ADVERTISEMENT

‘ಆಯುಷ್ಮಾನ್‌ಭವ’ ಚಿತ್ರದ ಹಣಕಾಸು ವಿವಾದ: ನಿರ್ಮಾಪಕ ಕೆ. ಮಂಜು ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 12:33 IST
Last Updated 3 ಫೆಬ್ರುವರಿ 2020, 12:33 IST
ಕೆ. ಮಂಜು
ಕೆ. ಮಂಜು   

ಬೆಂಗಳೂರು: ‘ಆಯುಷ್ಮಾನ್‌ಭವ’ ಸಿನಿಮಾದ ಹಣಕಾಸು ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಹೆಸರನ್ನು ಅನಗತ್ಯವಾಗಿ ಸೇರಿಸುವುದು ಸರಿಯಲ್ಲ. ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ಅವರ ಮೇಲೆ ನನಗೆ ಅಪಾರ ಗೌರವವಿದೆ. ನಾನು ಯಾರಿಗೂ ಹಣ ನೀಡುವಂತೆ ಧಮುಕಿಹಾಕಿಲ್ಲ’ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಗೌರವ ಕಾರ್ಯದರ್ಶಿ ಕೆ. ಮಂಜು ತಿಳಿಸಿದರು.

‘ದ್ವಾರಕೀಶ್‌ ಭಾರತೀಯ ಚಿತ್ರರಂಗ ಕಂಡ ಅಪರೂಪದ ನಿರ್ದೇಶಕ ಮತ್ತು ನಿರ್ಮಾಪಕ. ‘ರಾಮ ಶಾಮ ಭಾಮ’ ಚಿತ್ರ ನಿರ್ಮಾಣದ ವೇಳೆ ನನಗೆ ₹ 25 ಲಕ್ಷ ಅಗತ್ಯವಿತ್ತು. ಆಗ ಹಣ ನೀಡಿದ್ದೇ ದ್ವಾರಕೀಶ್‌. ಅದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ. ಅಂದಿನಿಂದಲೂ ಅವರ ಪುತ್ರ ಯೋಗಿ ದ್ವಾರಕೀಶ್‌ಗೆ ಸಹಾಯ ಮಾಡುತ್ತಾ ಬಂದಿದ್ದೇನೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯೋಗಿ ಅವರಿಗೆ ‘ಆಯುಷ್ಮಾನ್‌ಭವ’ ಚಿತ್ರ ನಿರ್ಮಾಣದ ವೇಳೆ ಹಣಕಾಸಿನ ಸಮಸ್ಯೆ ಎದುರಾಯಿತು. ನನ್ನ ಸ್ನೇಹಿತರಿಂದ ಅವರಿಗೆ ₹ 2 ಕೋಟಿ ಸಾಲ ಕೊಡಿಸಿದ್ದೇನೆ. ಚಿತ್ರದ ಗ್ರಾಫಿಕ್ಸ್‌ ವೇಳೆಯೂ ಹಣದ ಸಮಸ್ಯೆಯಾಯಿತು. ಆಗಲೂ ಹಣಕಾಸಿನ ನೆರವು ನೀಡಿದ್ದೇನೆ. ₹ 9 ಕೋಟಿಗೆ ಈ ಚಿತ್ರದ ವಿತರಣೆಯ ಹಕ್ಕನ್ನು ಕೇಳಿದ್ದು ನಿಜ. ಕೊನೆಗೆ ಜಯಣ್ಣ ಅವರು ಈ ಚಿತ್ರ ವಿತರಿಸಿದರು. ದ್ವಾರಕೀಶ್‌, ಜಯಣ್ಣ ಮತ್ತು ಯೋಗಿ ನಡುವಿನ ವ್ಯವಹಾರದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಯೋಗಿ ಅವರು ನನ್ನ ಸ್ನೇಹಿತರಿಗೆ ಇಂದಿಗೂ ಅಸಲು ಮತ್ತು ಬಡ್ಡಿ ನೀಡಿಲ್ಲ ಎಂದು ವಿವರಿಸಿದರು.

ADVERTISEMENT

‘ನಾನು ಯಾರಿಗೂ ಧಮುಕಿ ಹಾಕಿ ದುಡ್ಡು ಕೇಳಿಲ್ಲ. ಜಯಣ್ಣ ಕೂಡ ನನ್ನ ಆತ್ಮೀಯ ಸ್ನೇಹಿತರು. ಸಾಲ ತೀರಿಸಲು ಮನೆ ಮಾರುತ್ತೇನೆ ಎಂದು ಯೋಗಿ ಹೇಳಿದರು. ಬೇರೆಡೆ ಹಣ ಹೊಂದಿಸಿ ಸಾಲ ತೀರಿಸುವಂತೆ ಸಲಹೆ ನೀಡಿದೆ. ಎಲ್ಲಾ ನಿರ್ಮಾಪಕರಿಗೂ ಒಳ್ಳೆಯದಾಗಬೇಕು. ನನ್ನ ಸ್ನೇಹಿತರಿಗೆ ಸಾಲದ ಹಣ ಕೊಡುವಂತೆ ಯೋಗಿ ಬಳಿ ಮೂರು ಬಾರಿ ಕೇಳಿದ್ದೇನೆ. ಸ್ವಲ್ಪ ತೊಂದರೆಯಾಗಿದ್ದು, ಕೊಡುತ್ತೇನೆ ಎಂದು ತಿಳಿಸಿದ್ದಾರೆ ಎಂದರು.

‘ದ್ವಾರಕೀಶ್‌ ಅವರ ಮನೆ ಮಾರುವ ಕೆಲಸವನ್ನು ನಾನು ಮಾಡುವುದಿಲ್ಲ. ದ್ವಾರಕೀಶ್‌ರಂತಹ ಕಲಾವಿದರು ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ಮಾಡಬೇಕು. ನಾನು ಬಹಳಷ್ಟು ಜನರಿಗೆ ಸಹಾಯ ಮಾಡಿದ್ದೇನೆ. ನನ್ನ ಸ್ನೇಹಿತರಿಗೆ ಯಾವಾಗ ದುಡ್ಡು ಕೊಡುತ್ತೀಯ ಎಂದು ತಿಳಿಸುವಂತೆ ಯೋಗಿ ಜೊತೆಗೆ ಮಾತನಾಡಿದ್ದೇನೆ. ನನ್ನ ಮಾತಿಗೆ ಗೌರವ ಕೊಟ್ಟು ಆತನಿಗೆ ಹಣ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.