
ಲಾಸ್ ಏಂಜಲೀಸ್: ‘ಚಿತ್ರ ನಿರ್ಮಾಣದಲ್ಲಿ ಕೃತಕ ಬುದ್ಧಿಮತ್ತೆಯು ನಟರನ್ನೇ ಬದಲಿಸುವುದಾದರೆ ಅದು ಭಯಾನಕವಲ್ಲದೆ ಬೇರೇನೂ ಅಲ್ಲ’ ಎಂದು ಚಿತ್ರ ತಯಾರಕ ಜೇಮ್ಸ್ ಕ್ಯಾಮರೂನ್ ಕಳವಳ ವ್ಯಕ್ತಪಡಿಸಿದ್ದಾರೆ.
‘ಟೈಟಾನಿಕ್’, ‘ಅವತಾರ್ ’ ಜನಪ್ರಿಯ ಚಿತ್ರಗಳ ತಯಾರಕರಾದ ಕ್ಯಾಮರೂನ್ ಅವರು ನಟರೊಂದಿಗೆ ಕೆಲಸ ಮಾಡಲು ಇಷ್ಟಪಡುವುದಾಗಿ ಮತ್ತು ಜನರೇಟಿವ್ ಎಐ ಪಾತ್ರಗಳು ಬೇಡವೆಂದು ಹೇಳಿದ್ದಾರೆ.
ಸಿಬಿಎಸ್ ಸಂಡೇ ಮಾರ್ನಿಂಗ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಇಂದು, ತಂತ್ರಜ್ಞಾನದ ಮತ್ತೊಂದು ತುದಿಯಲ್ಲಿದ್ದೇವೆ. ಜನರೇಟಿವ್ ಎಐಗಳು ಎಲ್ಲೆಡೆ ಆವರಿಸಿವೆ. ಪಾತ್ರಗಳನ್ನು ಅವೇ ಸೃಷ್ಟಿಸುತ್ತವೆ. ಅವರನ್ನು ನಟರನ್ನಾಗಿ ಮಾಡುತ್ತವೆ. ಸಂಭಾಷಣೆಯನ್ನು ನೀಡಿ ಅವುಗಳಿಂದ ತಮಗೆ ಬೇಕಾದಂತ ನಟನೆಯನ್ನು ಹೊರ ಹೆಕ್ಕುತ್ತವೆ’ ಎಂದಿದ್ದಾರೆ.
‘ನನ್ನ ಕೆಲಸದ ಬಗ್ಗೆ ನಾನೇನು ಹೆಮ್ಮೆ ಪಡುತ್ತಿದ್ದೇನೋ, ಅದನ್ನು ಕಂಪ್ಯೂಟರ್ ಮಾಡುವುದನ್ನು ನಾನು ಇಷ್ಟಪಡುವುದಿಲ್ಲ. ನಟರ ಸ್ಥಾನವನ್ನು ಯಂತ್ರಗಳು ತುಂಬುವುದು ಸರಿಯಲ್ಲ. ತಂತ್ರಜ್ಞಾನದ ಬಳಕೆಯನ್ನು ದುಬಾರಿ ವಿಎಫ್‌ಎಕ್ಸ್ ಅನ್ನು ಅಗ್ಗಗೊಳಿಸಲು ಬಳಸಿಕೊಳ್ಳಬಹುದಷ್ಟೇ’ ಎಂದು ಅಭಿಪ್ರಾಯಪಟ್ಟಿದ್ಧಾರೆ.
‘ಕಾಲ್ಪನಿಕ ಚಿತ್ರಗಳು, ಅದ್ಭುತ ಚಿತ್ರಗಳು, ವಿಜ್ಞಾನ ಆಧಾರಿತ ಕಾಲ್ಪನಿಕ ಚಿತ್ರಗಳು ನಶಿಸಲು ಆರಂಭಿಸಿವೆ. ಇವುಗಳಿಗೆ ತಗಲುತ್ತಿದ್ದ ದುಬಾರಿ ವೆಚ್ಚವೇ ಇದಕ್ಕೆ ಕಾರಣ. ಮತ್ತೊಂದೆಡೆ ಸ್ಟುಡಿಯೊಗಳು ಆ ಹಣವನ್ನು ಬ್ಲೂ ಚಿಪ್ ಐಪಿಗಳಿಗೆ ಖರ್ಚು ಮಾಡುತ್ತಿವೆ. ಅಂದರೆ, ಅವತಾರ್ ಅಂತ ಕಾಲ್ಪನಿಕ ಚಿತ್ರಕ್ಕೆ ಆ ಪರಿಸರ ಸಿಗದು. ಊಹಿಸಲು ಸಾಧ್ಯವಿಲ್ಲದ ಆ ಕಾಲ್ಪನಿಕ ಜಗತ್ತನ್ನು ಹೊಸ ಐಪಿ ಮೂಲಕ ಸಿದ್ಧಪಡಿಸಲಾಗಿದೆ’ ಎಂದು ಕ್ಯಾಮರೂನ್ ಹೇಳಿದ್ದಾರೆ.
ಕ್ಯಾಮರೂನ್ ಅವರ ಮುಂದಿನ ಚಿತ್ರ ‘ಅವತಾರ್: ಫೈರ್ ಅಂಡ್ ಆ್ಯಷ್’ ಚಿತ್ರವು ಡಿ. 19ರಂದು ತೆರೆ ಕಾಣುತ್ತಿದೆ. 2009ರ ಅವತಾರ್ ಮತ್ತು 2022ರಲ್ಲಿ ಬಿಡುಗಡೆಯಾದ ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರಗಳನ್ನು ಕ್ಯಾಮರೂನ್ ನಿರ್ದೇಶಿಸಿದ್ದರು.
ಈ ಚಿತ್ರಗಳಲ್ಲಿ ಸ್ಯಾಮ್ ವರ್ತಿಂಗ್ಟನ್, ಜೋ ಸಲ್ಡಾನಾ, ಸಿಗೊರ್ನಿ ವೀವರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.