ADVERTISEMENT

ಕನ್ನಡದ 'ಯೂ-ಟರ್ನ್' ಹಿಂದಿಗೆ ರಿಮೇಕ್: ನಾಯಕಿಯನ್ನು ಘೋಷಿಸಿದ ಏಕ್ತಾ ಕಪೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜುಲೈ 2021, 10:47 IST
Last Updated 5 ಜುಲೈ 2021, 10:47 IST
ನಿರ್ಮಾಪಕಿ ಏಕ್ತಾ ಕಪೂರ್
ನಿರ್ಮಾಪಕಿ ಏಕ್ತಾ ಕಪೂರ್   

ಮುಂಬೈ: 2016ರಲ್ಲಿ ಪವನ್ ಕುಮಾರ್ ನಿರ್ದೇಶನದ ಕನ್ನಡ ಥ್ರಿಲ್ಲರ್ ನಿನಿಮಾ ಯು- ಟರ್ನ್‌ ಹಿಂದಿಯಲ್ಲಿ ರೀಮೇಕ್ ಆಗುತ್ತಿರುವುದಾಗಿ ಈ ಹಿಂದೆಯೇ ಪವನ್ ಕುಮಾರ್ ತಿಳಿಸಿದ್ದರು. ಇದೀಗ ಯು-ಟರ್ನ್ ಸಿನಿಮಾವನ್ನು ಹಿಂದಿಯಲ್ಲಿ ರೀಮೇಕ್ ಮಾಡುತ್ತಿರುವುದಾಗಿ ನಿರ್ಮಾಪಕಿ ಏಕ್ತಾ ಕಪೂರ್ ಸೋಮವಾರ ಪ್ರಕಟಿಸಿದ್ದಾರೆ.

ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ನಿರ್ವಹಿಸಿದ್ದ ಚಿತ್ರದ ಮುಖ್ಯ ಪಾತ್ರದಲ್ಲಿ 'ಜವಾನಿ ಜಾನೇಮನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ನಟಿ ಅಲಾಯ ಎಫ್ ಅವರು ಮುಂಬರುವ ಹಿಂದಿ ರೀಮೇಕ್‌ನಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ ಚೊಚ್ಚಲ ನಿರ್ದೇಶಕ ಆರಿಫ್ ಖಾನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಈ ಚಿತ್ರವನ್ನು 2018 ರಲ್ಲಿ ತೆಲುಗಿನಲ್ಲಿ ರೀಮೇಕ್ ಮಾಡಲಾಗಿದ್ದು, ಸಮಂತಾ ಅಕ್ಕಿನೇನಿ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು ಬಂಗಾಳಿ, ಮಲಯಾಳಂ ಮತ್ತು ತಮಿಳು ಆವೃತ್ತಿಯೂ ಇದೆ.

ADVERTISEMENT

'ಯು- ಟರ್ನ್' ಸಿನಿಮಾವನ್ನು ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ನೇತೃತ್ವದ ಹೊಸ ವಿಭಾಗ ಕಲ್ಟ್ ಮೂವೀಸ್ ನಿರ್ಮಿಸಲಿದೆ. ಜುಲೈ 6 ರಂದು ಚಿತ್ರ ಸೆಟ್ಟೇರಲಿದ್ದು, ಅನುರಾಗ್ ಕಶ್ಯಪ್ ಅವರ ದೋಬಾರಾ ಮತ್ತು ದಿಬಾಕರ್ ಬ್ಯಾನರ್ಜಿ ಅವರ ಎಲ್ಎಸ್‌ಡಿ 2 ನಂತರ ಕಲ್ಟ್ ಮೂವೀಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರ ಇದಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಏಕ್ತಾ ಕಪೂರ್, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಆಗಿ ಪ್ರಶಸ್ತಿಗಳನ್ನು ದೋಚಿದ್ದ ಯು-ಟರ್ನ್ ಅನ್ನು ಹಿಂದಿಗೆ ರೀಮೇಕ್ ಮಾಡಿಕೊಳ್ಳುತ್ತಿರುವುದಕ್ಕೆ ಉತ್ಸುಕಳಾಗಿದ್ದೇನೆ. ಜೀವನದಲ್ಲಿ ಎಲ್ಲಿಯೂ ಶಾರ್ಟ್‌ ಕಟ್ ಇರುವುದಿಲ್ಲ. ಆದರೆ ಕೆಲವೊಮ್ಮೆ ನಮ್ಮ ಪ್ರಯಾಣದ ಗುರಿಯ ಬದಲಾವಣೆಗಾಗಿ ನಿಯಮಗಳನ್ನು ಮುರಿದು ಮತ್ತು ಯು-ಟರ್ನ್ ತೆಗೆದುಕೊಳ್ಳಬೇಕಾಗುತ್ತದೆ' ಎಂದಿದ್ದಾರೆ.

'ಆಲಯ ಅವರಿಗೆ ಸ್ವಯಂ ಭರವಸೆ ಮೂಡಿಸಬಲ್ಲ ಗುಣವಿದೆ, ಅದು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಸಹಕಾರಿ ಎಂಬುದನ್ನು ನಾನು ನಂಬುತ್ತೇನೆ. ಯು-ಟರ್ನ್ ನಿಮ್ಮನ್ನು ತಿರುವುಗಳೊಡನೆ ಸವಾರಿ ಮಾಡಿಸುತ್ತದೆ. ಭರ್ಜರಿ ಉತ್ಸಾಹವನ್ನು ತರುತ್ತದೆ. ಅಲಾಯ ಅವರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಲು ತುಂಬಾ ಸಂತೋಷವಾಗಿದೆ' ಎಂದು ಏಕ್ತಾ ಕಪೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಲಾಯ ಎಫ್, ನನ್ನ ವೃತ್ತಿಜೀವನದ ಆರಂಭದಲ್ಲಿ, ವಿಶೇಷವಾಗಿ ಅಂತಹ ಆಸಕ್ತಿದಾಯಕ ಸಿನಿಮಾಗಾಗಿ ಏಕ್ತಾ ಮೇಡಂ ಅವರೊಂದಿಗೆ ಕೆಲಸ ಮಾಡಲು ಸಿಕ್ಕಿರುವ ಅತ್ಯಂತ ರೋಮಾಂಚಕಾರಿ ಅವಕಾಶವಾಗಿದೆ. ಅಂತಹ ಆಸಕ್ತಿದಾಯಕ ಕಥೆಯನ್ನು ಮುನ್ನಡೆಸುವ ಕಾರ್ಯಕ್ಕೆ ನಾನು ಜವಾಬ್ದಾರಳಾಗಿದ್ದೇನೆ ಮತ್ತು ಈ ಪ್ರಯಾಣವನ್ನು ಪ್ರಾರಂಭಿಸಲು ನಾನು ಸಂಪೂರ್ಣವಾಗಿ ಸಂತೋಷ ಪಡುತ್ತೇನೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.