ವಿಕ್ರಾಂತ್ ಮಾಸ್ಸಿ
ಬೆಂಗಳೂರು: ‘12th ಫೇಲ್’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ನಟ ವಿಕ್ರಾಂತ್ ಮಾಸ್ಸಿ, ತಮ್ಮ 37ನೇ ವಯಸ್ಸಿನಲ್ಲಿ ನಟನೆಗೆ ವಿದಾಯ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಕಳೆದ ಕೆಲವು ವರ್ಷಗಳು ನನ್ನ ಜೀವನದ ಅತ್ಯುತ್ತಮ ವರ್ಷಗಳಾಗಿದ್ದವು. ಈ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಆದರೆ, ಮನೆಗೆ ಹಿಂದಿರುಗಲು ಇದು ಸೂಕ್ತ ಸಮಯವಾಗಿದೆ. ಒಬ್ಬ ತಂದೆಯಾಗಿ, ಗಂಡನಾಗಿ, ಮಗನಾಗಿ, ನಟನಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.
‘2025ರಲ್ಲಿ ಕೊನೆಯದಾಗಿ ಪರಸ್ಪರ ಭೇಟಿಯಾಗೋಣ. ಎರಡು ಸಿನಿಮಾಗಳು ಮತ್ತು ಸಾಕಷ್ಟು ನೆನಪುಗಳು ನನ್ನೊಂದಿಗಿವೆ’ ಎಂದು ಹೇಳಿದ್ದಾರೆ.
ಕಿರುತೆರೆ ಮೂಲಕ ನಟನೆಗೆ ಪದಾರ್ಪಣೆ ಮಾಡಿದ್ದ ವಿಕ್ರಾಂತ್, ‘ಬಾಲಿಕಾ ವಧು’, ‘ಕುಬೂಲ್ ಹೈ’ ಸೇರಿದಂತೆ ಹಲವು ಜನಪ್ರಿಯ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. 2013ರಲ್ಲಿ ‘ಲೂಟೆರಾ’ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಮೊದಮೊದಲು ಸಣ್ಣ ಪಾತ್ರಗಳ ಮೂಲಕ ತಮ್ಮ ನಟನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದ ವಿಕ್ರಾಂತ್ ಅವರಿಗೆ 2023ರಲ್ಲಿ ಅದೃಷ್ಠ ಖುಲಾಯಿಸಿತು. ಆ ವರ್ಷ ತೆರೆಕಂಡ ‘12th ಫೇಲ್’ ಅವರಿಗೆ ಭಾರಿ ಯಶಸ್ಸು ತಂದುಕೊಟ್ಟಿತ್ತು.
ಇತ್ತೀಚೆಗೆ ನಟಿಸಿದ್ದ ‘ದಿ ಸಾಬರಮತಿ ರೀಪೋರ್ಟ್’ ಸಿನಿಮಾ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ ಹಲವು ವೆಬ್ ಸರಣಿಗಳಲ್ಲಿಯೂ ನಟಿಸಿ ಸೈ ಎನಿಕೊಂಡಿದ್ದರು.
ಪ್ರತಿಭಾವಂತ ನಟ ನಿವೃತ್ತಿ ಘೋಷಿಸಿರುವುದಕ್ಕೆ ಹಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ‘ಇನ್ನಷ್ಟು ವರ್ಷಗಳು ನಿಮ್ಮನ್ನು ಬೆಳ್ಳಿ ಪರದೆ ಮೇಲೆ ನೋಡುವ ಆಸೆಯಿತ್ತು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.