ADVERTISEMENT

ಕಂಠೀರವ ಸ್ಟುಡಿಯೊದಲ್ಲಿ ಮೌನದ ಕಣ್ಣೀರು: ಪುನೀತ್ ಅಂತ್ಯಕ್ರಿಯೆಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 1:31 IST
Last Updated 31 ಅಕ್ಟೋಬರ್ 2021, 1:31 IST
ಕಂಠೀರವ ಸ್ಟುಡಿಯೊದಲ್ಲಿ ಪುನೀತ್‌ಗೆ ಅಂತಿಮ ನಮನ
ಕಂಠೀರವ ಸ್ಟುಡಿಯೊದಲ್ಲಿ ಪುನೀತ್‌ಗೆ ಅಂತಿಮ ನಮನ   

ಬೆಂಗಳೂರು: ಬೆಳಕು ಮೂಡುವ ಮುನ್ನವೇ ನಟ ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ‌ ಯಾತ್ರೆ ಮುಗಿದಿದ್ದು, ಕೆಲವೇ ಕ್ಷಣಗಳಲ್ಲಿ 'ವೀರ ಕನ್ನಡಿಗ'ನ ಅಂತ್ಯಕ್ರಿಯೆ ನೆರವೇರಲಿದೆ.

ಇದಕ್ಕೆ ಕಂಠೀರವ ಸ್ಟುಡಿಯೊದಲ್ಲಿ ಸಕಲ ಸಿದ್ಧತೆಗಳು ನಡೆದಿವೆ.

ಈಡಿಗ ಸಮುದಾಯದ ಸಂಪ್ರದಾಯದಂತೆ ಪುನೀತ್ ವಿಧಿ ವಿಧಾನಗಳು ನಡೆಯುತ್ತಿದ್ದು, ರಾಘವೇಂದ್ರ ರಾಜ್‌ಕುಮಾರ್ ಅವರ ಹಿರಿಯ ಮಗ ವಿನಯ್ ವಿಧಿ ವಿಧಾನ ಪೂರೈಸಲಿದ್ದಾರೆ.

ADVERTISEMENT

ಕಂಠೀರವ ಸ್ಟುಡಿಯೊದಲ್ಲಿ ರಾಜ್‌ ಕುಟುಂಬದ ಸದಸ್ಯರು, ಆಪ್ತರು ಹಾಗೂ ಗಣ್ಯರಿಗಷ್ಟೇ ಪ್ರವೇಶ ಕಲ್ಪಿಸಲಾಗಿದೆ.

ಪಾರ್ಥಿವ ಶರೀರವು ಸ್ಟುಡಿಯೊ ತಲುಪಿದ ಕೂಡಲೇ ನಟ ಸೃಜನ್ ಲೋಕೇಶ್ ಸೇರಿದಂತೆ ಕೆಲವರು ಅದನ್ನು ಹೆಗಲ ಮೇಲೆ ಹೊತ್ತು ಅಂತ್ಯ ಸಂಸ್ಕಾರ ನಡೆಯುವ ಸ್ಥಳಕ್ಕೆ ತಂದರು.

ಬಳಿಕ ಪೊಲೀಸ್ ವಾದ್ಯ ವೃಂದದವರು ರಾಷ್ಟ್ರಗೀತೆ ನುಡಿಸುವ ಮೂಲಕ ಪುನೀತ್‌ಗೆ ಗೌರವ ವಂದನೆ ಸಲ್ಲಿಸಿದರು.

ಈ ದೃಶ್ಯವನ್ನು ಕಂಡು ಪುನೀತ್ ಪತ್ನಿ ಗದ್ಗದಿತರಾದರು. ಹಿರಿಯ ಮಗಳು ಧೃತಿ ಅಮ್ಮನ ಹೆಗಲ ಮೇಲೆ ಕೈ ಇರಿಸಿ, ಭುಜದ ಮೇಲೆ ತಲೆ ಒರಗಿಸಿ ಕಣ್ಣೀರಿಡುತ್ತಿದ್ದರು. ಪುನೀತ್ ಕಿರಿಯ ಪುತ್ರಿ ವಂದಿತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಈ ದೃಶ್ಯ ಅಭಿಮಾನಿಗಳ ಮನ ಕಲಕುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.