ADVERTISEMENT

ಅಂಬರೀಷ್‌ ಪ್ರೀತಿಯ ‘ಕನ್ವರ್‌’ ನಿಧನ

​ಪ್ರಜಾವಾಣಿ ವಾರ್ತೆ
Published 25 ಮೇ 2021, 2:33 IST
Last Updated 25 ಮೇ 2021, 2:33 IST
ಕನ್ವರ್‌ ಜೊತೆ ಅಂಬರೀಷ್‌
ಕನ್ವರ್‌ ಜೊತೆ ಅಂಬರೀಷ್‌   

ದಿವಂಗತ ನಟ ಅಂಬರೀಷ್‌ ಅವರ ಮುದ್ದಿನ ಶ್ವಾನ ‘ಕನ್ವರ್‌’ ಸೋಮವಾರ ಮೃತಪಟ್ಟಿದೆ. ಅಂಬರೀಷ್‌ ಅವರ ಖ್ಯಾತ ಚಲನಚಿತ್ರ ‘ಅಂತ’ದಲ್ಲಿನ ಪಾತ್ರದ ಹೆಸರನ್ನೇ ಈ ಶ್ವಾನಕ್ಕೂ ಇಡಲಾಗಿತ್ತು.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಕನ್ವರ್‌ ಒಡನಾಟವನ್ನು ನೆನಪಿಸಿಕೊಂಡಿರುವ ನಟಿ, ಸಂಸದೆ ಸುಮಲತಾ ಅಂಬರೀಷ್‌, ‘ಕನ್ವರ್‌ ನಮ್ಮ ಬಳಿಗೆ ಆರು ತಿಂಗಳ ಮರಿಯಾಗಿ ಬಂದಿದ್ದ. ಇಂದು ಆತ ನಮ್ಮೆಲ್ಲರನ್ನೂ ಅಗಲಿ ಮೇಲಿರುವ ತನ್ನ ಮಾಸ್ಟರ್‌ ಅನ್ನು ಸೇರಿಕೊಂಡಿದ್ದಾನೆ. ಅಂಬರೀಷ್‌ ಅವರಿಗೆ ಖ್ಯಾತಿ ತಂದುಕೊಂಟಿದ್ದ ಅಂತ ಸಿನಿಮಾದಲ್ಲಿನ ಪಾತ್ರದ ಹೆಸರನ್ನೇ ಅವನಿಗೆ ಇರಿಸಲಾಗಿತ್ತು. ಕಳೆದ ಎಂಟು ವರ್ಷದಿಂದ ನಮ್ಮ ಕುಟುಂಬದ ಸದಸ್ಯನಾಗಿದ್ದ ಕನ್ವರ್‌ ನಮ್ಮನ್ನು ಅಗಲಿದ್ದಾನೆ’ ಎಂದು ಬರೆದಿದ್ದಾರೆ.

ಜೊತೆಗೆ ಅಂಬರೀಷ್‌, ಮಗ ಅಭಿಷೇಕ್‌ ಜೊತೆಗೆ ಕನ್ವರ್‌ ಆಡುತ್ತಿರುವ ಫೊಟೊಗಳನ್ನೂ ಸುಮಲತಾ ಅಪ್‌ಲೋಡ್‌ ಮಾಡಿದ್ದಾರೆ. ಅಂಬರೀಷ್‌ ಅವರಿಗೆ ಕನ್ವರ್‌ ಮೇಲೆ ಅತ್ಯಂತ ಪ್ರೀತಿ ಇತ್ತು. ಅಂಬರೀಷ್‌ ಅವರ ಮನೆಗೆ ತೆರಳಿದವರಿಗೆ ಇದರ ಪರಿಚಯವೂ ಇದ್ದೇ ಇರುತ್ತದೆ. 2018ರ ನವೆಂಬರ್‌ನಲ್ಲಿ ಅಂಬರೀಷ್‌ ಅವರು ಮೃತಪಟ್ಟಾಗ, ಕನ್ವರ್‌ ತನ್ನ ಪ್ರೀತಿಯ ಒಡೆಯನನ್ನು ಕಳೆದುಕೊಂಡ ದುಃಖ ಅದರ ನಡವಳಿಕೆಯಲ್ಲೇ ತಿಳಿಯುತ್ತಿತ್ತು. ಅಂಬರೀಷ್‌ ಅವರ ಮನೆಯಲ್ಲಿ ಕನ್ವರ್‌ ಜೊತೆಗೆ ‘ಬುಲ್‌ಬುಲ್‌’ ಹೆಸರಿನ ಶ್ವಾನವೂ ಇದೆ. ಅಂಬರೀಷ್‌ ಅವರು ನಟಿಸಿದ ‘ನಾಗರಹಾವು’ ಚಿತ್ರದ ಖ್ಯಾತ ಡೈಲಾಗ್‌ ‘ಏನ್‌ ಬುಲ್‌ಬುಲ್‌ ಮಾತಡಕ್ಕಿಲ್ವಾ’ ಎಂಬುವುದರಿಂದಲೇ ಈ ಶ್ವಾನಕ್ಕೆ ಹೆಸರಿಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.