ಗೀತಾ ಶಿವರಾಜ್ ಕುಮಾರ್, ಡಾ. ಮುರುಗೇಶ್ ಮನೋಹರನ್, ಮಧು ಬಂಗಾರಪ್ಪ
ಬೆಂಗಳೂರು: ಡಾ. ಶಿವರಾಜ್‌ಕುಮಾರ್ ಅವರ ಇತ್ತೀಚಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರು ಈಗ ಸ್ಥಿರ ಪರಿಸ್ಥಿತಿಯಲ್ಲಿ ಇದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯ ಡಾ. ಮುರುಗೇಶ್ ಮನೋಹರನ್ ಅವರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ವೇಳೆ ಮತ್ತು ಶಸ್ತ್ರಚಿಕಿತ್ಸೆ ನಂತರದ ಆರೈಕೆ ಸಮಯದಲ್ಲಿ ಡಾ. ಶಿವರಾಜ್‌ಕುಮಾರ್ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿತ್ತು ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಶಿವಣ್ಣ ಅವರು ವೈದ್ಯಕೀಯ ತೀವ್ರ ನಿಗಾದಲ್ಲಿದ್ದಾರೆ ಮತ್ತು ಪರಿಣತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ತಂಡದಿಂದ ಅತ್ಯುತ್ತಮ ಆರೈಕೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಚಿವ ಮಧು ಬಂಗಾರಪ್ಪ ಮಾತನಾಡಿ, ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಮಿತ್ರರು ಮತ್ತು ಮಾಧ್ಯಮಗಳು ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ ಎಂದು ಹೇಳಿದ್ದಾರೆ.
ಅವರ ಚೇತರಿಕೆ ಕುರಿತು ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು ಎಂದೂ ಹೇಳಿದ್ದಾರೆ.
ಈ ವೇಳೆ ಗೀತಾ ಶಿವರಾಜ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.