ADVERTISEMENT

ನಟಿ ಶೆಫಾಲಿ ಸಾವಿಗೆ ಏನು ಕಾರಣ? ವೈದ್ಯರು ಹೇಳಿದ್ದಿಷ್ಟು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2025, 5:07 IST
Last Updated 30 ಜೂನ್ 2025, 5:07 IST
   

ಮುಂಬೈ: ಬಾಲಿವುಡ್ ನಟಿ ಶೆಫಾಲಿ ಜರಿವಾಲಾ ಅವರ ಸಾವಿಗೆ ರಕ್ತದೊತ್ತಡದಲ್ಲಿ ಹಠಾತ್ ಕುಸಿತವೇ ಕಾರಣವಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ನಟಿಯ ಸಾವಿನಲ್ಲಿ ಯಾವುದೇ ಸಂಶಯಾತ್ಮಕ ಅಂಶಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಪ್ರಕಾರ, 42 ವರ್ಷದ ನಟಿ ಶುಕ್ರವಾರ ರಾತ್ರಿ ತಮ್ಮ ನಿವಾಸದಲ್ಲಿ ಕುಸಿದು ಬಿದ್ದರು. ಆಗ ಅವರ ಪತಿ, ಕಿರುತೆರೆ ನಟ ಪರಾಗ್ ತ್ಯಾಗಿ ಅವರನ್ನು ಅಂಧೇರಿಯ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಅವರಿಗೆ ಹೃದಯಾಘಾತವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿದ್ದು, ನಂತರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜುಹುವಿನ ಆರ್.ಎನ್. ಕೂಪರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ADVERTISEMENT

ಶೆಫಾಲಿ ಜರಿವಾಲಾ ಅವರ ಸಾವಿಗೆ ಅವರ ರಕ್ತದೊತ್ತಡದ ಮಟ್ಟದಲ್ಲಿ ಹಠಾತ್ ಕುಸಿತವೇ ಕಾರಣವಿರಬಹುದು ಎಂದು ಕೂಪರ್ ಆಸ್ಪತ್ರೆಯ ವೈದ್ಯರು ಶಂಕಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಸತ್ಯನಾರಾಯಣ ಪೂಜೆಗಾಗಿ ನಟಿ ಉಪವಾಸದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ನಿವಾಸದಲ್ಲಿ ಪಂಚನಾಮ ಮಾಡುವಾಗ ವಯಸ್ಸಾಗುವುದನ್ನು ತಡೆಯುವ ಮಾತ್ರೆಗಳು, ಚರ್ಮದ ಹೊಳಪು ಮಾತ್ರೆಗಳು ಮತ್ತು ವಿಟಮಿನ್ ಮಾತ್ರೆಗಳನ್ನು ಹೊಂದಿರುವ ಎರಡು ಪೆಟ್ಟಿಗೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೈದ್ಯರ ಜೊತೆ ಸಮಾಲೋಚಿಸದೆ ಅವರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ನಟಿಯ ಕುಟುಂಬ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.