ADVERTISEMENT

ವಿಚಾರಣೆ ಎದುರಿಸಿ ಹೊರಬಂದ ಅಲ್ಲು: ಥಿಯೇಟರ್‌ಗೆ ಕರೆದೊಯ್ದು ದೃಶ್ಯ ಮರುಸೃಷ್ಟಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2024, 10:02 IST
Last Updated 24 ಡಿಸೆಂಬರ್ 2024, 10:02 IST
<div class="paragraphs"><p>ಅಲ್ಲು ಅರ್ಜುನ್‌</p></div>

ಅಲ್ಲು ಅರ್ಜುನ್‌

   

ಹೈದರಾಬಾದ್: ಪುಷ್ಪ–2 ಪ್ರದರ್ಶನದ ಸಂದರ್ಭ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಅಲ್ಲು ಅರ್ಜುನ್ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದರು.

ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಅಲ್ಲು ವಿಚಾರಣೆ ಎದುರಿಸಿದರು. ವಿಚಾರಣೆ ವೇಳೆ ಕಾನೂನು ತಂಡ ಸಹ ಅಲ್ಲು ಜೊತೆಗಿತ್ತು. ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾದ ಅವರು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೊರಬಂದಿದ್ದಾರೆ.

ADVERTISEMENT

ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ–2 ಪ್ರದರ್ಶನದ ವೇಳೆ ಅಲ್ಲುಅರ್ಜುನ್ ಆಗಮನದ ಸಂದರ್ಭ ನೂಕು ನುಗ್ಗಲಿನಲ್ಲಿ ಕಾಲ್ತುಳಿತ ಸಂಭವಿಸಿತ್ತು. ದುರ್ಘಟನೆಯಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟು, ಅವರ 8 ವರ್ಷದ ಮಗ ಗಾಯಗೊಂಡಿದ್ದ.

ಡಿ.14ರ ಬೆಳಿಗ್ಗೆ ಅಲ್ಲು ಅರ್ಜುನ್‌ ಅವರನ್ನು ಬಂಧಿಸಲಾಗಿತ್ತು. ಅದೇ ದಿನ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಮರುದಿನ ಅಲ್ಲು ಅರ್ಜುನ್‌ ಜೈಲಿನಿಂದ ಬಿಡುಗಡೆಯಾಗಿದ್ದರು.

ಸಾರ್ವಜನಿಕ ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ವೈಫಲ್ಯ ಮತ್ತು ನಿರ್ಲಕ್ಷ್ಯ ತೋರಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರು 11ನೇ ಆರೋಪಿಯಾಗಿದ್ದಾರೆ. 

ಅಲ್ಲು ಅರ್ಜುನ್ ಅವರನ್ನು ಸಂಧ್ಯಾ ಥಿಯೇಟರ್‌ಗೆ ಕರೆದೊಯ್ದು ಘಟನೆಯ ಮರುಸೃಷ್ಟಿ ಮಾಡಿ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿ ತಿಳಿಸಿವೆ.

ಮೃತ ಮಹಿಳೆಯ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿತ್ರದ ನಿರ್ಮಾಪಕರು ಸೋಮವಾರ ಆಸ್ಪತ್ರೆಗೆ ತೆರಳಿ ₹50 ಲಕ್ಷ ಪರಿಹಾರ ವಿತರಿಸಿದ್ದಾರೆ.

ವಿಚಾರಣೆಗೆ ತೆರಳುವ ಮುನ್ನ ಮನೆಯ ಮುಂದೆ ಪತ್ನಿ ಸ್ನೇಹಾರೆಡ್ಡಿ, ಪುತ್ರಿಯನ್ನು ತಬ್ಬಿ ಅಲ್ಲು ಅರ್ಜುನ್ ಭಾವೋದ್ವೇಗಕ್ಕೆ ಒಳಗಾಗಿದ್ದರು.

ಅಗೌರವ: ನಟ ನಿರ್ದೇಶಕ ನಿರ್ಮಾಪಕನ ವಿರುದ್ಧ ಎಂಎಲ್ಸಿ ದೂರು

ಹೈದರಾಬಾದ್‌: ‘ಪುಷ್ಪ 2: ದಿ ರೂಲ್‌’ ಸಿನಿಮಾದ ಕೆಲವು ದೃಶ್ಯಗಳಲ್ಲಿ ಪೊಲೀಸ್‌ ಅಧಿಕಾರಿಗಳನ್ನು ಅವಮಾನಕರವಾಗಿ ತೋರಿಸಲಾಗಿದೆ ಎಂದು ಆರೋಪಿಸಿ ತೆಲಂಗಾಣದ ವಿಧಾನ ಪರಿಷತ್‌ ಸದಸ್ಯ ಚಿಂತಾಪಂಡು ನವೀನ್ ಅವರು ನಟ ನಿರ್ದೇಶಕ ನಿರ್ಮಾಪಕರ ವಿರುದ್ಧ ರಾಚಕೊಂಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸ್‌ ಅಧಿಕಾರಿಗಳನ್ನು ಭ್ರಷ್ಟರೆಂದು ಬಿಂಬಿಸಲಾಗಿದೆ ಎಂದು ದೂರಿ ಕೆಲವು ದೃಶ್ಯಗಳನ್ನು ಉಲ್ಲೇಖಿಸಿ ಸೋಮವಾರ ದೂರು ದಾಖಲಿಸಿದ್ದಾರೆ.  ‘ಐಪಿಎಸ್‌ ಅಧಿಕಾರಿಯೊಬ್ಬರು ಈಜುಕೊಳದಲ್ಲಿದ್ದ ವೇಳೆ ಸಿನಿಮಾದ ನಾಯಕ ನಟ ಕೊಳದಲ್ಲಿ ಮೂತ್ರ ವಿಸರ್ಜನೆ ಮಾಡುವ ದೃಶ್ಯವಿದ್ದು ಆ ಮೂಲಕ ಇಡೀ ಪೊಲೀಸ್‌ ಸಿಬ್ಬಂದಿಯನ್ನೇ ಅವಮಾನ ಮಾಡಲಾಗಿದೆ. ಕೆಲವು ದೃಶ್ಯಗಳಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಕರವಾಗಿ ಬಿಂಬಿಸಿದ್ದು ಆ ಸಂಸ್ಥೆಗಳನ್ನು ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವಂತಾಗಿದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ. ‘ಸಿನಿಮಾದಲ್ಲಿರುವ ಈ ದೃಶ್ಯಗಳನ್ನು ಕೂಡಲೇ ತೆಗೆದುಹಾಕಿ ನಟ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.