ADVERTISEMENT

‘ಜೈ ಭೀಮ್‘ ಸಿನಿಮಾ ವಿವಾದದ ಬಗ್ಗೆ ಮಾತನಾಡಿದ ನಟ ಪ್ರಕಾಶ್ ರಾಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2021, 7:59 IST
Last Updated 7 ನವೆಂಬರ್ 2021, 7:59 IST
ಜೈ ಭೀಮ್ ಚಿತ್ರದ ವಿವಾದಿತ ದೃಶ್ಯ
ಜೈ ಭೀಮ್ ಚಿತ್ರದ ವಿವಾದಿತ ದೃಶ್ಯ   

ಬೆಂಗಳೂರು: ಇತ್ತೀಚೆಗೆ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿರುವ ಸೂರ್ಯ ನಟನೆಯ ‘ಜೈ ಭೀಮ್'ಸಿನಿಮಾ ಹಿಂದಿ ಭಾಷಾ ವಿವಾದದ ಕಿಡಿಯನ್ನೂ ಹೊತ್ತಿಸಿತ್ತು.

ಚಿತ್ರದ ದೃಶ್ಯವೊಂದರಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಪ್ರಕಾಶ್ ರಾಜ್ ಅವರು ಮಾರವಾಡಿ ಪಾತ್ರಧಾರಿ ಹಿಂದಿ ಮಾತನಾಡಿದ್ದಕ್ಕೆ ಆತನ ಕೆನ್ನೆಗೆ ಹೊಡೆಯುವ ದೃಶ್ಯ ವಿವಾದ ಸೃಷ್ಟಿಸಿತ್ತು. ಈ ವಿವಾದದ ಬಗ್ಗೆ ನಟ ಪ್ರಕಾಶ್ ರಾಜ್ 'ನ್ಯೂಸ್ 9 ಲೈವ್' ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದು, ‘ಕೆನ್ನೆಗೆ ಹೊಡೆದಿರುವ ದೃಶ್ಯವನ್ನು ವಿವಾದ ಮಾಡಿರುವವರ ಮನಸ್ಥಿತಿ ಎಂತದು? ಎಂದು ಇದು ತೋರಿಸುತ್ತದೆ'ಎಂದಿದ್ದಾರೆ.

‘ಜೈ ಭೀಮ್'ನೋಡಿದ ಮೇಲೆ ಕೆಲವರಿಗೆ ತಳಸಮುದಾಯದವರ ನೋವು ಏನು ಎಂಬುದು ಕಾಣಲಿಲ್ಲ. ಕೇವಲ ಕೆನ್ನೆಗೆ ಹೊಡೆದ ದೃಶ್ಯವೇ ದೊಡ್ಡದಾಗಿ ಕಾಣಿಸಿತು. ಅದನ್ನೇ ದೊಡ್ಡ ವಿವಾದ ಮಾಡಿದ್ದಾರೆ. ಆದರೆ, ನಿರ್ದೇಶಕರು ಉದ್ದೇಶಪೂರ್ವಕವಾಗಿಯೇ ಆ ದೃಶ್ಯವನ್ನು ಅಳವಡಿಸಿದ್ದಾರೆ'ಎಂದು ಹೇಳಿದ್ದಾರೆ.

ADVERTISEMENT

‘ದಕ್ಷಿಣದ ಮೇಲೆ ಹಿಂದಿ ಹೇರಿಕೆ ವಿರುದ್ಧ ನಿರ್ದೇಶಕರಿಗಿದ್ದ ಆಕ್ರೋಶವನ್ನು ತೋರಿಸಲೆಂದೇ ಆ ದೃಶ್ಯವನ್ನು ಹೆಣೆಯಲಾಗಿದೆ. ನಾನು ನಟನಾಗಿ ಅಭಿನಯಿಸಿದ್ದರೂ, ಅದಕ್ಕೆ ನನ್ನ ಸಹಮತ ಕೂಡ ಇದೆ'ಎಂದಿದ್ದಾರೆ.

‘ಇನ್ನು, ಕೆಲವರಿಗಂತೂ ಆ ದೃಶ್ಯದಲ್ಲಿ ನಾನಿದ್ದೇನೆ ಎಂಬುದನ್ನೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ಚಿತ್ರ ನೋಡಿ ಅಲೆಮಾರಿ ಜನರ ಕಷ್ಟ ಏನು ಎಂಬುದರ ಬಗ್ಗೆ ಅವರು ಮಾತನಾಡಲಿಲ್ಲ. ಅವರ ಕಷ್ಟ ಕಂಡು ಅಯ್ಯೋ ಎನ್ನಲಿಲ್ಲ. ಬದಲಿಗೆ ಹಿಂದಿ ವಿವಾದವನ್ನೇ ದೊಡ್ಡದಾಗಿಸಿ ನನ್ನ ಗುರಿಯಾಗಿಸಲು ನೋಡಿದರು. ಇದೀಗ ಅವರು ಬೌದ್ಧಿಕವಾಗಿ ಬೆತ್ತಲಾದಂತಾಗಿದೆ'ಎಂದು ಟ್ವಿಟರ್ ಹಾಗೂ ಇತರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಗುರಿಯಾಗಿ ನಡೆದ ಚರ್ಚೆಯನ್ನು ಅವರು ಖಂಡಿಸಿದ್ದಾರೆ.

ನಟ ಸೂರ್ಯ ಹಾಗೂ ಅವರ ಪತ್ನಿ ಜ್ಯೋತಿಕಾ ಒಡೆತನದ ‘2ಡಿ ಎಂಟರ್‌ಟೈನ್‌ಮೆಂಟ್’ ಸಂಸ್ಥೆ ನಿರ್ಮಾಣ ಮಾಡಿರುವ ‘ಜೈ ಭೀಮ್‌’ ನ್ನು ಜ್ಞಾನವೇಲ ನಿರ್ದೇಶಿಸಿದ್ದಾರೆ. ನ್ಯಾಯಾಂಗ ಹಾಗೂ ನಿರ್ಲಕ್ಷಿತ ಸಮುದಾಯದ ಹೋರಾಟದ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಸೂರ್ಯಾ ಅವರು ಲಾಯರ್ ಚಂದ್ರು ಪಾತ್ರದಲ್ಲಿ ನಟಿಸಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಪ್ರಕಾಶ್ ರಾಜ್, ಲಿಜ್‌ಮೋಲ್ ಜೋಶ್,ರಾಜಿಶಾ ವಿಜಯನ್ ಇದ್ದಾರೆ. ಕನ್ನಡ, ತೆಲುಗು ಹಾಗೂ ಮಲೆಯಾಳಂನಲ್ಲೂ ಈ ಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಮೆಚ್ಚುಗೆಗಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.