ಖ್ಯಾತ ನಟ, ದಿವಂಗತ ಸಾಹಸಸಿಂಹ ವಿಷ್ಣುವರ್ಧನ್ ಅವರ ಪತ್ರಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳಿಗೆ ನಟರಾದ ಕಿಚ್ಚ ಸುದೀಪ್ ಹಾಗೂ ದರ್ಶನ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಷ್ಣು ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಈ ಘಟನೆಗೆ ಸಂಬಂಧಿಸಿ ವಿಷ್ಣು ಅಭಿಮಾನಿಗಳು ಆನ್‌ಲೈನ್ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ. ಕನ್ನಡದ ಖ್ಯಾತ ನಟ–ನಟಿಯರು ಈ ಘಟನೆಯನ್ನು ಖಂಡಿಸಿದ್ದಾರೆ. ಸುದೀಪ್ ಹಾಗೂ ದರ್ಶನ್ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಾಗೂ ಸ್ಟೇಟಸ್ ಹಂಚಿಕೊಂಡಿದ್ದಾರೆ.
ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ಕಿಚ್ಚ ಸುದೀಪ್ ‘ವಿಷ್ಣು ಸರ್ ಅಭಿಮಾನಿಯಾಗಿ ನಾನು ಏನು ಹೇಳಲು ಬಯಸುತ್ತೇನೆ ಎಂದರೆ ದಯವಿಟ್ಟು ಸಿಕ್ಕಿ ಹಾಕಿಕೊಳ್ಳಬೇಡಿ. ಒಂದು ವೇಳೆ ನೀವು ಸಿಕ್ಕಿಹಾಕಿಕೊಂಡರೆ ವಿಷ್ಣು ಅವರ ಅಭಿಮಾನಿಗಳು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ತುಂಬಾ ಹೀನಾಯವಾಗಿ ಹೊಡೆದು ಹಾಕುತ್ತಾರೆ. ನೀವು ಪ್ರತಿಮೆ ಒಡೆದು ಹಾಕಿರುವ ಉದ್ದೇಶ ಅರ್ಥವಾಗೊಲ್ಲ, ಮನುಷ್ಯರಾದವರಿಗೆ ಅರ್ಥ ಆಗಲು ಸಾಧ್ಯವಿಲ್ಲ. ಅಂತಹ ಹೀನಾಯ ಕೆಲಸದ ಬಗ್ಗೆ ಬಾಯಿಂದ ಹೇಳಲು ಸಾಧ್ಯವಿಲ್ಲ. ಸಿಕ್ಕಿ ಹಾಕಿಕೊಳ್ಳದೇ ಇರುವ ಹಾಗೇ ನೋಡಿಕೊಳ್ಳಿ. ನಿಮ್ಮ ಹೆಸರು ಗೊತ್ತಾದ ದಿನ ದಯವಿಟ್ಟು ದೇಶಬಿಟ್ಟು ಓಡಿ ಹೋಗಿ. ಇದು ನಾನು ನಿಮಗೆ ಕೊಡುತ್ತಿರುವ ಎಚ್ಚರಿಕೆ’ ಎಂದಿದ್ದಾರೆ.
‘ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸುವ, ಆರಾಧಿಸುವ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸಸಿಂಹ ಡಾ. ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಯಾರೂ ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತಹ ದುರ್ಷ್ಕಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ಇಂತಹ ಹೀನ ಕೃತ್ಯಗಳಿಗೆ ಕೈ ಜೋಡಿಸುವ ವ್ಯಕ್ತಿಗಳಿಗೆ ಅಭಿಮಾನಿಗಳೇ ತಕ್ಕ ಶಾಸ್ತಿ ಮಾಡುತ್ತಾರೆ’ ಎಂದು ನಟ ದರ್ಶನ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.