ADVERTISEMENT

‘99’ ಚಿತ್ರದ ಗೋಲ್ಡನ್‌ ಜರ್ನಿ

ಕೆ.ಎಚ್.ಓಬಳೇಶ್
Published 19 ಏಪ್ರಿಲ್ 2019, 4:16 IST
Last Updated 19 ಏಪ್ರಿಲ್ 2019, 4:16 IST
ನಟ ಗಣೇಶ್‌
ನಟ ಗಣೇಶ್‌   

‘ಎಲ್ಲರ ಜೀವನದಲ್ಲೂ ನಡೆಯುವ ಕಥೆ ಇದು’

ಒಂದೇ ಸಾಲಿನಲ್ಲಿ ‘99’ ಸಿನಿಮಾದ ಕಥೆ ಹೇಳಿ ಮುಗುಳು ನಕ್ಕರು ನಟ ಗಣೇಶ್‌. ಇದು ತಮಿಳಿನ ‘96’ ಚಿತ್ರದ ರಿಮೇಕ್. ‘ಸಿನಿಮಾದ ಆತ್ಮ ಒಂದೇ. ಆದರೆ, ಇಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರ ಮಾಡಲಾಗಿದೆ. ಆ ಸಿನಿಮಾಕ್ಕೂ, ಈ ಚಿತ್ರಕ್ಕೂ ವ್ಯತ್ಯಾಸವಿದೆ’ ಎನ್ನುವುದು ಗೋಲ್ಡನ್‌ ಸ್ಟಾರ್‌ ಮಾತು.

‘ರಿಮೇಕ್‌ ಸಿನಿಮಾ ಮಾಡುವ ಮೊದಲು ಮೂಲ ಸಿನಿಮಾ ವೀಕ್ಷಿಸಿ ಅಲ್ಲಿನ ಕಲಾವಿದರಂತೆ ನಟಿಸಲು ಆಗದು. ನಮ್ಮದೇ ಶೈಲಿಯಲ್ಲಿ ನಟಿಸಬೇಕು. ಆಗಷ್ಟೇ ಅದು ಇಲ್ಲಿನ ಪ್ರೇಕ್ಷಕರಿಗೆ ಆಪ್ತವಾಗುತ್ತದೆ. ಈ ಸಿನಿಮಾದ ಶೈಲಿ, ಧಾಟಿ ಬೇರೆಯದೆ ರೀತಿಯಲ್ಲಿದೆ. ಇದು ಪ್ರತಿಯೊಬ್ಬರ ಜೀವನಕ್ಕೂ ಹತ್ತಿರವಾಗಿದೆ’ ಎಂದು ಮಾತು ವಿಸ್ತರಿಸಿದರು.

ADVERTISEMENT

‘ಟಪೋರಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಗಣೇಶ್‌ ಅವರ ಬಣ್ಣದ ಬದುಕಿಗೀಗ ಹತ್ತೊಂಬತ್ತು ವರ್ಷ. ವೃತ್ತಿಬದುಕಿನಲ್ಲಿ ಏರಿಳಿತ ಕಂಡಿರುವ ಅವರಿಗೆ ಸಿನಿಮಾವೇ ಸರ್ವಸ್ವ.

‘ನನ್ನ ಸಿನಿಮಾ ಜರ್ನಿಯನ್ನು ಹಿಂದಿರುಗಿ ನೋಡಿದಾಗ ನನಗೇ ಅಚ್ಚರಿಯಾಗುತ್ತದೆ. ಬಣ್ಣದ ಬದುಕಿನಲ್ಲಿ ಒಳ್ಳೆಯ ಸ್ಕ್ರಿಪ್ಟ್‌ಗಳು ಸಿಕ್ಕಿವೆ. ಉತ್ತಮ ಪಾತ್ರಗಳನ್ನು ಮಾಡಿರುವ ಖುಷಿ ಇದೆ. ಬೇರೆ ಬೇರೆ ಗುಣಗಳ ವ್ಯಕ್ತಿಗಳೂ ಸಿಕ್ಕಿದ್ದಾರೆ’ ಎಂದು ಮೆಲುಕು ಹಾಕಿದರು.

