
ಈ ಹಿಂದೆ ‘ಅಮೃತಾಂಜನ್’ ಎಂಬ ಕಿರುಚಿತ್ರ ಮಾಡಿ ಗಮನ ಸೆಳೆದಿದ್ದ ತಂಡವೀಗ ‘ಅಮೃತ ಅಂಜನ್’ ಚಿತ್ರದೊಂದಿಗೆ ಮರಳಿದೆ. ಜ್ಯೋತಿ ರಾವ್ ಮೋಹಿತ್ ನಿರ್ದೇಶನದ ಚಿತ್ರ ಜ.30ರಂದು ತೆರೆಗೆ ಬರಲಿದೆ. ಚಿತ್ರದ ಹಾಡೊಂದು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
‘ನಾನು ಈ ಹಿಂದೆ ‘ಸೋಡಾ ಬುಡ್ಡಿ’ ಎಂಬ ಚಿತ್ರವನ್ನ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ಈ ಸಿನಿಮಾ ಆರಂಭಿಸುವುದಕ್ಕೆ ನನ್ನ ‘ಅಮೃತಾಂಜನ್’ ಕಿರುಚಿತ್ರವೇ ಕಾರಣ. ಈ ಚಿತ್ರದ ಶೀರ್ಷಿಕೆ ವಿಚಾರವಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ. ಹಾಗಾಗಿ ಅಮೃತ ಅಂಜನ್ ಎಂಬ ಹೆಸರಿನೊಂದಿಗೆ ಚಿತ್ರ ನಿರ್ಮಾಣ ಮಾಡಿದ್ದು, ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ. ಈ ಸಿನಿಮಾ ಪ್ರಚಾರಕ್ಕಾಗಿ ಸ್ಟಾರ್ ನಟರನ್ನು ಭೇಟಿ ಮಾಡಿದರೂ, ಯಾರೂ ಬೆಂಬಲಕ್ಕೆ ಬರಲಿಲ್ಲ. ನಮ್ಮ ತಂಡಕ್ಕೆ ಜಯಣ್ಣ ಫಿಲ್ಮ್ಸ್ ಸಾಥ್ ನೀಡಿದ್ದು, ಅವರ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು ನಿರ್ದೇಶಕ.
ಸುಧಾಕರ್ ಗೌಡ, ಗೌರವ ಶೆಟ್ಟಿ, ಪಾಯಲ್ ಚಂಗಪ್ಪ ಮುಖ್ಯಭೂಮಿಕೆಯಲ್ಲಿದ್ದಾರೆ. ನವೀನ್. ಡಿ.ಪಡೀಲ್ ತಂದೆಯಾಗಿ ಹಾಗೂ ಮಧುಮತಿ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.
‘ಕೆಲ ಸ್ಟಾರ್ ನಟರಿಗೆ ನಮ್ಮ ಸಿನಿಮಾಕ್ಕೆ ಪ್ರೋತ್ಸಾಹ ನೀಡುವಂತೆ ಕೇಳಿಕೊಂಡೆವು. ಆದರೆ ಒಪ್ಪಲಿಲ್ಲ. ಹೀಗಾಗಿ ಅವರನ್ನು ಬಲವಂತ ಮಾಡಲು ಸಾಧ್ಯವಿಲ್ಲ. ಸ್ಟಾರ್ ನಟರು ಪ್ರಚಾರ ಮಾಡಿದರೆ ಸಿನಿಮಾಕ್ಕೆ ಪ್ರಾರಂಭದಲ್ಲಿ ಸ್ವಲ್ಪ ಜನರ ಬರುತ್ತಾರೆ ಎಂಬ ಉದ್ದೇಶದಿಂದ ಅವರ ಬಳಿ ಸಹಾಯ ಕೇಳಿದ್ದು’ ಎಂದರು ಪಾಯಲ್.
ಕಾರ್ತಿಕ್ ರೂವಾರಿ, ಶ್ರೀ ಭವ್ಯ, ಪಲ್ಲವಿ ಪರ್ವ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿದ್ದಾರೆ. ಲೋಕೇಶ್ ನಾಗಪ್ಪ ಬಂಡವಾಳ ಹೂಡಿರುವ ಚಿತ್ರಕ್ಕೆ ಸುಮಂತ್ ಆಚಾರ್ಯ ಛಾಯಾಚಿತ್ರಗ್ರಹಣ, ಕಿರಣ್ ಕುಮಾರ್ ಸಂಕಲನ ಹಾಗೂ ರೋಹಿತ್ ಶೋವರ್ ಹಿನ್ನೆಲೆ ಸಂಗೀತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.