ADVERTISEMENT

ಕಿರುತೆರೆಯಲ್ಲಿ ಅನಿರುದ್ಧ ಪಯಣ

ಮಾನಸ ಬಿ.ಆರ್‌
Published 17 ಸೆಪ್ಟೆಂಬರ್ 2019, 14:45 IST
Last Updated 17 ಸೆಪ್ಟೆಂಬರ್ 2019, 14:45 IST
ಅನಿರುದ್ಧ್‌
ಅನಿರುದ್ಧ್‌   

‘ಚಿಟ್ಟೆ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಾಯಕ ನಟನಾಗಿ ಪರಿಚಿತರಾಗಿದ್ದ ನಟ ಅನಿರುದ್ಧ ಈಗ ಕಿರುತೆರೆಗೆ ಅದ್ದೂರಿ ಎಂಟ್ರಿ ಕೊಟ್ಟಿದ್ದಾರೆ.

ಆರೂರು ಜಗದೀಶ್ ಅವರ ನಿರ್ದೇಶನದ ‘ಜೊತೆ ಜೊತೆಯಲಿ’ ಧಾರಾವಾಹಿ ‘ಜೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಸೀರಿಯಲ್‌ನ ಮೊದಲ ಎರಡು ಪ್ರೋಮೊಗಳು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಟ್ರೆಂಡ್ ಸೆಟ್ ಮಾಡುವಲ್ಲಿ ಯಶಸ್ವಿಯಾಗಿವೆ.

‘ವಯಸ್ಸುಗಳ ನಡುವೆ ಮನಸ್ಸುಗಳ ಮದುವೆ ಜೊತೆಜೊತೆಯಲಿ’ ಟ್ಯಾಗ್‌ಲೈನ್‌ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT

ಹಿರಿತೆರೆಯಿಂದ ಕಿರುತೆರೆಗೆ ಹೊರಳುವ ಯೋಜನೆ ಮೊದಲೇ ಇತ್ತಾ?
ನಾಲ್ಕು ತಿಂಗಳ ಹಿಂದೆ ಈ ಪ್ರಶ್ನೆ ಕೇಳಿದ್ದಿದ್ರೆ ಇದು ನನಗೆ ಗೊತ್ತೇ ಇರಲಿಲ್ಲ. ನಾನು ಕಿರುತೆರೆಗೆ ಹೋಗುವ ಬಗ್ಗೆ ಯಾವತ್ತೂ ಯೋಚಿಸಿರಲಿಲ್ಲ. ಇಂಥದ್ದೊಂದು ಉತ್ತಮ ಅವಕಾಶ ಸಿಕ್ಕಾಗ ಖುಷಿಯಿಂದ ಒಪ್ಪಿಕೊಂಡೆ.

ಈ ಧಾರಾವಾಹಿಯ ಕತೆ ನನಗೆ ತುಂಬಾ ಇಷ್ಟ ಆಯಿತು. ಕನ್ನಡ ಕಿರುತೆರೆಯಲ್ಲಿ ಇದೊಂದು ಹೊಸ ಪ್ರಯತ್ನ. ಆರ್ಯವರ್ಧನ್‌ ಪಾತ್ರದಲ್ಲಿ ಸಾಕಷ್ಟು ಆಯಾಮಗಳಿವೆ. ಸಿನಿಮಾದಲ್ಲಿ ಅವಧಿ ತುಂಬಾ ಕಡಿಮೆ. ಇಷ್ಟು ಆಯಾಮವನ್ನು ಒಟ್ಟಿಗೆ ತೋರಿಸಲು ಸಾಧ್ಯವಿಲ್ಲ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತದೆ ಎನ್ನುವ ಕಾರಣ ಕೂಡ ಇತ್ತು. ಆರೂರು ಜಗದೀಶ್‌ ಹಾಗೂ ರಾಘವೇಂದ್ರ ಹುಣಸೂರು ಅವರ ಬದ್ಧತೆ, ಶಿಸ್ತಿನ ಕೆಲಸ ನನಗೆ ಮೆಚ್ಚುಗೆಯಾಯಿತು. ಈ ಎಲ್ಲಾ ಕಾರಣಕ್ಕೆ ಒಪ್ಪಿಕೊಂಡೆ.

ಬೇರೆ ಧಾರಾವಾಹಿಗಿಂತ ಇದು ಭಿನ್ನ ಹೇಗೆ?
ಮೊದಲ ವಾರದಲ್ಲಿ ಕತೆಯ ವೇಗ ನೋಡಿದರೆ ನಿಮಗೆ ಖುಷಿಯಾಗುತ್ತದೆ. ಒಂದು ಎಪಿಸೋಡ್‌ಗಾಗಿ ಎಷ್ಟೊಂದು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಸುಮ್ಮನೆ ಒಂದು ಮೆಗಾ ಸೀರಿಯಲ್ ಮಾಡಬೇಕು ಎಂಬ ಉದ್ದೇಶ ಈ ತಂಡಕ್ಕಿಲ್ಲ. ಹೊಸದನ್ನು ನೀಡುವ ತುಡಿತ ಇದೆ.

