ADVERTISEMENT

ನಟ ದರ್ಶನ್ ವಂಚಿಸಲು ಯತ್ನಿಸಿದ ಪ್ರಕರಣ: ಠಾಣೆಗೆ ಬಾರದ ನಿರ್ಮಾಪಕ ಉಮಾಪತಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 20:53 IST
Last Updated 15 ಜುಲೈ 2021, 20:53 IST
ದರ್ಶನ್
ದರ್ಶನ್   

ಬೆಂಗಳೂರು: ₹ 25 ಕೋಟಿ ಸಾಲದ ಹೆಸರಿನಲ್ಲಿ ನಟ ದರ್ಶನ್ ಅವರನ್ನು ವಂಚಿಸಲು ಯತ್ನಿಸಿದ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಅವರು ಜಯನಗರ ಪೊಲೀಸರಿಗೆ ಅಪೂರ್ಣ ಮಾಹಿತಿ ನೀಡಿದ್ದರೆಂಬುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರು, ಉಮಾಪತಿ ಅವರಿಗೆ ಸದ್ಯದಲ್ಲೇ ನೋಟಿಸ್ ನೀಡುವ ಸಾಧ್ಯತೆ ಇದೆ.

‘ಅರುಣಕುಮಾರಿ ಎಂಬುವರು ಬ್ಯಾಂಕ್ ನೌಕರರೆಂದು ಹೇಳಿಕೊಂಡು ನನ್ನ ಬಳಿ ಬಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂಬ ಸಂಶಯವಿದೆ. ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಲು ವಿನಂತಿಸುತ್ತೇನೆ’ ಎಂದು ಉಮಾಪತಿ ಅವರು ಜೂನ್ 17ರಂದು ಜಯನಗರ ಇನ್‌ಸ್ಪೆಕ್ಟರ್ ಅವರಿಗೆ ಅರ್ಜಿಯೊಂದನ್ನು ನೀಡಿದ್ದರು.

ಪರಿಶೀಲನೆ ನಡೆಸಿದ್ದ ಇನ್‌ಸ್ಪೆಕ್ಟರ್, ‘ಅರ್ಜಿಯಲ್ಲಿ ಅಪೂರ್ಣ ಮಾಹಿತಿ ಇದೆ. ಗೊಂದಲಗಳೂ ಸಾಕಷ್ಟಿವೆ. ಜೊತೆಗೆ, ಯಾವ ರೀತಿ ಅಪರಾಧವಾಗಿದೆ ಎಂಬ ಸ್ಪಷ್ಟ ವಿವರವೂ ಇರಲಿಲ್ಲ. ಸಂಶಯಗಳೇ ಹೆಚ್ಚಿವೆ. ಇದೊಂದು ಅಭಿಪ್ರಾಯದಂತಿರುವ ಅರ್ಜಿಯೆಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ, ಖುದ್ದು ಠಾಣೆಗೆ ಬಂದು ವಿವರವಾದ ದೂರು ಕೊಡಿ. ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದರು.

ಅದಕ್ಕೆ ಮೌಖಿಕವಾಗಿ ಉತ್ತರಿಸಿದ್ದ ಉಮಾಪತಿ, ‘ಮೈಸೂರಿನಲ್ಲಿರುವ ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯ ಇದಾಗಿದೆ. ಇದರಲ್ಲಿ ಹಲವರ ಹೆಸರು ಇದೆ. ಅವರೆಲ್ಲರ ಜೊತೆ ಚರ್ಚಿಸಿ, ಮೈಸೂರು ಪೊಲೀಸ್ ಠಾಣೆಗೆ ದೂರು ನೀಡಲಾಗುವುದು’ ಎಂದು ಸುಮ್ಮನಾಗಿದ್ದರು.

ಠಾಣೆಗೆ ಬಾರದ ನಿರ್ಮಾಪಕ: ಮೈಸೂರಿನಲ್ಲಿ ದೂರು ದಾಖಲಾಗುತ್ತಿದ್ದಂತೆ ಬೆಂಗಳೂರಿನ ಜಯನಗರ ಪೊಲೀಸರ ತನಿಖೆ ಬಗ್ಗೆ ಮಾತನಾಡಿದ್ದ ಉಮಾಪತಿ, ‘ಜಯನಗರ ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ತನಿಖೆ ಬಗ್ಗೆ ಅವರೇ ಹೇಳಬೇಕು. ಮೈಸೂರು ದೂರಿನ ಬಗ್ಗೆ ಕೇಳುವ ಮಾಧ್ಯಮದವರು, ಜಯನಗರ ಠಾಣೆಗೆ ಕೊಟ್ಟ ದೂರಿನ ತನಿಖೆ ಬಗ್ಗೆ ಪೊಲೀಸರನ್ನು ಏಕೆ ಕೇಳುತ್ತಿಲ್ಲ’ ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ‘ಉಮಾಪತಿ ಅರ್ಜಿಯಲ್ಲಿ ಅಪೂರ್ಣ ಮಾಹಿತಿ ಇತ್ತು. ಠಾಣೆಗೆ ಬಂದು ವಿವರವಾದ ದೂರು ನೀಡುವಂತೆ ಅವರಿಗೆ ಹೇಳಲಾಗಿತ್ತು. ಆದರೆ, ಅವರು ಇದುವರೆಗೂ ಠಾಣೆಗೆ ಬಂದಿಲ್ಲ. ಅದು ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಈಗಲೂ ಅವರು ಠಾಣೆಗೆ ಬಂದು ದೂರು ನೀಡಿದರೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ದೂರು ನೀಡಿದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ. ಅರ್ಜಿ ಪರಿಶೀಲನೆ ನಡೆಸಿದ್ದ ಇನ್‌ಸ್ಪೆಕ್ಟರ್ ಅವರೇ ಪ್ರಕರಣದಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.