ADVERTISEMENT

‌ಅಮೆರಿಕದ ಬೋಸ್ಟನ್‌ ಚಿತ್ರೋತ್ಸವಕ್ಕೆ ‘ಅಮೃತಮತಿ’ ಸಿನಿಮಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 9:59 IST
Last Updated 12 ಸೆಪ್ಟೆಂಬರ್ 2020, 9:59 IST
‘ಅಮೃತಮತಿ’ ಚಿತ್ರದಲ್ಲಿ ಹರಿಪ್ರಿಯಾ
‘ಅಮೃತಮತಿ’ ಚಿತ್ರದಲ್ಲಿ ಹರಿಪ್ರಿಯಾ   

ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಸಿನಿಮಾವು ಅಮೆರಿಕದ ಬೋಸ್ಟನ್‌ ಅಂತರರಾಷ್ಟ್ರೀಯ(ಬಿಎಫ್‌ಎಫ್‌) ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

13ನೇ ಶತಮಾನದಲ್ಲಿ ಜನ್ನಕವಿ ಬರೆದಿರುವ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿ ಮರು ಸೃಷ್ಟಿಮಾಡಿರುವ ಚಿತ್ರ ಇದು. ಬರಗೂರು ಅವರೇ ಇದರ ಚಿತ್ರಕಥೆ ಮತ್ತು ಸಂಭಾಷಣೆಯ ನೊಗ ಹೊತ್ತಿದ್ದಾರೆ. ಜೊತೆಗೆ ಮೂರು ಹಾಡುಗಳನ್ನೂ ಬರೆದಿದ್ದು, ಎರಡು ಜನಪದ ಗೀತೆಗಳನ್ನು ಬಳಸಿಕೊಳ್ಳಲಾಗಿದೆ.

ಈಗಾಗಲೇ ‘ಅಮೃತಮತಿ’ಯು ನೋಯ್ಡಾ, ಆಸ್ಟ್ರಿಯಾ ಮತ್ತು ಅಟ್ಲಾಂಟ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ವಿಶ್ವದ ವಿವಿಧ ದೇಶದ ಸಿನಿಮಾಗಳ ಜೊತೆಗೆ ಭಾರತೀಯ ಹೊಸ ಸಿನಿಮಾಗಳಿಗೆ ಹೆಚ್ಚು ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬೋಸ್ಟನ್‌ ಚಿತ್ರೋತ್ಸವವನ್ನು ಇಂಡಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವ ಎಂಬ ಹೆಸರಿನಿಂದ ನಡೆಸಲಾಗುತ್ತಿದೆ.

ADVERTISEMENT

ನೋಯ್ಡಾ ಚಿತ್ರೋತ್ಸವದಲ್ಲಿ ಅಮೃತಮತಿಯ ಪಾತ್ರ ನಿರ್ವಹಣೆಗಾಗಿ ನಟಿ ಹರಿಪ್ರಿಯಾ ಉತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು.

ಇಂಚರ ಪುಟ್ಟಣ್ಣ ಪ್ರೊಡಕ್ಷನ್‌ನಡಿ ಇದಕ್ಕೆ ಬಂಡವಾಳ ಹೂಡಲಾಗಿದೆ. ಸುರೇಶ್‌ ಅರಸು ಸಂಕಲನ ನಿರ್ವಹಿಸಿದ್ದಾರೆ. ನಾಗರಾಜ ಆದವಾನಿ ಅವರ ಛಾಯಾಗ್ರಹಣವಿದೆ. ಶಮಿತಾ ಮಲ್ನಾಡ್‌ ಸಂಗೀತ ಸಂಯೋಜಿಸಿದ್ದಾರೆ. ಕಿಶೋರ್‌, ಸುಂದರರಾಜ್‌, ಪ್ರಮೀಳಾ ಜೋಷಾಯ್‌, ತಿಲಕ್‌, ವತ್ಸಲಾ ಮೋಹನ್‌, ಸುಪ್ರಿಯಾ ರಾವ್‌, ಅಂಬರೀಷ್‌ ಸಾರಾಗಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.