ಮುಂಬೈ: ಬಾಲಿವುಡ್ ನಟ ಸಂಜಯ್ ದತ್‌ಗೆ (61 ವರ್ಷ) ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿದ್ದು, ಮುಂಬೈನಲ್ಲೇ ಪ್ರಾಥಮಿಕ ಚಿಕಿತ್ಸೆ ಪಡೆದು ಕೋವಿಡ್–19 ಪರಿಸ್ಥಿತಿ ಆಧರಿಸಿ ವಿದೇಶಕ್ಕೆ ಮುಂದಿನ ಹಂತದ ಚಿಕಿತ್ಸೆಗೆ ತೆರಳಲಿದ್ದಾರೆ.
ಸಂಜು ಬಾಬಾ ಎಂದೇ ಖ್ಯಾತರಾಗಿರುವ ಸಂಜಯ್ ದತ್ ಇತ್ತೀಚೆಗಷ್ಟೇ ಉಸಿರಾಟದ ಸಮಸ್ಯೆಯಿಂದ ಬಾಂದ್ರಾದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ನಡೆಸಿದ ಹಲವು ಪರೀಕ್ಷೆಗಳಿಂದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.
ಪ್ರಸ್ತುತ ಅವರು ಅಂಧೇರಿಯಲ್ಲಿರುವ ಕೋಕಿಲಾಬೆನ್ ಧೀರುಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
'ಸಂಜು ಪ್ರಾಥಮಿಕ ಚಿಕಿತ್ಸೆಯನ್ನು ಮುಂಬೈನಲ್ಲೇ ಪೂರೈಸಲಿದ್ದಾರೆ. ಕೋವಿಡ್–19 ಪರಿಸ್ಥಿತಿ ಶಮನವಾಗಿ ಪ್ರಯಾಣಕ್ಕೆ ಸಹಕಾರಿಯಾಗುವುದನ್ನು ಆಧರಿಸಿ ನಾವು ಮುಂದಿನ ಪ್ರಯಾಣದ ಬಗ್ಗೆ ಯೋಜನೆ ಮಾಡಲಿದ್ದೇವೆ. ಪ್ರಸ್ತುತ ಕೋಕಿಲಾಬೆನ್ ಆಸ್ಪತ್ರೆಯ ಅತ್ಯುತ್ತಮ ವೈದ್ಯರು ಸಂಜುಗೆ ಚಿಕಿತ್ಸೆ ನೀಡುತ್ತಿದ್ದಾರೆ' ಎಂದು ಸಂಜಯ್ ದತ್ ಪತ್ನಿ ಮಾನ್ಯತಾ ಹೇಳಿದ್ದಾರೆ.
'ಸಂಜು ಜೀವನದಲ್ಲಿ ಸಾಕಷ್ಟು ಏಳು–ಬೀಳುಗಳನ್ನು ಕಂಡಿದ್ದಾರೆ, ಆದರೆ ಪ್ರತಿಯೊಂದು ಕಠಿಣ ಪರಿಸ್ಥಿತಿಯಲ್ಲಿಯೂ ಅವರಿಗೆ ಮುಂದೆ ಸಾಗುವಂತೆ ಮಾಡಿರುವುದು ನಿಮ್ಮ ಬೆಂಬಲ ಮತ್ತು ಮೆಚ್ಚುಗೆ. ಅದಕ್ಕೆ ನಾವು ಸದಾ ಋಣಿಯಾಗಿರುತ್ತೇವೆ. ಈ ನಮಗೆ ಮತ್ತೊಂದು ಕಠಿಣ ಸವಾಲು ಮುಂದಿದೆ, ನೀವು ಅದೇ ಪ್ರೀತಿ ಮತ್ತು ಕಾಳಜಿಯನ್ನು ತೋರುವಿರೆಂದು ನನಗೆ ಭರವಸೆಯಿದೆ. ಯಾವುದೇ ನಕಾರಾತ್ಮ ಯೋಚನೆಗಳಿಗೂ ಸರಿಯದೆ ಸಂಜುಗಾಗಿ ನಗುನಗುತ್ತ, ಸಹಜ ಬದುಕನ್ನು ಸಾಗಿಸಬೇಕಿದೆ. ಇದು ಸುದೀರ್ಘ ಪ್ರಯಾಣವಾಗಿರಲಿದೆ' ಎಂದಿದ್ದಾರೆ.
ಸಂಜಯ್ ದತ್ ಆರೋಗ್ಯದ ಬಗ್ಗೆ ಊಹಾಪೋಹಗಳನ್ನು ನಿಲ್ಲಿಸಿ ಹಾಗೂ ವೈದ್ಯರು ಅವರ ಕರ್ತವ್ಯ ನಿರ್ವಹಿಸಲು ಬಿಡಿ ಎಂದು ಕುಟುಂಬ ಮನವಿ ಮಾಡಿದೆ.
'ಸಂಜು ಆರೋಗ್ಯದ ಬಗ್ಗೆ ಆಗಾಗ್ಗೆ ನಿಮಗೆ ಮಾಹಿತಿ ನೀಡುತ್ತವೆ. ಸಂಜು ನನ್ನ ಪತಿ ಮತ್ತು ನಮ್ಮ ಮಕ್ಕಳಿಗೆ ತಂದೆಯಷ್ಟೇ ಅಲ್ಲ, ಅಂಜು ಮತ್ತು ಪ್ರಿಯಾಗೂ ಸಹ ತಂದೆಯ ಸ್ಥಾನದಲ್ಲಿದ್ದಾರೆ' ಎಂದು ಮಾನ್ಯತಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.