ADVERTISEMENT

ಕಾಲ್ತುಳಿತ: ಮೃತ ಮಹಿಳೆ ಕುಟುಂಬಕ್ಕೆ ₹2 ಕೋಟಿ ನೀಡಿದ ಅಲ್ಲು ಅರ್ಜುನ್,ನಿರ್ಮಾಪಕರು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 13:16 IST
Last Updated 25 ಡಿಸೆಂಬರ್ 2024, 13:16 IST
<div class="paragraphs"><p>ಅಲ್ಲು ಅರ್ಜುನ್</p></div>

ಅಲ್ಲು ಅರ್ಜುನ್

   

ಹೈದರಾಬಾದ್: ಪುಷ್ಪ–2 ಪ್ರದರ್ಶನದ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆ ರೇವತಿ ಕುಟುಂಬಕ್ಕೆ ಚಿತ್ರದ ನಾಯಕ ನಟ ಅಲ್ಲು ಅರ್ಜುನ್, ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ಒಟ್ಟು ₹2 ಕೋಟಿ ಪರಿಹಾರ ನೀಡಿದ್ದಾರೆ.

ಈ ಮಧ್ಯೆ, ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎಫ್‌ಡಿಸಿ) ಅಧ್ಯಕ್ಷ ಮತ್ತು ಪ್ರಮುಖ ನಿರ್ಮಾಪಕ ದಿಲ್ ರಾಜು ಅವರು, ಸರ್ಕಾರ ಮತ್ತು ಚಲನಚಿತ್ರೋದ್ಯಮದ ನಡುವೆ ಆರೋಗ್ಯಕರ ಸಂಬಂಧವನ್ನು ಬೆಳೆಸಲು ಚಿತ್ರರಂಗದ ನಿಯೋಗದ ಜೊತೆ ಗುರುವಾರ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ಹೇಳಿದರು.

ADVERTISEMENT

ಅಲ್ಲು ಅರ್ಜುನ್ ಅವರ ತಂದೆ ಮತ್ತು ಹಿರಿಯ ನಿರ್ಮಾಪಕ ಅಲ್ಲು ಅರವಿಂದ್, ದಿಲ್ ರಾಜು ಮತ್ತು ಇತರರೊಂದಿಗೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಕಾಲ್ತುಳಿತದಲ್ಲಿ ಗಾಯಗೊಂಡಿರುವ ಬಾಲಕನ ಆರೋಗ್ಯ ವಿಚಾರಿಸಿದರು.

ವೈದ್ಯರೊಂದಿಗೆ ಮಾತನಾಡಿದ ನಂತರ ಪ್ರತಿಕ್ರಿಯಿಸಿದ ಅಲ್ಲು ಅರವಿಂದ್, ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಮತ್ತು ಈಗ ಕೃತಕ ಉಸಿರಾಟ ವ್ಯವಸ್ಥೆ ಇಲ್ಲದೆ ಉಸಿರಾಡುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದು, ಸಮಾಧಾನ ತಂದಿದೆ ಎಂದು ತಿಳಿಸಿದರು. ಬಾಲಕನ ಸಂಪೂರ್ಣ ಚೇತರಿಕೆಯ ಬಗ್ಗೆ ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಇದೇವೇಳೆ, ಮೃತ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ (₹1ಕೋಟಿ), ಪುಷ್ಪ ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್(₹50 ಲಕ್ಷ), ಮತ್ತು ಚಿತ್ರದ ನಿರ್ದೇಶಕ ಸುಕುಮಾರ್ (₹50 ಲಕ್ಷ) ಆರ್ಥಿಕ ನೆರವು ನೀಡಿದ್ದಾರೆ ಎಂದು ಘೋಷಿಸಿದರು.

ದಿಲ್ ರಾಜು ಅವರಿಗೆ ಚೆಕ್ ಹಸ್ತಾಂತರಿಸಿದ ಅರವಿಂದ್, ಬಾಲಕನ ಕುಟುಂಬಕ್ಕೆ ತಲುಪಿಸುವಂತೆ ಮನವಿ ಮಾಡಿದರು. ಕುಟುಂಬವನ್ನು ನೇರವಾಗಿ ಭೇಟಿ ಮಾಡುವುದಕ್ಕೆ ಕಾನೂನಿನ ತೊಡಕಿದೆ ಎಂದರು.

ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ 'ಪುಷ್ಪ 2' ಚಿತ್ರ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದರು. ಅವರ ಎಂಟು ವರ್ಷದ ಮಗ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಘಟನೆಯ ನಂತರ, ಮೃತ ಮಹಿಳೆಯ ಕುಟುಂಬದ ದೂರಿನ ಆಧಾರದ ಮೇಲೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಡಿಸೆಂಬರ್ 13ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ತೆಲಂಗಾಣ ಹೈಕೋರ್ಟ್ ಅದೇ ದಿನ ಅವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್ 14 ರಂದು ಬೆಳಿಗ್ಗೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.