ADVERTISEMENT

ಅಕ್ಷಯ್ ಕುಮಾರ್ ಚಿತ್ರ ‘ಮಿಷನ್‌ ರಾಣಿಗಂಜ್‌‘ನಲ್ಲಿದ್ದ ಇಂಡಿಯಾ ಹೆಸರು ಈಗ ಭಾರತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2023, 11:04 IST
Last Updated 7 ಸೆಪ್ಟೆಂಬರ್ 2023, 11:04 IST
<div class="paragraphs"><p>ಅಕ್ಷಯ್ ಕುಮಾರ್ ಅವರ ಇನ್‌ಸ್ಟಾಗ್ರಾಂ ಖಾತೆಯ ಚಿತ್ರ</p></div>
   

ಅಕ್ಷಯ್ ಕುಮಾರ್ ಅವರ ಇನ್‌ಸ್ಟಾಗ್ರಾಂ ಖಾತೆಯ ಚಿತ್ರ

ನವದೆಹಲಿ: ಗಣಿಯೊಳಗೆ ಸಿಲುಕಿದ 65 ಕಾರ್ಮಿಕರ ರಕ್ಷಣೆಯ ಕಥೆಯುಳ್ಳ ಅಕ್ಷಯ್‌ ಕುಮಾರ್ ನಟನೆಯ ‘ಮಿಷನ್ ರಾಣಿಗಂಜ್: ದಿ ಗ್ರೇಟ್ ಇಂಡಿಯಾ ರೆಸ್ಕ್ಯೂ’ ಚಿತ್ರದಲ್ಲಿದ್ದ ‘ಇಂಡಿಯಾ’ ಪದವನ್ನು ಈಗ ‘ಭಾರತ್’ ಎಂದು ಬದಲಿಸಿರುವ ಸಂಗತಿ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಜಿ20 ಶೃಂಗದಲ್ಲಿ ಪಾಲ್ಗೊಳ್ಳುವ ವಿಶ್ವದ ನಾಯಕರಿಗೆ ರಾಷ್ಟ್ರಪತಿ ನೀಡಿರುವ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಮುದ್ರಿಸಿದ ನಂತರ ಇಂಡಿಯಾ ಹಾಗೂ ಭಾರತ್‌ ಎಂಬ ಹೆಸರಿನ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಚರ್ಚೆಗೆ ಮಿಷನ್ ರಾಣಿಗಂಜ್ ಚಿತ್ರ ಈಗ ಹೊಸ ಸೇರ್ಪಡೆ.

ADVERTISEMENT

ಹೆಸರು ಬದಲಾವಣೆ ಕುರಿತು ಅಕ್ಷಯ್ ಕುಮಾರ್ ಅವರು ತಮ್ಮ ಮೈಕ್ರೊ ಬ್ಲಾಗಿಂಗ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಟ್ವೀಟ್‌ ಕುರಿತು ವ್ಯಾಪಕ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. ಅಕ್ಷಯ್ ಕುಮಾರ್ ಅವರು ತಮ್ಮ ಹಿಂದಿನ ಟ್ವೀಟ್‌ನಲ್ಲಿ ಚಿತ್ರದ ಹೆಸರಿನಲ್ಲಿದ್ದ ‘ಇಂಡಿಯಾ’ವನ್ನು ಬಳಸಿದ್ದರು. ಆದರೆ ಆ ಟ್ವೀಟ್ ಈಗ ಎಲ್ಲಿ ಹೋಯಿತು? ಎಂದು ಕೆಲವರು ಪ್ರಶ್ನಿಸಿದ್ದಾರೆ.

ಹಾಗಿದ್ದರೆ ನಿಮ್ಮ ಮುಂದಿನ ಚಿತ್ರವೂ ’ಭಾರತ್‌’ ಆಗಿರುತ್ತದೆಯೇ ಎಂದು ಮತ್ತೊಬ್ಬರು ಕೇಳಿದ್ದಾರೆ. ಕಳೆದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತದ ಪೌರತ್ವ ಪಡೆದಿರುವ ಅಕ್ಷಯ್ ಕುಮಾರ್ ಅವರ ಕೆನಡಾ ಪೌರತ್ವದ ಕುರಿತೂ ಎಕ್ಸ್ ವೇದಿಕೆಯಲ್ಲಿ ಚರ್ಚೆಗಳು ನಡೆದಿವೆ.

ಮಿಷನ್ ರಾಣಿಗಂಜ್‌ ಚಿತ್ರವು ಕಲ್ಲಿದ್ದಲ್ಲಿ ಗಣಿ ಕುರಿತಾಗಿದ್ದು, ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್‌ ಎಂಬುವವರ ಜೀವನಾಧಾರಿತವಾಗಿದೆ. 1989ರಲ್ಲಿ ಕಲ್ಲಿದ್ದಲ್ಲು ಗಣಿಯಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದರು. ಚಿತ್ರದಲ್ಲಿ ಪರಿಣೀತಿ ಛೋಪ್ರಾ, ಕುಮುದ್ ಮಿಶ್ರಾ, ಪವನ್ ಮಲ್ಹೋತ್ರಾ, ರವಿ ಕಿಶನ್, ವರುಣ್ ಬಡೋಲಾ, ದಿಬ್ಯೇಂದು ಭಟ್ಟಾಚಾರ್ಯ, ರಾಜೇಶ್ ಶರ್ಮಾ, ವಿಜೇಂದ್ರ ಸೆಕ್ಸೆನಾ ನಟಿಸಿದ್ದಾರೆ. ಟಿನು ಸುರೇಶ್ ದೇಸಾಯಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.