನಿಲುವು ಸಮರ್ಥಿಸಿಕೊಂಡಿರುವ ಗೀತು ಮೋಹನ್ ದಾಸ್, 'ಇದು ಹೆಣ್ಣನ್ನು objectification ಮಾಡುವ ದೃಶ್ಯವಲ್ಲ, ಹೆಣ್ಣಿನ ಸುಖ, ಸಮ್ಮತಿಯ ಕುರಿತ ದೃಶ್ಯ' ಎಂಬರ್ಥದ ಪೋಸ್ಟ್ ಹಂಚಿಕೊಂಡಿದ್ದಾರೆ.

ಇಂತಹ ದೃಶ್ಯಗಳಲ್ಲಿ ನಟಿಸಲ್ಲ ಎಂದಿದ್ದ ಯಶ್‌

ಈ ಹಿಂದೆ ಖಾಸಗಿ ವಾಹಿನಿ ‘ಜೀ ಕನ್ನಡದ ‘ವಿಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಯಶ್‌, ಅಪ್ಪ–ಅಮ್ಮ ಜತೆ ಕುಳಿತು ನೋಡಲಾಗದ ಸಿನಿಮಾಗಳಲ್ಲಿ ನಟಿಸಲ್ಲ ಎಂದಿದ್ದರು. ಆದರೆ, ಟೀಸರ್‌ನಲ್ಲಿಯೇ ‘ಅಡಲ್ಟ್‌ ಸೀನ್‌’ನಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಹುಬ್ಬೇರಿಸಿದ್ದಾರೆ.

ಟಾಕ್ಸಿಕ್ ಟೀಸರ್‌ ಬಿಡುಗಡೆಯಾಗುತ್ತಿದ್ದಂತೆ ಯಶ್‌ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಯಶ್‌ ಅವರು ತಮ್ಮ ಮಾತಿಗೆ ತಪ್ಪಿದ್ದಾರೆ ಎಂದು ಕೆಲವರು ಹೇಳಿದರೆ, ಸಿನಿಮಾವೆಂದರೆ ಇಂತಹ ದೃಶ್ಯಗಳೆಲ್ಲ ಸಾಮಾನ್ಯ ಎಂದು ಕೆಲವರು ಬೆಂಬಲಕ್ಕೆ ನಿಂತಿದ್ದಾರೆ.

ಯಶ್ ಜನ್ಮದಿನಕ್ಕೆ ಟಾಕ್ಸಿಕ್ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾ ಮಾರ್ಚ್ 19ರಂದು ಯುಗಾದಿ ಸಂದರ್ಭ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.