ADVERTISEMENT

Devil Movie: ಡಿ.12ಕ್ಕೆ ‘ಡೆವಿಲ್‌’ ದರ್ಶನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 23:39 IST
Last Updated 24 ಆಗಸ್ಟ್ 2025, 23:39 IST
ದರ್ಶನ್‌
ದರ್ಶನ್‌   

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತೆ ಜೈಲು ಸೇರಿರುವುದರಿಂದ ಅವರ ‘ಡೆವಿಲ್‌’ ಚಿತ್ರದ ಕಥೆ ಏನಾಗಬಹುದೆಂಬ ಕುತೂಹಲವಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಬಹು ನಿರೀಕ್ಷಿತ ‘ದಿ ಡೆವಿಲ್’ ಚಿತ್ರ ಡಿಸೆಂಬರ್ 12ರಂದು ತೆರೆ ಕಾಣಲಿದೆ. ಜತೆಗೆ ಚಿತ್ರದ ಮೊದಲ ಹಾಡು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಕೂಡ ಬಿಡುಗಡೆಗೊಂಡಿದೆ.

ದರ್ಶನ್‌ ಹಿಂದಿನ ಚಿತ್ರ ‘ಕಾಟೇರ’ 2023ರ ಡಿಸೆಂಬರ್‌ನಲ್ಲಿ ತೆರೆ ಕಂಡಿದ್ದು. ಅದಕ್ಕೂ ಒಂದು ತಿಂಗಳ ಮೊದಲೇ ದರ್ಶನ್‌ ‘ಡೆವಿಲ್‌’ ತಮ್ಮ ಮುಂದಿನ ಚಿತ್ರ ಎಂದು ಘೋಷಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2024ರ ಡಿಸೆಂಬರ್‌ನಲ್ಲಿ ಈ ಚಿತ್ರ ತೆರೆಯಲ್ಲಿರಬೇಕಿತ್ತು. 2024ರ ಪ್ರಾರಂಭದಿಂದಲೇ ಚಿತ್ರೀಕರಣ ಶುರುವಾಗಿತ್ತು. ಆದರೆ ಜೂನ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನವಾಗಿ ಚಿತ್ರೀಕರಣ ಸ್ಥಗಿತಗೊಂಡಿತು.

ಅಲ್ಲಿಂದ ಈ ಚಿತ್ರದ ಭವಿಷ್ಯ ಒಂದು ರೀತಿ ತಂತಿ ಮೇಲಿನ ನಡಿಗೆಯಂತೆಯೇ ಇತ್ತು. ದರ್ಶನ್‌ಗೆ ಜಾಮೀನು ದೊರೆತು ಎಲ್ಲವೂ ಒಂದು ಹಂತಕ್ಕೆ ಬಂದ ಬಳಿಕ ಫೆಬ್ರವರಿ 2025ರಲ್ಲಿ ಚಿತ್ರೀಕರಣ ಪುನರಾರಂಭವಾಯಿತು. ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ಜತೆಗೆ ಪ್ರಚಾರ ಕಾರ್ಯ ಪ್ರಾರಂಭಿಸಬೇಕೆಂದು ತಂಡ ಸಿದ್ಧತೆ ನಡೆಸುತ್ತಿದ್ದಾಗ ದರ್ಶನ್‌ ಜಾಮೀನು ರದ್ದುಗೊಂಡು ತಂಡಕ್ಕೆ ಮತ್ತೆ ಸಂಕಷ್ಟ ಎದುರಾಯ್ತು.

ADVERTISEMENT

ಹಾಡು ಬಿಡುಗಡೆ

2025ರ ಆ.15ರಂದು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಪ್ರಚಾರಕ್ಕೆ ಚಾಲನೆ ನೀಡುವುದಾಗಿ ತಂಡ ಘೋಷಿಸಿತ್ತು. ಆದರೆ ಅದೆ ವೇಳೆಗೆ ದರ್ಶನ್‌ ಮತ್ತೆ ಬಂಧಿತರಾಗಿದ್ದು, ಆ.24ರಂದು ಅಂತಿಮವಾಗಿ ಹಾಡು ಬಿಡುಗಡೆಗೊಂಡಿದೆ. ಇದರ ಜತೆಜತೆಗೆ ಚಿತ್ರ ಬಿಡುಗಡೆ ದಿನಾಂಕವನ್ನೂ ತಂಡ ಪ್ರಕಟಿಸಿದೆ. 

ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ಚಿತ್ರದಲ್ಲಿದ್ದಾರೆ. ‘ಮಿಲನ’ ಪ್ರಕಾಶ್‌ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ, ಸುಧಾಕರ್‌ ರಾಜ್‌ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಚಾರಕ್ಕೆ ವಿಜಯಲಕ್ಷ್ಮಿ ಸಾಥ್‌

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಚಿತ್ರ ಪ್ರಚಾರಕ್ಕೆ ಸಾಥ್‌ ನೀಡುತ್ತಿದ್ದಾರೆ. ಚಿತ್ರ ಬಿಡುಗಡೆ ದಿನಾಂಕದ ಪೋಸ್ಟರ್‌ ಕೂಡ ದರ್ಶನ್‌ ಹಾಗೂ ವಿಜಯಲಕ್ಷ್ಮಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕವೇ ಬಿಡುಗಡೆಗೊಂಡಿದೆ.

‘ನಿಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹೃದಯದಲ್ಲಿ ನೀವೆಲ್ಲರೂ ಇದ್ದೀರಿ. ಅವರು ಮರಳಿ ಬಂದು ನೇರವಾಗಿ ನಿಮ್ಮನ್ನು ಸಂಪರ್ಕಿಸುವ ತನಕ ನಾನು ಅವರ ಸಾಮಾಜಿಕ ಮಾಧ್ಯಮವನ್ನು ನಾನು ನಿರ್ವಹಿಸುತ್ತೇನೆ. ಅವರ ಪರವಾಗಿ ಅಪ್​ಡೇಟ್​ ನೀಡುತ್ತೇನೆ ಮತ್ತು ಸಿನಿಮಾ ಪ್ರಚಾರ ಮಾಡುತ್ತೇನೆ’ ಎಂದು ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ದರ್ಶನ್ ಹೇಳಿದ್ದರು.

ಜತೆಗೆ ‘ಡೆವಿಲ್‌’ ಹೊಸ ಪೋಸ್ಟರ್‌ ಹಂಚಿಕೊಂಡು ಚಿತ್ರ ಬಿಡುಗಡೆ ಮುನ್ಸೂಚನೆ ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.