ನಯನತಾರಾ
ನವದೆಹಲಿ: ‘ಇನ್ನು ಮುಂದೆ ನನ್ನನ್ನು ‘ಲೇಡಿ ಸೂಪರ್‌ಸ್ಟಾರ್’ ಎಂದು ಕರೆಯಬೇಡಿ’ ಎಂದು ತಮಿಳು ನಟಿ ನಯನತಾರಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ನಯನತಾರಾ ಯಾವಾಗಲೂ ನಯನತಾರಾ ಆಗಿಯೇ ಇರುತ್ತಾರೆ’ ಎಂದಿದ್ದಾರೆ.
ಮಾಧ್ಯಮ ಮತ್ತು ಅಭಿಮಾನಿಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ‘ಬಿರುದುಗಳು, ಪುರಸ್ಕಾರಗಳು ಅಮೂಲ್ಯವಾದವು. ಆದರೆ ಕೆಲವೊಮ್ಮೆ ಅವು ಕಲಾವಿದರನ್ನು ಕಲೆಯಿಂದ ದೂರವಿಡುತ್ತವೆ ಎಂದ ಅವರು, ‘ಲೇಡಿ ಸೂಪರ್‌ಸ್ಟಾರ್’ ಎನ್ನುವ ಹೆಸರನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.
‘ನಯನತಾರಾ ಎನ್ನುವ ಹೆಸರು ನನ್ನ ಹೃದಯಕ್ಕೆ ಹತ್ತಿರವಾದುದು. ಈ ಹೆಸರು ನಟಿಯಾಗಿ ಮಾತ್ರವಲ್ಲದೆ ನನ್ನನ್ನು ವೈಯಕ್ತಿಕವಾಗಿ ಗುರುತಿಸುವಂತೆ ಮಾಡುತ್ತದೆ. ಭವಿಷ್ಯ ಅನಿರೀಕ್ಷಿತವಾಗಿದ್ದರೂ, ನಿಮ್ಮ (ಅಭಿಮಾನಿಗಳ) ನಿರಂತರ ಬೆಂಬಲ ನನಗೆ ಸಂತೋಷ ನೀಡುತ್ತದೆ. ನಿಮ್ಮನ್ನು ರಂಜಿಸಲು ನನ್ನ ಶ್ರಮವೂ ಹೀಗೆಯೇ ಇರಲಿದೆ. ಸಿನಿಮಾ ನಮ್ಮನ್ನು ಒಗ್ಗಟ್ಟಿನಿಂದ ಇಡುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಶ್ರೀ ರಾಮ ರಾಜ್ಯಮ್, ಅನಾಮಿಕ, ಚಂದ್ರಮುಖಿ, ಘಜನಿ, ಜವಾನ್ ಸೇರಿ ಹಲವು ಹಿಟ್ ಚಿತ್ರಗಳನ್ನು ನಯನತಾರಾ ನೀಡಿದ್ದಾರೆ.
ನಟಿಯ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್ ಎಂದಾಗಿತ್ತು. ಅವರ ಮೊದಲ ಚಿತ್ರ ‘ಮನಸ್ಸಿನಕ್ಕರೆ’ (2003) ನಿರ್ದೇಶಕ ಸತ್ಯನ್ ಅಂತಿಕಾಡ್ ಅವರು ಅವರಿಗೆ ‘ನಯನತಾರಾ’ ಎಂದು ನಾಮಕರಣ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.