ADVERTISEMENT

ನಟ, ವಸ್ತ್ರ ವಿನ್ಯಾಸಕ ಗಂಡಸಿ ನಾಗರಾಜ್‌ ನಿಧನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 9:35 IST
Last Updated 12 ಡಿಸೆಂಬರ್ 2022, 9:35 IST
ಗಂಡಸಿ ನಾಗರಾಜ್‌
ಗಂಡಸಿ ನಾಗರಾಜ್‌   

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ವಸ್ತ್ರ ವಿನ್ಯಾಸಕ, ನಟ ಗಂಡಸಿ ನಾಗರಾಜ್‌(65) ಭಾನುವಾರ ತಡರಾತ್ರಿ ನಿಧನರಾದರು.

ಸುಮಾರು 35 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಾಗರಾಜ್‌ ಅವರಿಗೆ ಕೆಲ ವರ್ಷಗಳ ಹಿಂದೆ ಎರಡೂ ಕಿಡ್ನಿಗಳು ವೈಫಲ್ಯವಾಗಿತ್ತು. ಹೀಗಾಗಿ ಅವರು ಡಯಾಲಿಸಿಸ್‌ನಲ್ಲಿದ್ದರು. ಈ ಕಾರಣದಿಂದ ಚಿತ್ರರಂಗದಿಂದಲೂ ದೂರ ಉಳಿದಿದ್ದರು. ಕೆಲ ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಪದ್ಮನಾಭನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಾಸನ ಜಿಲ್ಲೆ ಅರಸೀಕೆರೆ ಸಮೀಪದ ‘ಗಂಡಸಿ’, ನಾಗರಾಜ್‌ ಅವರ ಊರು.ನಾಟಕ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ಅವರು, ಆರಂಭದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಸಿಗದೇ ಹೋದಾಗ ಗಾಂಧಿ ಬಜಾರ್‌ನಲ್ಲಿ ಟೈಲರ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕಾಶಿನಾಥ್‌ ಅವರ ‘ತಾಯೊಗೊಬ್ಬ ತರ್ಲೆ ಮಗ’ ಸಿನಿಮಾ ಮೂಲಕ ವಸ್ತ್ರಾಲಂಕಾರ ಸಹಾಯಕನಾಗಿ ಚಿತ್ರರಂಗದ ಜೀವನ ಆರಂಭಿಸಿದ ಅವರು, ಸುಮಾರು 45 ಸಿನಿಮಾಗಳಲ್ಲಿ ವಸ್ತ್ರ ವಿನ್ಯಾಸಕರಾಗಿ ದುಡಿದಿದ್ದಾರೆ. ನಂತರದಲ್ಲಿ ಉಪೇಂದ್ರ ನಿರ್ದೇಶನದ, ಜಗ್ಗೇಶ್‌ ಅವರು ನಾಯಕ ನಟನಾಗಿ ನಟಿಸಿದ ‘ತರ್ಲೆ ನನ್ಮಗ’ ಸಿನಿಮಾದಲ್ಲಿ ಮುಖ್ಯ ವಸ್ತ್ರ ವಿನ್ಯಾಸಕರಾಗಿ ಬಡ್ತಿ ಪಡೆದಿದ್ದರು. ಮುಂದೆ ಜಗ್ಗೇಶ್‌ ಅವರ 38 ಸಿನಿಮಾಗಳಲ್ಲಿ ವಸ್ತ್ರ ವಿನ್ಯಾಸಕರಾಗಿ ದುಡಿದರು. ಸುದೀಪ್ ಅವರ ‘ಸ್ಪರ್ಶ’, ಗಣೇಶ್‌ ಅವರ ‘ಚೆಲ್ಲಾಟ’, ‘ಹಬ್ಬ’, ‘ಶ್ರೀ ಮಂಜುನಾಥ’, ‘ಅಮೃತವರ್ಷಿಣಿ’ ಹೀಗೆ ಹತ್ತಾರು ಸಿನಿಮಾಗಳಿಗೂ ಅವರು ವಸ್ತ್ರ ವಿನ್ಯಾಸಕಾರರಾಗಿದ್ದರು.

ADVERTISEMENT

‘ಭಂಡ ನನ್ನ ಗಂಡ’ ಸಿನಿಮಾದಲ್ಲಿ ‘ಶೇಖ್‌ ಅಬ್ದುಲ್ಲ’ ಎಂಬ ಪಾತ್ರದಲ್ಲಿ ಮಿಂಚಿದ್ದ ನಾಗರಾಜ್‌, ನಂತರದಲ್ಲಿ ನೂರಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಹಾಸ್ಯ ಕಲಾವಿದರಾಗಿ ಅವರು ದುಡಿದಿದ್ದಾರೆ. ನಾಗರಾಜ್‌ ಎಂಬ ಹೆಸರಿನ ಹಲವರು ಚಿತ್ರರಂಗದಲ್ಲಿದ್ದ ಕಾರಣ ತಮ್ಮ ಊರಿನ ಹೆಸರನ್ನೇ ತಮ್ಮ ಹೆಸರಿಗೆ ಅವರು ಸೇರ್ಪಡಿಸಿದ್ದರು.

ನಾಗರಾಜ್‌ ಅವರ ಪತ್ನಿ 2020ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.