‘99’ ಚಿತ್ರದಿಂದ ಆರಂಭವಾದ ಮಾತುಕತೆ ಚಿತ್ರರಂಗ ಪ್ರವೇಶಿಸಿದ ಆರಂಭದ ದಿನಗಳು, ವೃತ್ತಿಬದ್ಧತೆ ಹೀಗೆ ಈ ಸಿನಿಮಾದಲ್ಲಿನ ಟ್ರಾವೆಲ್‌ ಫೋಟೊಗ್ರಾಫರ್‌ ಪಾತ್ರದಂತೆಯೇ ಸುತ್ತಾಡಿ ನಿರ್ದೇಶಕ, ಚಿತ್ರತಂಡದ ಸದಸ್ಯರ ಪರಿಶ್ರಮಕ್ಕೆ ಶ್ಲಾಘನೆ ಸಲ್ಲಿಸುವುದರೊಂದಿಗೆ ಕೊನೆಗೊಂಡಿತು.

‘99’ ಚಿತ್ರದ ಹೈಲೈಟ್‌ ಏನು?

ಅದೊಂದು ಎಮೋಷನಲ್, ರೋಮ್ಯಾಂಟಿಕ್‌ ಜರ್ನಿ. ಎಲ್ಲರ ಬದುಕಿನಲ್ಲಿ ನಡೆಯುವ ಕಥೆ ದೃಶ್ಯರೂಪ ತಳೆದಿದೆ. ಅದನ್ನು ಕೇವಲ ಸಿನಿಮ್ಯಾಟಿಕ್‌ ಆಗಿ ಮಾಡಿಲ್ಲ ಎನ್ನುವುದೇ ವಿಶೇಷ. ಸಹಜ ನಟನೆಗೆ ಹೆಚ್ಚು ಅವಕಾಶವಿತ್ತು. ನನ್ನದು ಫರ್ಪಾಮೆನ್ಸ್‌ ಬೇಡುವ ಪಾತ್ರ. ಇದು ನನ್ನ ನಟನಾ ಸಾಮರ್ಥ್ಯದ ಮೇಲೆ ಕನ್ನಡಿ ಹಿಡಿಯುತ್ತದೆ. ಎಲ್ಲ ವರ್ಗದವರಿಗೂ ಇಷ್ಟವಾಗುವಂತಹ ಸಿನಿಮಾ ಮಾಡಿದ್ದೇವೆ. ರಿಮೇಕ್‌ ಚಿತ್ರ ಮಾಡುವಾಗ ಮೂಲ ಸಿನಿಮಾದ ಹೆಸರನ್ನೇ ಇಡಬೇಕೆಂದಿಲ್ಲ. ಹಾಗಾಗಿ, ಚಿತ್ರದ ಟೈಟಲ್ ಅನ್ನು ಬದಲಾಯಿಸಿಕೊಂಡಿದ್ದೇವೆ.

ಈ ಚಿತ್ರದ ಪಾತ್ರಕ್ಕಾಗಿ ಸಿದ್ಧತೆ ಹೇಗಿತ್ತು?

ಚಿತ್ರದಲ್ಲಿ ನಾನು ಟ್ರಾವೆಲ್‌ ಫೋಟೊಗ್ರಾಫರ್‌. ನ್ಯಾಚುರಲ್‌ ಕ್ಯಾರೆಕ್ಟರ್‌ ಇದು. ಪ್ರತಿ ಸಿನಿಮಾದ ಪಾತ್ರಕ್ಕೂ ಒಂದು ವೈಶಿಷ್ಟ್ಯ ಇರುವುದು ಸಾಮಾನ್ಯ. ಆದರೆ, ಈ ಚಿತ್ರದಲ್ಲಿನ ರಾಮ್‌ ಸಾಮಾನ್ಯ ಮನುಷ್ಯ. ಆತ ಸಾಮಾನ್ಯನಂತೆ ಕಾಣಬೇಕಾದರೆ ದೈಹಿಕವಾಗಿಯೂ ಬದಲಾವಣೆ ಅತ್ಯಗತ್ಯ. ಅದಕ್ಕಾಗಿ ನಾನು ಐದು ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದೆ. ಗಡ್ಡಧಾರಿಯೂ ಆದೆ. ಹಾಗಾಗಿಯೇ, ಪಾತ್ರ ಸಹಜವಾಗಿ ಮೂಡಿಬಂದಿದೆ.

‘ಅರಮನೆ’ ಚಿತ್ರದ ಫೋಟೊಗ್ರಾಫರ್‌ಗೂ, ಈ ಸಿನಿಮಾದ ಫೋಟೊಗ್ರಾಫರ್‌ ಪಾತ್ರಕ್ಕೂ ವ್ಯತ್ಯಾಸವಿದೆಯೇ?

