ADVERTISEMENT

ಕಂಠೀರವ ಸ್ಟುಡಿಯೊದಲ್ಲಿ 4 ಮೀಟರ್‌ ಎತ್ತರದ ಅಂಬರೀಷ್‌ ಪ್ರತಿಮೆ

₹12 ಕೋಟಿ ವೆಚ್ಚದಲ್ಲಿ ಅಂಬರೀಷ್‌ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 12:47 IST
Last Updated 27 ಫೆಬ್ರುವರಿ 2022, 12:47 IST
   

ಬೆಂಗಳೂರು: ಇಲ್ಲಿನ ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ನಟ ದಿವಂಗತ ಅಂಬರೀಷ್‌ ಅವರ ಸಮಾಧಿ ಸ್ಥಳದಲ್ಲೇಅಂಬರೀಷ್‌ ಅವರ ಕಂಚಿನ ಪ್ರತಿಮೆಯನ್ನೊಳಗೊಂಡ ಆಕರ್ಷಕವಾದ, ಅದ್ಧೂರಿ ಸ್ಮಾರಕವು ₹12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ನಟಿ, ಸಂಸದೆ ಸುಮಲತಾ ಅಂಬರೀಷ್‌, ನಟರಾದ ದೊಡ್ಡಣ್ಣ, ದರ್ಶನ್‌, ಅಭಿಷೇಕ್‌ ಅಂಬರೀಷ್‌ ಸಮ್ಮುಖದಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಶಂಕುಸ್ಥಾಪನೆ ಮಾಡಿದರು. ಸಮಾಧಿಯನ್ನು ಒಳಗೊಂಡಂತೆ ಸುತ್ತಮುತ್ತಲಿನ ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. ಸಮಾಧಿಯು ಹೊಸ ರೂಪ ಪಡೆಯಲಿದ್ದು, ಅದರ ಮುಂಭಾಗದಲ್ಲಿ ಸುಮಾರು 12 ಅಡಿ ಎತ್ತರದ ವೇದಿಕೆಯ ಮೇಲೆ ಅಂಬರೀಷ್‌ ಅವರ ಸುಮಾರು 14 ಅಡಿ ಎತ್ತರದ ಕಂಚಿನ ಪ್ರತಿಮೆ, ಅದಕ್ಕೆ ಹೊಂದಿಕೊಂಡಂತೆ ಕಾರಂಜಿ ನಿರ್ಮಾಣವಾಗಲಿದೆ. ಇಳಿಜಾರಿನ ಮಾದರಿಯಲ್ಲಿ ಬಯಲು ರಂಗಮಂದಿರ, ಅದರ ಕೆಳಭಾಗದಲ್ಲಿ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅಂಬರೀಷ್‌ ಅವರ ಸಿನಿಮಾ ಪಯಣದ ಪೋಸ್ಟರ್‌, ಧ್ವನಿ ತುಣುಕು, ವಿಡಿಯೊಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.

ಅಂಬರೀಷ್‌ ಅವರ ಜೊತೆಗಿನ ಒಡನಾಟದ ದಿನಗಳನ್ನು ಮೆಲುಕು ಹಾಕಿದ ಬಸವರಾಜ ಬೊಮ್ಮಾಯಿ, ‘ನನ್ನ ಅಂಬರೀಷ್‌ ಸ್ನೇಹ 40 ವರ್ಷಕ್ಕಿಂತ ಅಧಿಕ. ನಾವು ನಾಲ್ಕೈದು ಜನ ಸ್ನೇಹಿತರು ಒಟ್ಟಿಗೆ ಓಡಾಡಿದ್ದೇವೆ, ಸಮಯ ಕಳೆದಿದ್ದೇವೆ, ಮಾಡಬೇಕಿದ್ದನ್ನು ಮಾಡಿದ್ದೇವೆ, ಮಾಡಬಾರದ್ದನ್ನೂ ಮಾಡಿದ್ದೇವೆ. ಅಂಬರೀಷ್‌ ಹೇಗಿದ್ದರು ಎಂದು ಎಲ್ಲರಿಗೂ ಗೊತ್ತಿದೆ. ಅವರು ತೆರೆದ ಪುಸ್ತಕ. ಎಂದೂ ಆತ್ಮಸಾಕ್ಷಿ ಬಿಟ್ಟು ಅವರು ಬದುಕಲಿಲ್ಲ. ಅಧಿಕಾರಕ್ಕೆ ಅಂಟಿಕೊಳ್ಳುವ ಗುಣ ಇರಲಿಲ್ಲ. ಅಧಿಕಾರ ಧಿಕ್ಕರಿಸಿಯೇ ರಾಜಕಾರಣ ಮಾಡಿದವರು. ಕಾವೇರಿ ವಿಚಾರದಲ್ಲಿ ರಾಜೀನಾಮೆ ನೀಡಿ ಕನ್ನಡ ನಾಡಿನ ಪರ ನಿಂತವರು. ಬಹಳಷ್ಟು ಜನ ಕಾವೇರಿ ಹೋರಾಟ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಇವರು ಯಾರೂ ಒಂದು ಕ್ಷಣ ಅಧಿಕಾರ ತ್ಯಾಗ ಮಾಡಲಿಲ್ಲ. ಅಂಬರೀಷ್‌ಗೆ ಕೃತಜ್ಞತೆ ಹೇಳುವ ಭಾಗ್ಯ ಸಿಕ್ಕಿದೆ. ಇದು ನನ್ನ ಪುಣ್ಯ’ ಎಂದರು.