ಒಂದೇ ಸನ್ನಿವೇಶವನ್ನು ಬೇರೆ ಬೇರೆ ಜಾಗಗಳಲ್ಲಿ ಚಿತ್ರೀಕರಿಸುವುದು ಕಷ್ಟ. ಈ ಕಾರಣಕ್ಕೆ ಸಾಕಷ್ಟು ಸೀರಿಯಲ್‌ನಲ್ಲಿ ಕತೆಯನ್ನು ಎಳೆಯುತ್ತಾರೆ. ಆದರೆ ಇಲ್ಲಿ ಹಾಗೆ ಆಗಿಲ್ಲ. ಸಣ್ಣ ಸಣ್ಣ ವಿವರಗಳನ್ನೂ ಅಧ್ಯಯನ ಮಾಡಿ ಚಿತ್ರೀಕರಿಸಲಾಗುತ್ತಿದೆ. ಒಂದೇ ದೃಶ್ಯವನ್ನು ಮೂರು ದಿನ ಚಿತ್ರೀಕರಿಸಿದ ಉದಾಹರಣೆ ಕೂಡ ಇದೆ.

ಪಾತ್ರಕ್ಕಾಗಿ ನಿಮ್ಮ ಸಿದ್ದತೆ ಏನು?
ಲುಕ್‌ ಟೆಸ್ಟ್ ಮಾಡಲಾಯಿತು. ಮೊದಲು ಗಡ್ಡ ಬಿಡಬೇಕು, ದಾಡಿ ಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು. ಇದಕ್ಕಾಗಿ ಸಾಕಷ್ಟು ಸಿದ್ದತೆ ಮಾಡಿಕೊಂಡೆ. ಕೆಂಚು ಬಣ್ಣದ ಕೂದಲು ಮಾಡಿಸಿಕೊಂಡೆ. ಇದರಲ್ಲಿ ನನ್ನದು ಶ್ರೀಮಂತನ ಪಾತ್ರ. ಶ್ರೀಮಂತರ ಜೀವನ ಶೈಲಿಯ ಮೇಲೆ ಒಂದಷ್ಟು ಚಿಂತನೆ ನಡೆಸಿ, ಅವರ ವರ್ತನೆಯನ್ನು ಅಭ್ಯಾಸ ಮಾಡಿಕೊಂಡೆ. ಆರ್ಯವರ್ಧನ್‌ಗೆ ಮಧ್ಯಮವರ್ಗದವರ ಜೀವನಶೈಲಿಯೇ ಗೊತ್ತಿಲ್ಲ. ಅಂತಹ ಸಂದರ್ಭಗಳು ಎದುರಾದಾಗ ನನ್ನ ನಟನೆ ಹೇಗಿರಬೇಕು ಎಂದು ಅಭ್ಯಾಸ ಮಾಡಿಕೊಂಡೆ.

ಸಿನಿಮಾ, ಕಿರುತೆರೆ ನಡುವಿನ ವ್ಯತ್ಯಾಸಗಳೇನು?
ಈ ಧಾರಾವಾಹಿಗೆ ಏಪ್ರಿಲ್‌ನಲ್ಲಿ ಸಿದ್ಧತೆ ನಡೆಸಿ, ಮೇ ತಿಂಗಳಲ್ಲಿ ಶೂಟಿಂಗ್ ಆರಂಭವಾಯಿತು. ಸಿನಿಮಾದಲ್ಲಿ ಬಳಸುವ ರೀತಿಯಲ್ಲೇ ಗುಣಮಟ್ಟದ ಕ್ಯಾಮೆರಾಗಳು, ಬರಪೂರ ಸಿದ್ದತೆ ಇದನ್ನೆಲ್ಲಾ ನೋಡಿದರೆ, ಯಾವ ಸಿನಿಮಾಕ್ಕಿಂತ ಇದು ಕಡಿಮೆ ಇಲ್ಲ. ಹಿರಿತೆರೆ, ಕಿರುತೆರೆಗೆ ಈಗ ವ್ಯತ್ಯಾಸವೇ ಇಲ್ಲ. ಸಿನಿಮಾಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಧಾರಾವಾಹಿಗಳನ್ನು ಶೂಟಿಂಗ್ ಮಾಡುತ್ತಾರೆ. ದುಡ್ಡು ಹಾಕುತ್ತಾರೆ. ಸಿನಿಮಾಕ್ಕಿಂತ ಹೆಚ್ಚು ಜನರನ್ನು ಇದು ಮುಟ್ಟುತ್ತದೆ. ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಧಾರಾವಾಹಿ ನೋಡೇ ನೋಡುತ್ತಾರೆ. ಪ್ರತಿ ಮನೆಯಲ್ಲೂ ನೋಡುತ್ತಾರೆ.

ಹೆಚ್ಚು ಜನರನ್ನು ತಲುಪುವುದರಿಂದ ಪ್ರತಿಕ್ರಿಯೆ ಕೂಡ ಚೆನ್ನಾಗಿರುತ್ತದೆ. ಜನರ ಪ್ರತಿಕ್ರಿಯೆಗೆ ತಕ್ಕಂತೆ ಪಾತ್ರ ಹಾಗೂ ಕತೆಯಲ್ಲಿ ನಮಗೆ ಬೇಕಾದ ಬದಲಾವಣೆ ಮಾಡಿಕೊಳ್ಳುವ ಅವಕಾಶ ಕೂಡ ಇದೆ. ನಟನೆಗೂ ಹೆಚ್ಚು ಅವಕಾಶ ಇದೆ. ಪಾತ್ರಕ್ಕೆ ನ್ಯಾಯ ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.