‘ಅರಮನೆ’ಯ ಅರುಣ್‌ ಒಂದು ಭಾಗದ ಫೋಟೊಗ್ರಾಫರ್‌ ಅಷ್ಟೇ. ಛಾಯಾಚಿತ್ರ ಸೆರೆಹಿಡಿದುಕೊಂಡು ಜೀವನ ಸಾಗಿಸುವುದೇ ರಾಮ್‌ನ ವೃತ್ತಿ. ಅವನದು ಅಲೆದಾಟದ ಬದುಕು. ಅದು ಗೋಲ್ಡನ್‌ ಜರ್ನಿಯೂ ಹೌದು. ಈ ಪಯಣದ ನಡುವೆಯೇ ಶಾಲಾ ದಿನಗಳತ್ತ ಜಾರಿದಾಗ ಆತನ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದೇ ಚಿತ್ರದ ತಿರುಳು.‌

ನಿರ್ದೇಶಕ ಪ್ರೀತಮ್‌ ಗುಬ್ಬಿ ಜೊತೆಗೆ ಮೂರನೇ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು?

‘ಮಳೆಯಲಿ ಜೊತೆಯಲಿ’ ಸಿನಿಮಾದ ವೇಳೆ ಅವನಲ್ಲಿ ಇದ್ದಂತಹ ಹುಡುಗಾಟ ಈಗಿಲ್ಲ. ಆ ವೇಳೆ ಅವನೊಟ್ಟಿಗೆ ಸಾಕಷ್ಟು ಚರ್ಚಿಸುತ್ತಿದ್ದೆ. ಈ ಸಿನಿಮಾ ಶೂಟಿಂಗ್‌ ವೇಳೆಯೂ ಚರ್ಚಿಸಿದ್ದೇನೆ. ಈಗ ಅವನಿಗೆ ಮೆಚ್ಯುರಿಟಿ ಬಂದಿದೆ. ಆತನ ಕೆಲಸದಲ್ಲಿ ವೃತ್ತಿಪರತೆ ಎದ್ದುಕಾಣುತ್ತಿದೆ. ‘99’ ಸಿನಿಮಾದ ಎಮೋಷನಲ್ ದೃಶ್ಯಗಳನ್ನು ನೋಡಿದಾಗ ಪ್ರೇಕ್ಷಕರಿಗೆ ಇದರ ಅನುಭವವಾಗುತ್ತದೆ. ಖುಷಿ ಕೂಡ ಕೊಡುತ್ತದೆ.

ನಿಮ್ಮ ಅಭಿಮಾನಿಗಳನ್ನು ಸಿನಿಮಾಕ್ಕೆ ಹೇಗೆ ಆಮಂತ್ರಿಸುತ್ತೀರಿ

ಇದು ಗಣೇಶ್‌ ಕಥೆಯಲ್ಲ. ಎಲ್ಲರ ಜೀವನದ ಕಥೆ. ಅದರಲ್ಲಿ ನಾನು ನಟಿಸಿದ್ದೇನೆ ಅಷ್ಟೇ. ಹಾಡುಗಳು ಕೂಡ ಉತ್ತಮವಾಗಿ ಮೂಡಿಬಂದಿವೆ. ಅಭಿಮಾನಿಗಳಿಗೆ ಖಂಡಿತ ಇಷ್ಟವಾಗಲಿದೆ.

ನಟಿ ಭಾವನಾ ಅವರ ನಟನೆ ಬಗ್ಗೆ ಹೇಳಿ

‘ರೋಮಿಯೋ’ ಚಿತ್ರದಲ್ಲಿ ಅವರು ನನಗೆ ನಾಯಕಿಯಾಗಿದ್ದರು. ಅದು ಫನ್ ಚಿತ್ರ. ಇದು ಭಾವುಕತೆ ಮೇಳೈಸಿದ ಸಿನಿಮಾ. ನನ್ನ ಪಾತ್ರದಷ್ಟೇ ಅವರ ಪಾತ್ರದಲ್ಲೂ ವಿಶೇಷ ಇದೆ. ಅವರು ಪಾತ್ರವನ್ನು ಪೋಷಿಸುವ ಪರಿ ಅದ್ಭುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.