ADVERTISEMENT

‘ಅಭಿಷೇಕ್‌ ಯಾವಾಗ ಅಂಬರೀಷ್‌ ಅವರ ಗುಣ, ಧರ್ಮಗಳಿಂದ ಮುನ್ನುಗ್ಗುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ. ಹೆಗಲಲ್ಲಿ ದೊಡ್ಡ ಜವಾಬ್ದಾರಿ ಇದೆ. ಅಭಿಷೇಕ್‌ ಖಂಡಿತಾ ಮಂಡ್ಯದ ಗಂಡಾಗುತ್ತಾರೆ’ ಎಂದು ಬೊಮ್ಮಾಯಿ ಹೇಳಿದರು.

‘ರಾಜಕೀಯದಲ್ಲೂ ನೋವು ಅನುಭವಿಸಿದ್ದರು’: ಸುಮಲತಾ ಮಾತನಾಡಿ, ‘ಅಂಬರೀಷ್‌ ರಾಜಕೀಯಕ್ಕೆ ಬಂದಿದ್ದು ಜನಕ್ಕೆ ಇನ್ನಷ್ಟು ಹತ್ತಿರವಾಗಲು. ರಾಜಕೀಯದಲ್ಲಿ ಅವರಿಗೆ ಶತ್ರುಗಳಿದ್ದರು. ತುಂಬಾ ನೋವನ್ನೂ ಅನುಭವಿಸಿದ್ದರು. ಆದರೆ ಸಾರ್ವಜನಿಕವಾಗಿ ಅಥವಾ ನನ್ನ ಬಳಿ ನೋವನ್ನು ಹೇಳಿಕೊಂಡಿರಲಿಲ್ಲ. ಅಂಥ ವ್ಯಕ್ತಿತ್ವ ಅವರದ್ದು. ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದರೂ ಯಾರ ಬಗ್ಗೆಯೂ ಅವರು ಕೆಟ್ಟ ಮಾತುಗಳನ್ನು ಆಡಿರಲಿಲ್ಲ’ ಎಂದರು.

‘ಸಿನಿಮಾ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಅಂಬರೀಷ್‌ ಅವರ ಕೊಡುಗೆ ಏನು ಎನ್ನುವುದು ಮುಂಬರುವ ತಲೆಮಾರಿಗೆ ತಿಳಿಯಬೇಕು. ಜಾತಿ, ಧರ್ಮ, ರಾಜಕೀಯ ಪಕ್ಷಕ್ಕೆ ಮೀರಿದ ವ್ಯಕ್ತಿತ್ವ ಅವರದ್ದು. ಇದನ್ನು ಶಾಶ್ವತವಾಗಿ ಉಳಿಸಿಕೊಳ್ಳಲು, ಮುಂಬರುವ ತಲೆಮಾರು ಅಂಬರೀಷ್‌ ಅವರನ್ನು ನೆನಪಿಸಿಕೊಳ್ಳಲು ಈ ಸ್ಮಾರಕ ನಿರ್ಮಾಣವಾಗುತ್ತಿದೆ’ ಎಂದರು.

ಡಾ. ಅಂಬರೀಷ್ ಪ್ರತಿಷ್ಠಾನ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸದ ಸದಾನಂದ ಗೌಡ, ಸಚಿವರಾದ ಆರ್. ಅಶೋಕ್, ಗೋಪಾಲಯ್ಯ, ಸಿ. ಎನ್. ಅಶ್ವತ್ಥ ನಾರಾಯಣ್, ಎಸ್. ಟಿ. ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.